Kundapra.com ಕುಂದಾಪ್ರ ಡಾಟ್ ಕಾಂ

ಕಾಳಾವರ ಗ್ರಾಮ ಸಭೆ: ಭೂಮಿ ಒತ್ತುವರಿ; ಮಣ್ಣು ಮಾಫಿಯಾ, ಮಟ್ಕಾ ದಂಧೆಗೆ ಕಡಿವಾಣ ಹಾಕಿ

ಕುಂದಾಪುರ: ಕೆಲವು ವರ್ಷಗಳಿಂದ ವಕ್ವಾಡಿ ಗ್ರಾಮದ ಹಲವೆಡೆ ಅಕ್ರಮವಾಗಿ ಮಣ್ಣು ಲೂಟುವ ಮಾಫಿಯಾಗಳು ಹೆಚ್ಚುತ್ತಿವೆ. ಈ ಬಗ್ಗೆ ಹಲವು ಬಾರಿ ಗ್ರಾಮ ಪಂಚಾಯಿತಿಗೆ, ತಾಲೂಕು ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ. ಆದರೆ ಇದುವರೆಗೆ ಮಣ್ಣು ಮಾಫಿಯಾವನ್ನು ತಡೆಯುವ ಬಗ್ಗೆ ಕ್ರಮ ಕೈಗೊಂಡಿಲ್ಲ. ಗ್ರಾಮಸ್ಥರು ನೀಡಿದ ಮನವಿಗೆ ಇಲಾಖೆ ಏನು ಕ್ರಮ ಕೈಗೊಂಡಿದೆ ಎಂದು ಕಾಳಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡರು.

ಮಂಗಳವಾರ ವಕ್ವಾಡಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಗ್ರಾಮಸ್ಭೆಯಲ್ಲಿ ಈ ಆಗ್ರಹ ಕೇಳಿ ಬಂದಿತು. ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಯಾವುದೇ ಅನುಮತಿ ಪಡೆಯದೇ ನೂರಾರು ಎಕ್ರೆ ಸರ್ಕಾರೀ ಭೂಮಿಯಿಂದ ಅಕ್ರಮವಾಗಿ ಮಣ್ಣು ಸಾಗಾಟ ನಡೆಯುತ್ತಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಯಾವುದೇ ಕ್ರಮಕ್ಕೆ ಮುಮದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಗಣಿ ಇಲಾಖೆ ನಿದ್ದೆ ಮಾಡುತ್ತಿದೆಯೇ ಅಥವಾ ಅಕ್ರಮ ಮಣ್ಣ ದಂಧೆಕೋರರಿಂದ ಮಾಮೂಲಿ ಪಡೆಯುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.

ವಕ್ವಾಡಿ ಗ್ರಾಮ ಸೇರಿದಂತೆ ಕಾಳಾವರ ಗ್ರಾಮ ಪಂಚಾಯಿತಿಯ ವಿವಿಧೆಡೆ ಇರುವ ಸರ್ಕಾರೀ ಜಾಗಕ್ಕೆ ಭೂ ಮಾಲಕರು ಬೇಲಿ ಹಾಕಿ ಸ್ವಾಧೀನಪಡಿಸಿಕೊಂಡಿದ್ದಾರೆ. ನೂರಾರು ಬಡ ಕುಟುಂಬಕ್ಕೆ ನಿವೇಶನದ ಕೊರತೆಯಿದೆ. ಸರ್ಕಾರೀ ಭೂಮಿ ಒತ್ತುವರಿ ನಿಷೇಧ ಕಾನೂನು ಇದ್ದಂತೆಯೇ ಅಕ್ರಮ ಒತ್ತುವರಿ ನಡೆಯುತ್ತಿರುವುದು ಪಂಚಾಯಿತಿ ಗಮನಕ್ಕೆ ಬಂದರೂ ಕ್ರಮಕ್ಕೆ ಮುಂದಾಗುತ್ತಿಲ್ಲ ಎನ್ನುವ ಆರೋಪವೂ ಇದೇ ವೇಳೆ ಕೇಳಿ ಬಂದಿತು. ಈ ಬಗ್ಗೆ ಪ್ರತಿಕ್ರಿಯಿಸಿದ ಅಧಿಕಾರಿಗಳು ತಾಲೂಕು ಸರ್ವೇಯರ್ ಮೂಲಕ ಅಕ್ರಮ ಒತ್ತುವರಿ ಭೂಮಿಯನ್ನು ಸರ್ವೇ ಮಾಡಿಸಿ ಒತ್ತುವರಿ ಕಂಡು ಬಂದಲ್ಲಿ ಸ್ವಾಧೀನಪಡಿಸಿಕೊಳ್ಳಲಾಗುವುದು ಎಂದರು.

