Kundapra.com ಕುಂದಾಪ್ರ ಡಾಟ್ ಕಾಂ

ವಿವಿಧ ಬೇಡಿಕೆ ಈಡೇರಿಕೆಗೆ ಮನವಿ ಸಲ್ಲಿಸಿದ ಮೀನುಗಾರರ ನಿಯೋಗ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ನಾಡದೋಣಿ ಮೀನುಗಾರರಿಗೆ ಡಿಸೆಂಬರ್ ಮತ್ತು ಜನವರಿ ತಿಂಗಳ ಸಬ್ಸಿಡಿ ಸೀಮೆಎಣ್ಣೆ ಬಿಡುಗಡೆ ಮಾಡುವಂತೆ ಹಾಗೂ ಸ್ಥಗಿತಗೊಂಡಿರುವ ಗಂಗೊಳ್ಳಿ ಮೀನುಗಾರಿಕಾ ಬಂದರಿನ ಜೆಟ್ಟಿ ಪುನರ್ ನಿರ್ಮಾಣ ಕಾರ್ಯವನ್ನು ಪುನರಾರಂಭಿಸುವಂತೆ ರಾಜ್ಯದ ಮೀನುಗಾರಿಕಾ ಇಲಾಖೆ ಸಚಿವ ಎಸ್. ಅಂಗಾರ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನೀಲ್ ಕುಮಾರ್ ಅವರನ್ನು ಸೋಮವಾರ ಭೇಟಿ ಮಾಡಿದ ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ ನೇತೃತ್ವದ ನಿಯೋಗ ಸಮಸ್ಯೆ ಬಗ್ಗೆ ಚರ್ಚೆ ನಡೆಸಿ ಮನವಿ ಸಲ್ಲಿಸಿತು.

ಮಂಗಳೂರು ಸರ್ಕ್ಯೂಟ್ ಹೌಸ್‌ನಲ್ಲಿ ಸಚಿವ ಅಂಗಾರ ಮತ್ತು ಕಾರ್ಕಳದಲ್ಲಿ ಸಚಿವ ಸುನೀಲ್ ಕುಮಾರ್ ಅವರನ್ನು ಭೇಟಿ ಮಾಡಿದ ನಿಯೋಗದ ಸದಸ್ಯರು ನಾಡದೋಣಿ ಮೀನುಗಾರರಿಗೆ ಡಿಸೆಂಬರ್ ಮತ್ತು ಜನವರಿ ತಿಂಗಳ ಸಬ್ಸಿಡಿ ಸೀಮೆಎಣ್ಣೆ ಬಿಡುಗಡೆ ಮಾಡುವಂತೆ ಹಾಗೂ ಸ್ಥಗಿತಗೊಂಡಿರುವ ಗಂಗೊಳ್ಳಿ ಮೀನುಗಾರಿಕಾ ಬಂದರಿನ ಜೆಟ್ಟಿ ಪುನರ್ ನಿರ್ಮಾಣ ಕಾರ್ಯವನ್ನು ಪುನರಾರಂಭಿಸುವಂತೆ ಮತ್ತು ಸಮುದ್ರ ಅಂಬುಲೆನ್ಸ್‌ನ್ನು ಅತೀ ಶೀಘ್ರದಲ್ಲಿ ಒದಗಿಸುವಂತೆ ಮನವಿ ಮಾಡಿತು.

ಈ ಸಂದರ್ಭ ಮಾತನಾಡಿದ ಸಚಿವ ಅಂಗಾರ, ಮೀನುಗಾರರಿಗೆ ಬಾಕಿ ಇರುವ ಡಿಸೆಂಬರ್ ಮತ್ತು ಜನವರಿ ತಿಂಗಳ ಸಬ್ಸಿಡಿ ಸೀಮೆಎಣ್ಣೆ ಬಿಡುಗಡೆ ಕುರಿತಂತೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರೊಂದಿಗೆ ಮಾತುಕತೆ ನಡೆಸಲಾಗಿದ್ದು, ಒಂದು ವಾರದೊಳಗೆ ಸೀಮೆಎಣ್ಣೆ ಬಿಡುಗಡೆಗೆ ಕ್ರಮಕೆಗೊಳ್ಳಲಾಗುವುದು. ಸ್ಥಗಿತಗೊಂಡಿರುವ ಗಂಗೊಳ್ಳಿ ಮೀನುಗಾರಿಕಾ ಬಂದರಿನ ಜೆಟ್ಟಿ ಪುನರ್ ನಿರ್ಮಾಣ ಕಾರ್ಯದ ಚರ್ಚೆ ನಡೆಸಲು ಜ.13ರಂದು ಬೆಂಗಳೂರಿನಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ಕರೆಯಲಾಗಿದ್ದು, ಸಮಸ್ಯೆ ಬಗೆಹರಿಯುವ ವಿಶ್ವಾಸ ವ್ಯಕ್ತಪಡಿಸಿದರು. ಗಂಗೊಳ್ಳಿ ಮೀನುಗಾರಿಕಾ ಬಂದರಿಗೆ ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಮೀನುಗಾರರಿಗೆ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳುವುದಾಗಿ ಸಚಿವ ಸುನೀಲ್ ಕುಮಾರ್ ಭರವಸೆ ನೀಡಿದರು.

ಸಂಘದ ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಉಪಾಧ್ಯಕ್ಷ ಸೂರಜ್ ಖಾರ್ವಿ, ನಿರ್ದೇಶಕರಾದ ರಾಜೇಶ ಸಾರಂಗ್, ಚಂದ್ರ ಖಾರ್ವಿ ಹಾಗೂ ಸ್ಥಳೀಯರಾದ ರೋಹಿತ್ ಖಾರ್ವಿ ಉಪಸ್ಥಿತರಿದ್ದರು.

Exit mobile version