Kundapra.com ಕುಂದಾಪ್ರ ಡಾಟ್ ಕಾಂ

ಸಮಸ್ಯೆಗೆ ತಲೆಬಾಗದೇ ಕಾನೂನಿನ ನೆರವು ಪಡೆಯಿರಿ: ನ್ಯಾ. ಅಬ್ದುಲ್ ನಝೀರ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ:
ಪ್ರಜೆಗಳು ಸಮಸ್ಯೆಗೆ ತಲೆಬಾಗದೇ ಕಾನೂನಿನ ನೆರವು ಪಡೆದುಕೊಳ್ಳಬೇಕೆಂದು ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಹೇಳಿದರು.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ದ.ಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮೂಡುಬಿದಿರೆ ವಕೀಲರ ಸಂಘ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ಆಳ್ವಾಸ್ ಕಾಲೇಜಿನ ನುಡಿಸಿರಿ ವೇದಿಕೆಯಲ್ಲಿ ಗುರುವಾರ ನಡೆದ ಕಾನೂನು ಸೇವಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಜನಸಂಖ್ಯೆಗೆ ಅನುಗುಣವಾಗಿ ನ್ಯಾಯಾಲಯಗಳು ಇಲ್ಲದಿರುವುದರಿಂದ ಪ್ರಕರಣಗಳು ಬಾಕಿ ಉಳಿದಿದೆ. ಹಾಗಂತ ಭಾರತದ ಯಾವ ಪ್ರಜೆಯೂ ಸಮಸ್ಯೆಗೆ ತಲೆಬಾಗದೇ, ಕಾನೂನಿನ ಮೂಲಕ ಪರಿಹಾರ ಪಡೆದುಕೊಳ್ಳಬೇಕು. ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣಗಳು ಕಡಿಮೆ ಇದ್ದಷ್ಟು ಸಮಾಜ ಸ್ವಸ್ಥ ಹಾಗೂ ಆರೋಗ್ಯಕರವಾಗಿದೆ ಎಂಬ ಸಂದೇಶ ಸಿಗುತ್ತದೆ. ಹಾಗೆಯೇ ಸಿವಿಲ್ ಪ್ರಕರಣಗಳು ಹೆಚ್ಚಾದಷ್ಟು, ಕಾನೂನಿನ ನೆರವು ಪಡೆಯಲು ಜನರು ಮುಂದಾಗಿದ್ದಾರೆ ಎಂದು ತಿಳಿಯುತ್ತದೆ ಎಂದರು.

ಯಾವುದೇ ಯೋಜನೆಗಳು ಅನುಷ್ಠಾನಗೊಂಡಾಗ, ಮೊದಲು ಅದರ ಕುರಿತು ಜನರಲ್ಲಿ ಅರಿವು ಮೂಡಿಸು ಕಾರ್ಯಕ್ರಮ ನಡೆಯಬೇಕು. ಅರ್ಹ ಫಲಾನುಭವಿಗಳಿಗೆ ಯೋಜನೆಗಳು ತಲುಪಿದಾಗ ಮಾತ್ರ ಇಂತಹ ಅರಿವು ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯ. ಮಾಹಿತಿ ಇದ್ದವರು, ಇತರರ ಮೂಲಕ ಮಾಹಿತಿ ಹರಿಯುವಂತೆ ನೋಡಿಕೊಳ್ಳಬೇಕು. ಇದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಿದೆ. ಎಲ್ಲರಿಗೂ ಮಾಹಿತಿ ತಲುಪಬೇಕು ಎಂದು ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ದ.ಕ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಸೋಮಶೇಖರ ಹೇಳಿದರು.

ಕಾನೂನಿನ ಅರಿವು ಇಲ್ಲದೇ ಇರುವುದು, ತಿಳುವಳಿಕೆಯ ಕೊರತೆ, ಹಣದ ಕೊರತೆ, ಶೋಷಿತ, ನಿರ್ಗತಿಕರು ಹೀಗೆ ಯಾರೂ ಸಹ ನ್ಯಾಯದಿಂದ ವಂಚಿತರಾಗಬಾರದು. ಉಚಿತವಾಗಿ ಕಾನೂನು ಸೇವೆ, ಸಲಹೆ, ಕಾರ್ಯಾಗಾರ ನಡೆಸಿ ಜನರಲ್ಲಿ ಅರಿವು ಮೂಡಿಸಿ ಜನರ ನೆರವಿಗೆ ನಿಲ್ಲುವುದೇ ಪ್ರಾಧಿಕಾರದ ಮೂಲ ಉದ್ದೇಶ. ಈ ಮೂಲಕ ಭಾರತದ ನ್ಯಾಯಾಂಗ ವ್ಯವಸ್ಥೆಯ ಮೂಲಮಂತ್ರವಾಗಿರುವ ಸಮಪಾಲು, ಸಮಬಾಳು, ಸಮಾನ ನ್ಯಾಯಕ್ಕೆ ಬೆಲೆ ಬರುತ್ತದೆ. ಕಾನೂನು ಅರಿವು ಮೂಡಿಸಿ, ಜನರ ನೆರವಿಗೆ ನಿಲ್ಲುವಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯ ಎಂದು ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ, ನ್ಯಾಯಮೂರ್ತಿ ವೀರಪ್ಪ ಹೇಳಿದರು.

