Kundapra.com ಕುಂದಾಪ್ರ ಡಾಟ್ ಕಾಂ

ಸೆ.27: ಕುಂದಾಪುರದಲ್ಲಿ ಆರೋಗ್ಯಕ್ಕಾಗಿ ಓಟ

ಕುಂದಾಪುರ: ವಿಶ್ವ ಹೃದಯ ದಿನದ ಅಂಗವಾಗಿ ಕುಂದಾಪುರದಲ್ಲಿ ಪ್ರಪ್ರಥಮ ಬಾರಿಗೆ ’ಆರೋಗ್ಯಕ್ಕಾಗಿ ಓಟ-2015’ ವಿಶಿಷ್ಟ ಕಾರ್ಯಕ್ರಮವನ್ನು ಸೆ.27ರಂದು ಆದಿತ್ಯವಾರ ಬೆಳಿಗ್ಗೆ 7ಕ್ಕೆ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದೆ.

ಹೃದಯದ ಬಗೆಗೆ ಅರಿವು ಹಾಗೂ ಉತ್ತಮ ಆರೋಗ್ಯವನ್ನು ಕಾಯುಕೊಳ್ಳಲು ರೋಟರಿ ಕ್ಲಬ್ ಕುಂದಾಪುರ ಮತ್ತು ಕುಂದಾಪುರದ ನ್ಯೂ ಮೆಡಿಕಲ್ ಸೆಂಟರ್ ಜಂಟಿಯಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಬಗ್ಗೆ ನ್ಯೂ ಮೆಡಿಕಲ್ ಸೆಂಟರ್ ನಿರ್ದೇಶಕ ಡಾ.ರಂಜನ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕುಂದಾಪುರದ ಗಾಂಧಿ ಮೈದಾನದಿಂದ ಆರಂಭಗೊಳ್ಳುವ ಓಟ ಶಾಸ್ತ್ರೀವೃತ್ತ, ಯಡ್ತರೆ ಮಂಜಯ್ಯ ಶೆಟ್ಟಿ ರಸ್ತೆ(ಪಶ್ಚಿಮ) ಮೂಲಕ ಹೊಸ ಬಸ್ ನಿಲ್ದಾಣ ತಲುಪಿ, ಅಲ್ಲಿಂದ ಪುರಸಭೆ ರಸ್ತೆ ಮೂಲಕ ಶಾಸ್ತ್ರೀಸರ್ಕಲ್ ಹಾದು ಗಾಂಧಿ ಮೈದಾನ ತಲುಪಲಿದೆ. ಒಟ್ಟು 3.2 ಕಿ.ಮೀ ದೂರವನ್ನು ಓಟಗಾರ ಕ್ರಮಿಸಬೇಕಾಗುತ್ತದೆ ಎಂದರು.

ಶೇ.೯೦ರಷ್ಟು ಹೃದಯ ಸಂಬಂಧಿ ತೊಂದರೆಗಳಿಗೆ ದೈಹಿಕ ವ್ಯಾಯಾಮದ ಕೊರತೆಯೂ ಕಾರಣ. ದಿನಕ್ಕೆ 20 ನಿಮಿಷ ನಡೆದರೆ ಹೃದಯ ತೊಂದರೆಗಳನ್ನು ತಡೆಗಟ್ಟಬಹುದು. ವಾರಕ್ಕೆ 5 ದಿನ 20 ನಿಮಿಷ ವಾಕಿಂಗ್ ಮಾಡುವ ಪರಿಪಾಠ ಇಟ್ಟುಕೊಂಡರೆ ಹೃದಯ ಸಮಸ್ಯೆಗಳನ್ನು ತಡೆಗಟ್ಟಬಹುದು. ಆ ನೆಲೆಯಲ್ಲಿ ಜನರಿಗೆ ತಿಳುವಳಿಕೆ ನೀಡುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಮಾತನಾಡಿ, ಈ ಸ್ಪರ್ಧೆಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. 18 ವರ್ಷ ಮೇಲ್ಪಟ್ಟವರಿಗೆ ಅವಕಾಶ, ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ನಡೆಯುತ್ತದೆ. ಸ್ಪರ್ಧೆ ಆರಂಭಕ್ಕೆ ಮುಂಚಿತವಾಗಿ ನೊಂದಾಯಿಸಲ್ಪಟ್ಟವರನ್ನು ಮಾತ್ರ ಸ್ಪರ್ಧಾಳುಗಳೆಂದು ಪರಿಗಣಿಸಲಾಗುವುದು. ಪ್ರಥಮ ಬಹುಮಾನ ರೂ.5,000, ದ್ವಿತೀಯ 3,000, ತೃತೀಯ 1,000 ಬಹುಮಾನವಿರುತ್ತದೆ. ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಸುದ್ಧಿಗೋಷ್ಠಿಯಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂತೋಷ ಕೋಣಿ, ಕಾರ್ಯಕ್ರಮ ಸಂಯೋಜಕ ಎಚ್.ಎಸ್.ಹತ್ವಾರ್, ರೋಟರಿ ಯುತ್ ಸರ್ವಿಸ್‌ನ ಟಿ. ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.

Exit mobile version