Kundapra.com ಕುಂದಾಪ್ರ ಡಾಟ್ ಕಾಂ

ಶ್ರೀ ಕ್ಷೇತ್ರ ಹಟ್ಟಿಯಂಗಡಿಯಲ್ಲಿ ಧಾರ್ಮಿಕ ಸಭೆ: ಧನಸಹಾಯ, ಸನ್ಮಾನ

ಕುಂದಾಪುರ: ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಶ್ರೀ ಗಣೇಶೋತ್ಸವವನ್ನು ವಿಜೃಂಭಣೆಯಿಂದ ನಡೆಸಲಾಯಿತು. ಕೊನೆಯ ದಿನ ನಡೆಸಲಾದ ಧಾರ್ಮಿಕ ಸಭೆಯಲ್ಲಿ ಧರ್ಮದರ್ಶಿ ವೇ. ಹೆಚ್. ರಾಮಚಂದ್ರ ಭಟ್ಟರು ಸರ್ವರನ್ನೂ ಸ್ವಾಗತಿಸುತ್ತಾ, ಪ್ರಾಸ್ತಾವಿಕವಾಗಿ ಮಾತನಾಡಿ ದೇವಸ್ಥಾನವು ಹಂತಹಂತವಾಗಿ ಬೆಳೆದು ಬಂದ ರೀತಿ ಹಾಗೂ ದೇವಸ್ಥಾನದಿಂದ ತಾವು ನಡೆಸುವ ಸಮಾಜಮುಖಿ ಕಾರ್ಯಗಳನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಬೆಂಗಳೂರಿನ ಅರುಣ ಕುಮಾರ ಇವರು ತಾಲೂಕು ಮಟ್ಟದಲ್ಲಿ ನಡೆದ ಕಲೆ, ಸಾಹಿತ್ಯ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆಯನ್ನು ನೆರವೇರಿಸಿ ಮಕ್ಕಳನ್ನು ಹುರಿದುಂಬಿಸಿದರು. ಈ ತಾಲೂಕು ಮಟ್ಟದ ಸ್ಪರ್ಧೆಗಳಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ಗುರುಕುಲ ಪಬ್ಲಿಕ್ ಸ್ಕೂಲ್, ವಕ್ವಾಡಿ ಹಾಗೂ ಪ್ರಾಥಮಿಕಶಾಲಾ ವಿಭಾಗದಲ್ಲಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಅಂಗಡಿ ಈ ಶಾಲೆಗಳು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡವು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದ ಧರ್ಮದರ್ಶಿಗಳಾದ ಕೃಷ್ಣಪ್ರಸಾದ ಅಡ್ಯಂತಾಯ ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವ್ಯಕ್ತಿಯ ಅಭಿವೃದ್ಧಿ ಸಮಾಜಕ್ಕೆ ಪೂರಕವಾಗಿರಬೇಕು, ಸಾಧನೆ ಮಾಡಲು ವ್ಯಕ್ತಿ ಹುಟ್ಟಿಬಂದ ಸ್ಥಳ ಮುಖ್ಯವಲ್ಲ ಆದರೆ ಸಾಧಿಸುವ ಛಲ ಮುಖ್ಯ, ಇಲ್ಲಿಯ ಸಾಧನೆ, ಪರಿಶ್ರಮ, ಸಮಾಜಸೇವೆ, ಹಾಗೂ ಅಭಿವೃದ್ಧಿ ಕಾರ್ಯಗಳ ಮಾದರಿ ಪ್ರಶಂಸನಾರ್ಹವಾಗಿದ್ದು, ಸರ್ವರಿಗೂ ಮಾರ್ಗದರ್ಶನದ ಕಾಯಕ ಇದಾಗಿದೆ ಎಂದು ತಿಳಿಸಿದರು.

ದೇವಸ್ಥಾನದ ವತಿಯಿಂದ ನಿವೃತ್ತ ಶಿಕ್ಷಣಾಧಿಕಾರಿ ರಾಷ್ಟ್ರಪ್ರಶಸ್ತಿ ವಿಜೇತರಾದ ಗೋಪಾಲ ಶೆಟ್ಟಿ ಮತ್ತು ಯಕ್ಷಗಾನ ಕಲಾವಿದ ಸುರಿಕುಮೇರು ಗೋವಿಂದ ಭಟ್ಟ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಸುರಿಕುಮೇರು ಗೋವಿಂದ ಭಟ್ಟರು ಯಕ್ಷ ಶಿಕ್ಷಣದ ಮಹತ್ವ ಹಾಗು ಅಗತ್ಯತೆಗಳ ಬಗ್ಗೆ ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದರು. ಸನ್ಮಾನ ಸ್ವೀಕರಿಸಿದ ಗೋಪಾಲ ಶೆಟ್ಟಿ ಅವರು ಸಭೆಯನ್ನು ಉದ್ದೇಶಿಸಿ ಶಿಕ್ಷಣದಿಂದಲೇ ಸಮಾಜದ ಅಭಿವೃದ್ಧಿ ಸಾಧ್ಯ, ಮಹಿಳಾ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದರು.

ಪ್ರತಿ ವರ್ಷದಂತೆ ಈ ವರ್ಷವೂ ಅಶಕ್ತರಾದ ರೋಗಿಗಳಿಗೆ, ಹಲವು ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಹಾಗೂ ಅರ್ಹ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಸಹಾಯಧನಗಳ ಚೆಕ್ ವಿತರಿಸಲಾಯಿತು. ಫಲಾನುಭವಿಗಳ

ಯಾದಿಯನ್ನು ಶರಣ ಕುಮಾರ, ಪ್ರಾಂಶುಪಾಲರು, ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಅಂಗಡಿ ಇವರು ವಾಚಿಸಿದರು.
ಶಿಕ್ಷಕರಾದ ಚರಣ್ ಕುಮಾರ್ ಮತ್ತು ಗುರುರಾಜ್ ಸನ್ಮಾನಿತರ ಪರಿಚಯವನ್ನು ಮಾಡಿದರು. ವಂದನಾರ್ಪಣೆಯನ್ನು ಬಾಲಚಂದ್ರ ಭಟ್, ಹಟ್ಟಿಅಂಗಡಿ ಇವರು ನೆರವೇರಿಸಿದರು. ಉಪಪ್ರಾಂಶುಪಾಲರಾದ ರಾಮದೇವಾಡಿಗ ಕಾರ್ಯಕ್ರಮ ನಿರೂಪಣೆ ಮಾಡಿದರು.

ತದನಂತರ ಯಕ್ಷಗಾನ ಕಲಾಕೇಂದ್ರ (ರಿ.) ಹಂಗಾರಕಟ್ಟೆ ಇವರು ಹೆಸರಾಂತ ಕಲಾವಿದರ ಕೂಡುವಿಕೆಯಿಂದ ಅನುಸಾಲ್ವ -ಗರ್ವಭಂಗ ಎಂಬ ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸಿದರು.

Exit mobile version