Kundapra.com ಕುಂದಾಪ್ರ ಡಾಟ್ ಕಾಂ

ರಾಷ್ಟ್ರೀಯ ರೈತ ದಿನಾಚರಣೆಯಲ್ಲಿ ಗ್ರಾಮೀಣ ಭಾಗದ ರೈತರಿಗೆ‌ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ರೈತರು ದೇಶದ ಬೆನ್ನೆಲುಬು ಎಂದು ಕರೆಯುತ್ತಾರೆ. ಆದರೆ ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸಗಳು ನಮ್ಮನ್ನಾಳುವ ಸರ್ಕಾರಗಳು ಮಾಡುತ್ತಿಲ್ಲ ಎಂದು ಉಡುಪಿ ಜಿಲ್ಲಾ ರೈತ ಸಂಘದ ತ್ರಾಸಿ ವಲಯ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಕಳವಳ ವ್ಯಕ್ತಪಡಿಸಿದರು.

ಅವರು ಗುರುವಾರ ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಉಡುಪಿ ಜಿಲ್ಲಾ ರೈತ ಸಂಘ ತ್ರಾಸಿ ವಲಯ, ಮಹಾವಿಷ್ಣು ಯುವಕ ಮಂಡಲ, ಮಾನಸ ಯುವತಿ ಮಂಡಲ ಹಾಗೂ ಗಂಗೊಳ್ಳಿ ರೋಟರಿ ಕ್ಲಬ್ ಸಹಯೋಗದೊಂದಿಗೆ ಗ್ರಾಮೀಣ ಭಾಗದ ರೈತರ ಮನೆಗೆ ತೆರಳಿ ರೈತರನ್ನು ಸನ್ಮಾನಿಸಿ ಮಾತನಾಡಿದರು.

ಕೃಷಿಕರಾದ ಸರೋಜ ಮತ್ತು ಬಚ್ಚು ದೇವಾಡಿಗ ಎಲ್ಲರಿಗೂ ಮಾದರಿ. ಇದ್ದ ಭೂಮಿಯನ್ನು ಬಳಸಿಕೊಂಡು ವರ್ಷದ ಅನು ದಿನವೂ ಶ್ರಮವಹಿಸಿ ಕೃಷಿಯಲ್ಲಿ ತೊಡಗುವ ಇಂತಹ ಕೃಷಿಕರು ನಮ್ಮಹೆಮ್ಮೆ. ಓರ್ವ ಸಾಮಾನ್ಯ ಮಹಿಳೆ ತುಂಡು ಭೂಮಿಯಲ್ಲಿ ತರಕಾರಿಗಳನ್ನು ಬೆಳೆದು ಸಂತೆ ಮಾರುಕಟ್ಟೆಗೆ ತೆರಳಿ ಅಲ್ಲಿ ಮಾರಾಟ ಮಾಡಿ ತಮ್ಮ ಜೀವನವನ್ನು ನಿರ್ವಹಣೆ ಮಾಡುತ್ತಾರೆಂದರೆ ಅವರಿಂದ ನಾವೆಲ್ಲರೂ ನೋಡಿ ಕಲಿಯಬೇಕಾದದ್ದು ತುಂಬಾ ಇದೆ. ಇರುವ ಭೂಮಿಯನ್ನು ಉತ್ತಮವಾಗಿ ಸದ್ಬಳಕೆ ಮಾಡಿಕೊಂಡರೆ ನಮ್ಮ ಬದುಕು ನಿಜವಾಗಿಯೂ ಹಸನಾಗುತ್ತದೆ ಎಂದರು.

ತರಕಾರಿ ಮಾರಾಟ ಕೃಷಿಕ ಮಹಿಳೆ ಸರೋಜ ದೇವಾಡಿಗ ಹಾಗೂ ಜಾಲಾಡಿ ನಿವಾಸಿ ಕೃಷಿಕ ಬಚ್ಚು ದೇವಾಡಿಗ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಮ್ಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಯು. ಸತ್ಯನಾರಾಯಣ ರಾವ್, ನರಸಿಂಹ ಗಾಣಿಗ ಹರೆಗೋಡು, ಮಹಾವಿಷ್ಣು ಯುವಕ ಮಂಡಲ ಅಧ್ಯಕ್ಷ ಶ್ರೀಕಾಂತ ಆಚಾರ್ಯ, ರೋಟರಿ ಅಧ್ಯಕ್ಷ ರಾಜೇಶ್ ಎಂ ಜಿ, ಮಾನಸ ಯುವತಿ ಮಂಡಲ ಅಧ್ಯಕ್ಷೆ ಶ್ಯಾಮಲಾ, ತೇಜ ದೇವಾಡಿಗ ಪ್ರಕಾಶ್ ದೇವಾಡಿಗ, ನಾಗರಾಜ್ ಗಾಣಿಗ, ರಾಮಚಂದ್ರ ಕುಲಾಲ್ ಇದ್ದರು.

ದೀಪಕ್ ಗಾಣಿಗ ಸ್ವಾಗತಿಸಿ ಪ್ರದೀಪ್ ದೇವಾಡಿಗ ವಂದಿಸಿದರು. ಯುವಕ ಮಂಡಲದ ಮಾಜಿ ಅಧ್ಯಕ್ಷ ರವೀಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Exit mobile version