Kundapra.com ಕುಂದಾಪ್ರ ಡಾಟ್ ಕಾಂ

ಮರವಂತೆ: ಸ್ವಚ್ಛತೆಯ ಐವತ್ತುದಿನ, ಬೃಹತ್ ಸ್ವಚ್ಛತಾ ಅಭಿಯಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಜಿಲ್ಲಾ ಪಂಚಾಯಿತಿಯ ಕಾಳಜಿಯಿಂದಾಗಿ ಜಿಲ್ಲೆಯ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಈಗ ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣಾ ಘಟಕಗಳು ಆರಂಭವಾಗಿ, ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಇವುಗಳ ಮೂಲಕ ಪ್ರತಿದಿನ ಟನ್‌ಗಟ್ಟಲೆ ತ್ಯಾಜ್ಯ ಸಂಗ್ರಹವಾಗಿ ಸಂಪನ್ಮೂಲವಾಗಿ ಪರಿವರ್ತಿಸಿ ವಿಲೇವಾರಿಯಾಗುತ್ತಿದೆ. ಇದರ ಪೂರ್ವದಲ್ಲಿ ಜಿಲ್ಲೆಯ ಗ್ರಾಮೀಣ ನೈರ್ಮಲ್ಯ ಸ್ಥಿತಿ ಹೇಗಿತ್ತು ಎನ್ನುವುದನ್ನು ಯಾರೂ ಊಹಿಸಿಕೊಳ್ಳಬಹುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಹೇಳಿದರು.

ಮರವಂತೆ ಸ್ವಚ್ಛತಾ ಮಾಸ ತಂಡ’ದ ಆಶ್ರಯದಲ್ಲಿ ಇಲ್ಲಿನ ಮಹಾರಾಜಸ್ವಾಮಿ ವರಾಹ ದೇವಸ್ಥಾನದ ಆವರಣದಲ್ಲಿ ಭಾನುವಾರ ಸ್ವಚ್ಛತೆಯ ಐವತ್ತುದಿನದ ಅಂಗವಾಗಿ ಆಯೋಜಿಸಿದ್ದ ಬೃಹತ್ ಸ್ವಚ್ಛತಾ ಅಭಿಯಾನದಲ್ಲಿ ಅವರು ಮಾತನಾಡಿದರು.

ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವ ಪ್ರವೃತ್ತಿಯಿಂದ ಜೀವ ಸಂಕುಲಕ್ಕೆ ಅಪಾಯ ಸಂಭವಿಸುತ್ತಿದೆ. ಇದನ್ನು ತಡೆಯಲು ಸ್ಥಳೀಯಾಡತಗಳು ಅದರ ನಿರ್ವಹಣೆಯ ಜತೆಗೆ ಅರಿವು ಮೂಡಿಸುವ ಮತ್ತು ದಂಡನೀಯ ಕ್ರಮಗಳನ್ನೂ ಕೈಗೊಳ್ಳಬೇಕು. ಮರವಂತೆಯ ಗ್ರಾಮ ಪಂಚಾಯಿತಿ ಸದಸ್ಯರಾದ ನಾಗರಾಜ ಪಟಗಾರ, ಕರುಣಾಕರ ಆಚಾರ್ಯ ನೇತೃತ್ವದಲ್ಲಿ ೫೦ ದಿನ ನಡೆದ ಸ್ವಚ್ಛತಾ ಅಭಿಯಾನ ಅನುಕರಣೀಯ ಎಂದು ಅವರು ಹೇಳಿದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ಜನಾರ್ದನ ಮರವಂತೆ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ ಎಂ. ನಾಯಕ್, ಸಬ್ ಇನ್ಸ್‌ಪೆಕ್ಟರ್ ನಂಜಾ ನಾಯಕ್ ಶುಭ ಹಾರೈಸಿದರು. ಕರುಣಾಕರ ಆಚಾರ್ಯ ನಿರೂಪಿಸಿ ವಂದಿಸಿದರು. ಸ್ವಚ್ಛತಾ ಕಾರ್ಯಕ್ರಮದಲ್ಲಿ ಅತ್ಯಧಿಕ ದಿನ ಭಾಗವಹಿಸಿದ್ದ ಕೃಷ್ಣ ಮೊಗವೀರ ಮತ್ತು ಪ್ರಭಾಕರ ಖಾರ್ವಿ ಅವರನ್ನು ಗೌರವಿಸಲಾಯಿತು. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ದಿನೇಶ ಶೇರುಗಾರ್, ಉದ್ಯಮಿ ಸತೀಶ ಪೂಜಾರಿ, ಆಮಂತ್ರಿತ ಸಂಘಟನೆಗಳ ಪ್ರತಿನಿಧಿಗಳು ಇದ್ದರು.

ಸಭಾ ಕಾರ್ಯಕ್ರಮದ ಬಳಿಕ ದೇವಸ್ಥಾನದ ಆವರಣ ಹಾಗೂ ಸನಿಹದ ಸಮುದ್ರ ತೀರದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಇನ್ನು ಮುಂದೆ ಪ್ರತಿ ಭಾನುವಾರ ಈ ಅಭಿಯಾನ ನಡೆಯುವುದು ಎಂದು ಪ್ರಕಟಿಸಲಾಯಿತು.

Exit mobile version