Site icon Kundapra.com ಕುಂದಾಪ್ರ ಡಾಟ್ ಕಾಂ

ಸಾಮಾಜಿಕ, ಆರ್ಥಿಕ ಸಮಾನತೆಯಿಂದ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ: ಕುಂದಾಪುರ ಉಪ ವಿಭಾಗಾಧಿಕಾರಿ ಕೆ. ರಾಜು

 ಕುಂದಾಪ್ರ ಡಾಟ್ ಕಾಂ ಸುದ್ದಿ.

ಕುಂದಾಪುರ: ಭಾರತ ವಿಶ್ವದಲ್ಲೇ ಅತ್ಯಂತ ದೊಡ್ಡ ಸಂವಿಧಾನ ಎನ್ನುವ ವೈಶಿಷ್ಟ್ಯ ಹೊಂದಿದೆ. ಸಂವಿಧಾನ ಅನುಷ್ಠಾನ ಹಾಗೂ ಸಾಗಿಬಂದ ಹಾದಿ ಸ್ಮರಿಸುವ, ನಾಳೆಗಳ ಯೋಚಿಸುವ ಸಂದರ್ಭದ ಪುಣ್ಯದಿನ ಗಣರಾಜ್ಯೋತ್ಸವ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ನವ ನಿರ್ಮಾಣ ಮಾಡುವ ನಮ್ಮ ಹಿರಿಯರ ಆಶಯಕ್ಕೆ ಚಾಲನೆ ನೀಡಿದ ದಿನವೂ ಗಣರಾಜ್ಯೋತ್ಸವ ದಿನವಾಗಿದೆ ಎಂದು ಕುಂದಾಪುರ ಉಪ ವಿಭಾಗಾಧಿಕಾರಿ ಕೆ. ರಾಜು ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಕಚೇರಿ, ತಾಲೂಕು ಪಂಚಾಯಿತಿ, ಪುರಸಭೆ ಆಶ್ರಯದಲ್ಲಿ ಇಲ್ಲಿನ ಗಾಂಧಿ ಮೈದಾನದಲ್ಲಿ ಬುಧವಾರ ನಡೆದ ಗಣರಾಜ್ಯೋತ್ಸವ ದ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಸಂದೇಶ ನೀಡಿದರು. ಸಂವಿಧಾನವು, ಜನತೆ ಹಕ್ಕುಗಳ ಮೂಲವಾಗಿ ಸಮರ್ಪಿತವಾಗಿದ್ದು, ನಮ್ಮ ಸಾಮಾಜಿಕ ಹಾಗೂ ಆರ್ಥಿಕ ಬದುಕಿನಲ್ಲಿ ಸಮಾನತೆ ಇದ್ದರೆ ಮಾತ್ರ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ ಎನ್ನುವ ತತ್ವದ ಮೇಲೆ ಆಧಾರಿತವಾಗಿದೆ ಎಂದರು.

ಕರೋನಾ ನಡುವೆಯೇ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ವಲಯಗಳಿಗೆ ಹೆಚ್ಚಿನ ಒತ್ತು ನೀಡಬೇಕಾಗಿದ್ದು, ಕರಾವಳಿ ಭೌಗೋಳಿಕ, ಸಾಂಸ್ಕೃತಿಕ ವೈಶಿಷ್ಟತೆ ಇನ್ನಷ್ಟು ಪರಿಚಯಿಸಿ ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಕಾಯಕಲ್ಪ ನೀಡಬೇಕಾಗಿದೆ ಎಂದರು. 

ಶಿಕ್ಷಣ, ವೈದ್ಯಕೀಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿರುವ ನಮ್ಮ ಕರಾವಳಿ ಪ್ರದೇಶದಲ್ಲಿ ಕಿರು ಉದ್ಯಮ, ಪ್ರವಾಸೋದ್ಯಮ ಅಭಿವೃದ್ಧಿ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಟ್ಟಿನಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವ ದಿಸೆಯಲ್ಲಿ ಆದ್ಯತೆಯನ್ನಾಗಿ ಪರಿಗಣಿಸಿ ಕಾರ್ಯೋನ್ಮಖವಾಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.  

ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಪುರಸಭೆ ಉಪಾಧ್ಯಕ್ಷ ಸಂದೀಪ್ ಖಾರ್ವಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿಜಯ್ ಎಸ್ ಪೂಜಾರಿ, ಡಿವೈಎಸ್ಪಿ ಶ್ರೀಕಾಂತ್, ಪುರಸಭಾ ಸದಸ್ಯರಾದ ದೇವಕಿ ಸಣ್ಣಯ್ಯ, ಪ್ರಭಾಕರ ವಿ, ಗಿರೀಶ್ ಜಿ.ಕೆ, ಚಂದ್ರಶೇಖರ್ ಖಾರ್ವಿ, ನಾಮನಿರ್ದೇಶಕ ಸದಸ್ಯರಾದ ಪುಷ್ಪ ಶೇಟ್, ರತ್ನಾಕರ್,  ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಯುವಜನ ಮತ್ತು ಕ್ರೀಡಾ ಇಲಾಖೆ  ಕುಸುಮಾಕರ್ ಶೆಟ್ಟಿ ಇದ್ದರು. 

ಕುಂದಾಪುರ ನಗರ ಠಾಣಾಧಿಕಾರಿ ಸದಾಶಿವ್ ಆರ್. ಗವರೋಜಿ ಗೌರವ ವಂದನೆ ಸಲ್ಲಿಸಿದರು. ಪಥಸಂಚಲನದಲ್ಲಿ ಪೊಲೀಸ್ ಇಲಾಖೆ, ಗೃಹ ರಕ್ಷಕ ದಳ ಸಿಬ್ಬಂದಿಗಳು ಭಾಗವಹಿಸಿದರು. ಸೈಂಟ್ ಜೋಸೇಫ್ ಶಾಲಾ ವಿದ್ಯಾರ್ಥಿಗಳು ಬ್ಯಾಂಡ್ ಸೆಟ್ ನೊಂದಿಗೆ ಪಥಸಂಚಲನಕ್ಕೆ ಸಹಕರಿಸಿದರು.

ಕುಂದಾಪುರ ತಹಸೀಲ್ದಾರ್ ಕಿರಣ್ ಜಿ. ಗೌರಯ್ಯ ಸ್ವಾಗತಿಸಿ, ಕ್ಷೇತ್ರ ಶಿಕ್ಷಣಾಧಿಕಾರಿ ಅರುಣ್ ಕುಮಾರ್ ಶೆಟ್ಟಿ ವಂದಿಸಿದರು. ಪತ್ರಕರ್ತ ಚಂದ್ರ ಶೇಖರ್ ಬೀಜಾಡಿ ನಿರೂಪಿಸಿದರು.

Exit mobile version