Kundapra.com ಕುಂದಾಪ್ರ ಡಾಟ್ ಕಾಂ

ಬಿ.ಬಿ.ಹೆಗ್ಡೆ ಕಾಲೇಜು: ಪೊಲೀಸರಿಂದ ಮಾಹಿತಿ ಕಾರ್ಯಾಗಾರ, ವಿದ್ಯಾರ್ಥಿಗಳೊಂದಿಗೆ ಸಂವಾದ

ಕುಂದಾಪುರ: ಇಲ್ಲಿನ ಡಾ| ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೊಲೀಸ್ ಇಲಾಖೆಯ ಕಾನೂನು, ನೀತಿ-ನಿಯಮಗಳ ಬಗೆಗೆ ಅರಿವು ಮೂಡಿಸಲು ಕುಂದಾಪುರ ಪೊಲೀಸರ ಸಾರಥ್ಯದಲ್ಲಿ ಮಾಹಿತಿ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಕುಂದಾಪುರ ವಲಯ ಉಪಅಧೀಕ್ಷಕ ಮಂಜುನಾಥ ಶೆಟ್ಟಿ ಮಾತನಾಡಿ, ಕುಂದಾಪುರ ನಗರದ ವಿವಿಧ ಶಾಲಾ ಕಾಲೇಜುಗಳಿಗೆ ಪ್ರತಿನಿತ್ಯ ಸುಮಾರು ಹತ್ತರಿಂದ ಹನ್ನೊಂದು ಸಾವಿರದ ತನಕ ವಿದ್ಯಾರ್ಥಿಗಳು ಬಂದು ಹೋಗುತ್ತಿದ್ದಾರೆ. ಈ ಸಮಯದಲ್ಲಿ ಟ್ರಾಫಿಕ್ ನಿಯಮಗಳನ್ನು ಅರಿತು ಅನುಸರಿಸಬೇಕಾದುದು ಪ್ರತಿಯೊಬ್ಬರ ಕರ್ತವ್ಯ ಎಂದರು.

ವಿದ್ಯಾರ್ಥಿಗಳು ಮದ್ಯಪಾನ ಮುಂತಾದ ದುಷ್ಚಟಗಳಿಂದ ಸಾಧ್ಯವಾದಷ್ಟು ದೂರವಿದ್ದು ಕಲಿಕೆಯಲ್ಲಿ ಉತ್ತಮವಾದ ಪ್ರಗತಿಯನ್ನು ತೋರುವತ್ತ ಗಮನಹರಿಸಬೇಕಿದೆ ಎಂದರು.

ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಬಿ. ಎಂ. ಸುಕುಮಾರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲೆ ಸೀಮಾ ಪಿ. ಶೆಟ್ಟಿ, ಕುಂದಾಪುರ ಠಾಣಾಧಿಕಾರಿ ನಾಸೀರ್ ಹುಸೇನ್, ಸಂಚಾರಿ ಪೊಲೀಸ್ ಠಾಣೆಯ ಎಸ್.ಐ.ಗಳಾದ ದೇವೆಂದ್ರ ಹಾಗೂ ಜಯ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಯಿತು. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಕುಂದಾಪುರ ಡಿವೈಎಸ್‌ಪಿ, ವೃತ್ತ ನಿರೀಕ್ಷಕರು ಉತ್ತರಿಸಿದರು. ಮಹಿಳಾ ಠಾಣಾಧಿಕಾರಿ ಸುಜಾತ ಅವರು ಪೋಕ್ಸೋ ಕಾಯಿದೆಯ ಬಗ್ಗೆ ಮಾಹಿತಿ ನೀಡಿದರು. ಕುಂದಾಪುರ ವೃತ್ತ ನಿರೀಕ್ಷಕ ದಿವಾಕರ ಪಿ.ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಚೇತನ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Exit mobile version