ಜಿಲ್ಲಾ ಪೊಲೀಸ್ ಅಧೀಕ್ಷಕರು ಜಿಲ್ಲೆಯಲ್ಲಿ ಮಟ್ಕಾ ದಂಧೆ ನಡೆಸಬಾರದು ಎನ್ನುವ ಕಾನೂನು ಜ್ಯಾರಿಗೆ ತಂದಿದ್ದರೂ ಕಾಳಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಕ್ವಾಡಿಯಲ್ಲಿ ಮಾತ್ರ ಮಟ್ಕಾ ದಂಧೆಗೆ ಕಡಿವಾಣ ಹಾಕಿಲ್ಲ ಎಂದು ಆರೋಪಿಸಿದ ಗ್ರಾಮಸ್ಥರು, ಹಗಲು ವೇಳೆಯಲ್ಲಿಯೂ ಮಟ್ಕಾ ನಡೆಯುತ್ತಿರುವುದರ ಪರಿಣಾಮ ಶಾಲಾ ವಿದ್ಯಾರ್ಥಿಗಳೂ ಮಟ್ಕಾ ದಂಧೆಗೆ ಬಲಿಯಾಗುತ್ತಿದ್ದಾರೆ. ಮೊದಲು ಮಟ್ಕಾ ನಿಲ್ಲಿಸಲು ಸೂಕ್ತ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಆಗ್ರಹಿಸಿದರು.

ಕಾಳಾವರ ಬಾರ್‌ಗೆ ವಿರೋಧ: ಕಳೆದ ಒಂದು ತಿಂಗಳ ಹಿಂದಿನಿಂದ ನಡೆಯುತ್ತಿದ್ದ ಬಾರ್ ಮಾಲಕರ ಜಗಳ ಮಂಗಳವಾರ ವಕ್ವಾಡಿಯಲ್ಲಿ ನಡೆದ ಗ್ರಾಮಸಭೆಯಲ್ಲಿಯೂ ಪ್ರತಿಧ್ವನಿಸಿತು. ಕೆಲವು ಗ್ರಾಮಸ್ಥರು ಕಾಳಾವರ ಗ್ರಾಮದಲ್ಲಿ ಬಾರ್ ನಡೆಸಲು ಅನುಮತಿ ನೀಡಬಾರದು ಎಂಬುದಾಗಿ ನಿರ್ಣಯ ಮಂಡಿಸುವಂತೆ ಆಗ್ರಹಿಸಿದರು. ಆದರೆ ಈ ಸಂದರ್ಭ ಆಡಳಿತ ಪಕ್ಷದ ಬೆಂಬಲಿತ ಸದಸ್ಯರು ಬಾರ್ ಮಾಲಕರು ನಿರಾಕ್ಷೇಪಣಾ ಜಾಗದಲ್ಲಿ ಬಾರ್ ನಡೆಸಲು ಕಾನೂನು ರೀತಿಯಲ್ಲಿ ಅವಕಾಶವಿದೆ. ಒಂದೊಮ್ಮೆ ನಿರಾಕ್ಷೇಪಣಾ ಪತ್ರ ನೀಡದೇ ಇದ್ದಲ್ಲಿ ಬಾರ್ ಮಾಲಕರು ಕಾನೂನಿನ ಮೊರೆ ಹೋದಲ್ಲಿ ಗ್ರಾಮ ಪಂಚಾಯಿತಿ ಉತ್ತರದಾಯಿಯಾಗಬೇಕಾಗುತ್ತದೆ. ಆ ನಿಟ್ಟಿನಲ್ಲಿ ನಿರಾಕ್ಷೇಪಣಾ ಪತ್ರ ನೀಡಲು ನಿರ್ಣಯಿಸಲಾಗಿದೆ ಎಂದರು. ಆದರೆ ಪಟ್ಟು ಬಿಡದ ಗ್ರಾಮಸ್ಥರು ಬಾರ್ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದರು.

ಪೊಲೀಸರಿಗೆ ತರಾಟೆ: ಗ್ರಾಮ ಸಭೆಯ ಸಂದರ್ಭ ಎರಡು ಬಣಗಳ ನಡುವೆ ಮಾತಿಗೆ ಮಾತುಬೆಳೆದು ಪ್ರಕರಣ ಗಂಭೀರ ಸ್ಥಿತಿಗೆ ತಲುಪುತ್ತಿದ್ದಂತೆ ಸ್ಥಳದಲ್ಲಿ ಹಾಜರಿದ್ದ ಪೊಲಿಸರು ಸಮಾಧಾನ ಮಾಡಲೆತ್ನಿಸಿದರು. ಈ ಸಂಧರ್ಭ ಗ್ರಾಮಸ್ಥರು ಪೊಲೀಸರನ್ನು ತರಾಟೆಗೆತ್ತಿಕೊಂಡಿದ್ದಲ್ಲದೇ ನಿಮಗೆ ಇಲ್ಲಿ ಬರ ಹೇಳಿದ್ದು ಯಾರು? ಗ್ರಾಮಸಭೆ ನಮ್ಮ ಹಕ್ಕು ನಮ್ಮನ್ನು ಸುಮ್ಮನಿರಸಲು ನಿಮಗೆ ಅಧಿಕಾರವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆದ ನಂತರ ಪೊಲೀಸರು ಹೋಗಬೇಕಾಯಿತು.

Exit mobile version