ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ ಸಹಾಯ ಸಂಘದ ಅರ್ಹ ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಯೋಜನೆ ಮೂಲಕ ಪ್ರತಿ ತಿಂಗಳು ಸುಜ್ಞಾನನಿಧಿ ವೇತನ ನೀಡಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲೂ ಮಕ್ಕಳ ನಿರಂತರ ಕಲಿಕೆಗಾಗಿ ಸುಜ್ಞಾನನಿಧಿ ವೇತನವನ್ನು ವಿತರಿಸಲಾಗಿದ್ದು, ಇದರ ಪ್ರಯೋಜನ ಪಡೆದುಕೊಂಡ ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆದುಕೊಂಡು ಇದನ್ನು ಇನ್ನಷ್ಟು ಮಕ್ಕಳಿಗೆ ನೀಡಲು ಸಹಕರಿಸಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಸಮಿತಿ ಒಕ್ಕೂಟದ ಅಧ್ಯಕ್ಷ ರಘುರಾಮ ಪೂಜಾರಿ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಬೈಂದೂರು ತಾಲೂಕು ಇವರ ಆಶ್ರಯದಲ್ಲಿ ತ್ರಾಸಿಯಲ್ಲಿರುವ ತಾಲೂಕು ಯೋಜನಾ ಕಛೇರಿಯಲ್ಲಿ ಮಂಗಳವಾರ ಸುಜ್ಞಾನನಿಧಿ ವೇತನ ಮಂಜೂರಾತಿ ಪತ್ರ ವಿತರಿಸಿ ಅವರು ಮಾತನಾಡಿದರು.
ಬೈಂದೂರು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಸುಧಾಕರ ಆಚಾರ್ಯ ಶುಭಾಶಂಸನೆಗೈದರು. ಬೈಂದೂರು ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಕೃಷ್ಣ ಪೂಜಾರಿ, ಪ್ರಗತಿಬಂಧು ಸ್ವಸಹಾಯ ಸಂಘಗಳ ತ್ರಾಸಿ ವಲಯ ಅಧ್ಯಕ್ಷ ನಾಗರಾಜ ಖಾರ್ವಿ, ಜಿಪಂ ಮಾಜಿ ಸದಸ್ಯೆ ಶೋಭಾ ಜಿ.ಪುತ್ರನ್, ವಿವಿಧ ವಲಯಗಳ ವಲಯಾಧ್ಯಕ್ಷರು, ಜನಜಾಗೃತಿ ವೇದಿಕೆ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
ಜ್ಞಾನವಿಕಾಸ ಸಮನ್ವಯಾಧಿಕಾರಿ ಗೀತಾ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ತಾಲೂಕು ಯೋಜನಾಧಿಕಾರಿ ಶಶಿರೇಖಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಿದ್ಧಾಪುರ ವಲಯ ಮೇಲ್ವಿಚಾರಕಿ ಸವಿತಾ ವಂದಿಸಿದರು.