Kundapra.com ಕುಂದಾಪ್ರ ಡಾಟ್ ಕಾಂ

ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಸಾಕಷ್ಟು ಮರಳು ಲಭ್ಯ, ಅಕ್ರಮವಾಗಿ ಮರಳು ಮಾರಾಟ ಮಾಡಿದರೆ ಕ್ರಮ: ಡಿಸಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ,ಜ.6:
ಜಿಲ್ಲೆಯಲ್ಲಿ ಕಟ್ಟಡ ಕಾಮಗಾರಿಗಳನ್ನು ಕೈಗೊಳ್ಳಲು ಅಗತ್ಯವಿರುವ ಮರಳಿನ ದಾಸ್ತಾನಿದ್ದು, ಸಾರ್ವಜನಿಕರು ಸ್ಯಾಂಡ್ ಆಪ್ ಮೂಲಕ ಬೇಡಿಕೆಗಳನ್ನು ಸಲ್ಲಿಸುವುದರೊಂದಿಗೆ ಅಗತ್ಯವಿರುವ ಮರಳನ್ನು ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.

ಅವರು ಇಂದು ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್ ನಲ್ಲಿ ಮರಳು ವಿತರಣೆ ಕುರಿತು ನಡೆದ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಕಟ್ಟಡ ಕಾಮಗಾರಿ ಸೇರಿದಂತೆ ಅಭಿವೃಧ್ದಿ ಕಾರ್ಯಗಳನ್ನು ಕೈಗೊಳ್ಳಲು ಅಗತ್ಯವಿರುವ ಮರಳನ್ನು ಸಾರ್ವಜನಿಕರಿಗೆ ಪಾರದರ್ಶಕವಾಗಿ ವಿತರಿಸಲು ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿಯು ಸ್ಯಾಂಡ್ ಆಪ್ ಗಳಲ್ಲಿನ ಬೇಡಿಕೆಗನುಗುಣವಾಗಿ ವಿತರಿಸಲು ಮುಂದಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.

ಜಿಲ್ಲೆಯಲ್ಲಿ ಅಕ್ರಮವಾಗಿ ಮರಳು ಮಾರಾಟವಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ ಇವುಗಳ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು, ಮರಳು ಸಾಗಾಣಿಕೆ ವಾಹನ ಹಾಗೂ ದೋಣಿಗಳಲ್ಲಿ ಅಳವಡಿಸಿರುವ ಜಿಪಿಎಸ್ ನ ಪರಿಶೀಲಿಸುವುದರೊಂದಿಗೆ ಚಲನ ವಲನಗಳ ಬಗ್ಗೆ ನಿಗಾ ವಹಿಸಿ ಒಂದೊಮ್ಮೆ ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ದಂಡ ವಸೂಲಿ ಮಾಡಬೇಕು, ಮರಳು ತೆಗೆಯುವ ಧಕ್ಕೆ ಹಾಗೂ ದಾಸ್ತಾನು ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಸುವಂತೆ ಸೂಚನೆ ನೀಡಿದರು.

ಕುಂದಾಪುರ ವ್ಯಾಪ್ತಿಯಲ್ಲಿ ದೋಣಿಗಳ ಜಿಪಿಎಸ್ ಉಲ್ಲಂಘನೆ ಮಾಡಿದ ಮರಳು ಪರವಾನಗಿದಾರರ ವಿರುದ್ದ 16 ಪ್ರಕರಣ ದಾಖಲಿಸಿ 8 ಲಕ್ಷ ದಂಢ ವಿಧಿಸಲಾಗಿದೆ ಉಡುಪಿ ಮತ್ತು ಬ್ರಹ್ಮಾವರದಲ್ಲಿ 3 ಪ್ರಕರಣ ದಾಖಲಿಸಿ 50000 ಸಾವಿರ ದಂಢ ವಿಧಿಸುವುದರ ಜೊತೆಗೆ ಅನಧಿಕೃತವಾಗಿ ಮರಳು ಗಣಿಗಾರಿಕೆ ನಡೆಸಿ ಮರಳು ದಾಸ್ತಾನು ಮಾಡಿದವರ ವಿರುದ್ದ 34 ಪ್ರಕರಣ ದಾಖಲಿಸಿ 13 ಲಕ್ಷಕ್ಕೂ ಹೆಚ್ಚು ದಂಢ ವಿಧಿಸಲಾಗಿದೆ. ವಾಹನ ಜಿಪಿಎಸ್ ಉಲ್ಲಂಘಿಸಿದ 76 ಪ್ರಕರಣ ದಾಖಲಿಸಿ 5 ಲಕ್ಷÀ ದಂಡ ವಿಧಿಸಲಾಗಿದೆ ಎಂದರು.