ಯಾವುದೇ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದೂರುಗಳು ದಾಖಲಾಗುತ್ತಿದೆ ಎಂದರೆ ಅದು ಆಡಳಿತ ವ್ಯವಸ್ಥೆಯ ವೈಫಲ್ಯವನ್ನು ಪ್ರತಿಬಿಂಬಿಸುತ್ತದೆ. ಜನರ ಸಂಕಷ್ಟ ಕಡಿಮೆಗೊಳಿಸುವ ನಿಟ್ಟಿನಲ್ಲಿ ಆಡಳಿತಗಾರರು ಹಾಗೂ ಜನಪ್ರತಿನಿಧಿಗಳು ಕಾರ್ಯಪ್ರವೃತ್ತರಾಗಬೇಕು. ಸರ್ಕಾರದ ಯೋಜನೆಗಳ ಲಾಭ ಪಡೆಯಲು ಜನರು ಇಲಾಖೆಗೆ ಬರುವ ಬದಲು, ಅಧಿಕಾರಿಗಳೇ ಫಲಾನುಭವಿಗಳ ಬಳಿ ತೆರಳಿ ಯೋಜನೆಗಳನ್ನು ತಲುಪಿಸಬೇಕು ಎಂದು ದ.ಕ ಜಿಲ್ಲೆಯ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ ಹೇಳಿದರು.

ಕಾರ್ಯಕ್ರಮದಲ್ಲಿ ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷ ಎಂ. ಸುಬ್ರಹ್ಮಣ್ಯ ತಂತ್ರಿ, ಕರ್ನಾಟಕ ಉಚ್ಛ ನ್ಯಾಯಾಲಯದ ರಿಜಿಸ್ಟ್ರಾರ್ ಜನರಲ್ ಟಿ.ಜಿ. ಶಿವಶಂಕರೇಗೌಡ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್, ಶಶಿಧರ್ ಶೆಟ್ಟಿ ಪ್ರಾಸ್ತಾವಿಕ ನುಡಿಗೈದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ದ.ಕ ಜಿಲ್ಲೆಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಮುರಳೀಧರ್ ಪೈ ಸ್ವಾಗತಿಸಿ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ದ.ಕ ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪೃಥ್ವೀರಾಜ್ ವಣೇಕರ್ ವಂದಿಸಿದರು. ಆಳ್ವಾಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಯೋಗೀಶ್ ಕೈರೋಡಿ ಕಾರ್ಯಕ್ರಮವನ್ನು ನಿರೂಪಿಸಿದರು.

ಶಿಬಿರದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ಮೀನುಗಾರಿಕಾ ಇಲಾಖೆ ಹಾಗೂ ಸ್ತ್ರೀ ಶಕ್ತಿ ಸ್ವಸಹಾಯ ಸಂಸ್ಥೆಗಳ ವಿವಿಧ ಸ್ಟಾಲ್‌ಗಳನ್ನು ಉದ್ಘಾಟಿಸಲಾಯಿತು.

ಕರ್ನಾಟಕ ಸರಕಾರದ ಕಲ್ಯಾಣ ಕಾರ್ಯಕ್ರಮಗಳ ಆಯ್ದ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿ, ಕಾನೂನು ಸೇವೆಗಳ ಅರಿವು ಗೀತೆಗಳ ಧ್ವನಿ ಸುರುಳಿ ಬಿಡುಗಡೆಗೊಳಿಸಲಾಯಿತು. ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ವಿವಿಧ ತಾಲೂಕು ವಕೀಲ ಸಂಘದ ಪದಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ರೈತ ಸಂಘದ ಪ್ರತಿನಿಧಿಗಳು ಭಾಗವಹಿಸಿದ್ದರು.

Exit mobile version