Kundapra.com ಕುಂದಾಪ್ರ ಡಾಟ್ ಕಾಂ

ಕಾಲ್ತೋಡು: ಆಯುಷ್ ಸೇವಾ ಗ್ರಾಮ ಅನುಷ್ಠಾನ ಕಾರ್ಯಕ್ರಮ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಎಲ್ಲಾ ಜಿಲ್ಲೆಗಳನ್ನು ಗಣನೆಗೆ ತೆಗೆದುಕೊಂಡಾಗ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಿರುವುದು ಕೆಲವೇ ಜಿಲ್ಲೆಗಳು ಮಾತ್ರ. ಅದರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಅಗ್ರಸ್ಥಾನದಲ್ಲಿರುವುದು ಒಂದು ಹೆಮ್ಮೆಯ ಸಂಗತಿ ಎಂದು ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕಾಲ್ತೋಡು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದಲ್ಲಿ ಭಾನುವಾರ ೨೦೨೧-೨೨ನೇ ಸಾಲಿನ ಎಸ್‌ಸಿ ಎಸ್‌ಟಿ, ಟಿಎಸ್‌ಪಿ ಯೋಜನೆಯಡಿ ಆಯುಷ್ ಸೇವಾ ಗ್ರಾಮ ಅನುಷ್ಠಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮ ಹಿಂದಿನ ತಲೆಮಾರಿನಿಂದ ಬಂದಿರುವ ಖಾಸಗಿ ಆರೋಗ್ಯ ಕೇಂದ್ರಗಳು, ಶಿಕ್ಷಣ ಸಂಸ್ಥೆಗಳು ಸರ್ಕಾರಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಮಾಡಿರುವ ದೂರಗಾಮಿ ಯೋಚನೆಗೆ ಇಂದು ಈ ಎರಡೂ ವಿಭಾಗದಲ್ಲಿ ನಮ್ಮ ಜಿಲ್ಲೆ ಎತ್ತರದ ಸ್ಥಾನಕ್ಕೇರಲು ಸಾಧ್ಯವಾಯಿತು. ಇಂತಹ ಸಂದರ್ಭಗಳಲ್ಲಿ ಆರೋಗ್ಯವನ್ನು ಕೇವಲ ಆಸ್ಪತ್ರೆಗೆ ಸೀಮಿತಗೊಳಿಸದೇ ಸಮಾಜದ ಕಟ್ಟಕಡೆಯ ಸಾಮನ್ಯ ವ್ಯಕ್ತಿಯ ಮನೆ ಮತ್ತು ಮನಸ್ಸಿನವರೆಗೂ ತಲುಪಿ ಆರೋಗ್ಯವನ್ನು ಕಾಪಾಡಬೇಕಾಗಿದೆ. ರೋಗ ಬಂದ ಮೇಲೆ ಗುಣಪಡಿಸುದಕ್ಕಿಂತ ಬಾರದಂತೆ ತಡೆ ಹಿಡಿಯುವ ಬಗ್ಗೆ ಆರೋಗ್ಯದ ಜನಜಾಗೃತಿ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಕಾಲ್ತೋಡು ಗ್ರಾಪಂ ಅಧ್ಯಕ್ಷೆ ಲಲಿತಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ನಾಮಫಲಕ ಅನಾವರಣಗೊಳಿಸಿದರು. ಸಚಿವ ಮತ್ತು ಶಾಸಕರನ್ನು ಗ್ರಾಪಂ ವತಿಯಿಂದ ಸನ್ಮಾನಿಸಲಾಯಿತು. ತಹಶೀಲ್ದಾರ್ ಶೋಭಾಲಕ್ಷ್ಮಿ ಎಚ್. ಎಸ್., ಮಹಿಳಾ ಮತ್ತು ಮಕ್ಕಳ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ, ಗ್ರಾಪಂ ಉಪಾಧ್ಯಕ್ಷೆ ನೇತ್ರಾವತಿ, ಮಾಜಿ ಅಧ್ಯಕ್ಷ ಅಣ್ಣಪ್ಪ ಶೆಟ್ಟಿ ಬಟ್ನಾಡಿ, ಖಂಬದಕೋಣೆ ಗ್ರಾಪಂ ಅಧ್ಯಕ್ಷ ಸುಕೇಶ್ ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್, ಸಂಚಲನ ಫೌಂಡೇಶನ್ ಅಧ್ಯಕ್ಷ ಅಕ್ಷತ್ ಶೆಟ್ಟಿ ಕುಂದಾಪುರ ಉಪಸ್ಥಿತರಿದ್ದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ. ಸತೀಶ್ ಆಚಾರ್ಯ ಸ್ವಾಗತಿಸಿ, ಕಾಲ್ತೋಡು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ. ವೀಣಾ ಕಾರಂತ್ ಪ್ರಾಸ್ತಾವಿಸಿದರು. ಸುಂದರ್ ಜಿ. ಕಾರ್ಯಕ್ರಮ ನಿರೂಪಿಸಿ, ಗ್ರಾಪಂ ಪಿಡಿಒ ಸತೀಶ್ ತೋಳಾರ್ ವಂದಿಸಿದರು. ಅಲ್ಪ ಹಾಗೂ ದೀರ್ಘಕಾಲದ ವಿವಿಧ ರೋಗಗಳಿಂದ ಬಳಲುತ್ತಿರುವ ರೋಗಿಗಳಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಸಂಬಂಧಿಸಿದ ಕಾಯಿಲೆಗಳಿಗೆ ಉಚಿತ ಔಷಧಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮಕ್ಕೆ ಜಿಲ್ಲಾ ಆಯುಷ್ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾಡಳಿತ, ಜಿಪಂ, ಗ್ರಾಪಂ ಕಾಲ್ತೋಡು, ಸಂಚಲನ ಫೌಂಡೇಶನ್ ಕುಂದಾಪುರ ಸಹಭಾಗಿತ್ವ ನೀಡಿತ್ತು.

Exit mobile version