ನವೆಂಬರ್ 24 ರಿಂದ ಡಿಸೆಂಬರ್ 31 ರ ವರೆಗೆ ಕಂಟ್ರೋಲ್ ರೂಂ ನಲ್ಲಿ 125 ದೂರುಗಳು ಸ್ವೀಕೃತವಾಗಿದ್ದು, ಅವುಗಳಲ್ಲಿ 123 ವಿಲೇವಾರಿ ಮಾಡಲಾಗಿದೆ ಎಂದ ಅವರು, ಲಿಖಿತ ಅಥವಾ ದೂರವಾಣಿ ಮೂಲಕ ಬರುವ ದೂರುಗಳನ್ನು ನಿರ್ಲಕ್ಷಿಸದೇ ಅವುಗಳ ಬಗ್ಗೆ ತನಿಖೆ ಕೈಗೊಂಡು ತಪ್ಪಿತಸ್ಥರು ಎಂದು ಕಂಡುಬAದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಕಲ್ಲು ಗಣಿಗಾರಿಕೆ ಹಾಗೂ ಕಲ್ಲು ಪುಡಿ ಮಾಡುವ ಘಟಕಗಳಿಗೆ ಪರವಾನಗಿ ನೀಡುವ ಸಂಧರ್ಭದಲ್ಲಿ ಸರ್ಕಾರ ಸೂಚಿಸಿರುವ ನಿಯಮಗಳು ಸರಿಯಾಗಿ ಪಾಲನೆಯಾಗಿದೆಯೇ ಎಂಬ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸುವುದರೊಂದಿಗೆ ಕಾನೂನಿನ ಅಡಿಯಲ್ಲಿ ಅವರುಗಳಿಗೆ ಲೈಸೆನ್ಸ್ ನೀಡುವಂತೆ ತಿಳಿಸಿದರು.

ಸರ್ಕಾರಿ ಜಾಗದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಮಾಡುವವರ ವಿರುದ್ದ ಪ್ರಕರಣಗಳನ್ನು ದಾಖಲಿಸಿ ದಂಢ ವಿಧಿಸಲಾಗಿದೆ ಆದರೂ ಅವರುಗಳು ಗಣಿಗಾರಿಕೆಯನ್ನು ಪುನಃ ಪುನಃ ಮಾಡುತ್ತಿರುವುದು ಕಂಡುಬರುತ್ತಿದೆ ಅಂತಹವರ ವಿರುದ್ದ ಕಂದಾಯ ಇಲಾಖೆ ಅಧಿಕಾರಿಗಳು ಭೂ ಕಬಳಿಕೆ ಅಧಿನಿಯಮದಡಿಯಲ್ಲಿ ಪ್ರಕರಣ ದಾಖಲಿಸಬೇಕೆಂದು ಸೂಚನೆ ನೀಡಿದರು.

ಸರ್ಕಾರಿ ಜಾಗದಲ್ಲಿ ಸಿಗುವ ಎಲ್ಲಾ ರೀತಿಯ ಖನಿಜಗಳ ಬ್ಲಾಕ್ ಗಳನ್ನು ಗುರುತಿಸುವುದರೊಂದಿಗೆ ಗಣಿಗಾರಿಕೆ ಕೈಗೊಳ್ಳಲು ಬ್ಲಾಕ್ ಗಳ ಹರಾಜು ಪ್ರಕ್ರಿಯೆ ಕೈಗೊಳ್ಳಲು ಕ್ರಮ ವಹಿಸಬೇಕು ಎಂದರು.

ಸಭೆಯಲ್ಲಿ ಕುಂದಾಪುರ ಡಿಎಫ್.ಓ ಆಶೀಶ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಸಿ.ಆರ್.ಝಡ್ ನ ಪ್ರಾದೇಶಿಕ ನಿರ್ದೇಶಕ ಶ್ರೀಪತಿ, ಹಿರಿಯ ಭೂ ವಿಜ್ಞಾನಿ ಸಂದೀಪ್ ಹಾಗೂ ಮತ್ತಿತರ ಅನುಷ್ಠಾನ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version