Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ರಾಮಕ್ಷತ್ರಿಯ ಯುವಕ ಮಂಡಳಿ ಗಣೇಶೋತ್ಸವಕ್ಕೆ ವೈಭವಪೂರಿತ ಮೆರವಣಿಗೆಯೊಂದಿಗೆ ತೆರೆ

ರಾಮಕ್ಷತ್ರಿಯ ಶ್ರೀ ಗಣೇಶೋತ್ಸವ ಸುವರ್ಣ ಸಂಭ್ರಮಕ್ಕೆ ಅದ್ದೂರಿ ತೆರೆ

ಕುಂದಾಪುರ: ಇಲ್ಲಿನ ರಾಮಕ್ಷತ್ರಿಯ ಯುವಕ ಮಂಡಲದ ಶ್ರೀ ಗಣೇಶೋತ್ಸವ ಸುವರ್ಣ ಮಹೋತ್ಸವ ಸಮಾರಂಭ ಏಳು ದಿನಗಳು ಕಾಲ ವಿಜೃಂಭಣೆಯಿಂದ ಜರುಗಿ ವೈಭವಪೂರಿತ ಮೆರವಣಿಗೆಯೊಂದಿಗೆ ಸಮಾಪನಗೊಂಡಿತು. ಈ ಭಾರಿಯ ಸುವರ್ಣ ಮಹೋತ್ಸವಕ್ಕೆ ಒಂದು ವರ್ಷದಿಂದಲೇ ತಯಾರಿ ನಡೆಸಿದ್ದ ರಾಮಕ್ಷತ್ರಿಯ ಯುವಕ ಮಂಡಳಿ ವಿವಿಧ ಕಾರ್ಯಕ್ರಮಗಳು, ರಾಜ್ಯ ಮಟ್ಟದ ಕ್ರೀಡಾಕೂಟ ಮುಂತಾದವುಗಳ ಮೂಲಕ ಸಮಾಜ ಬಂಧುಗಳನ್ನು ಸಂಘಟಿಸಿತ್ತು.

ಸೆ.18ರಂದು ಕುಂದಾಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಪುರಮೆರವಣಿಗೆಯಲ್ಲಿ ಗಣೇಶನ ವಿಗ್ರಹವನ್ನು ತಂದು ಪೂಜಾ ಪೀಠದಲ್ಲಿ ಪ್ರತಿಷ್ಠಾಪಿಸುವುದರಿಂದ ಮೊದಲ್ಗೊಂಡು ಪ್ರತಿನಿತ್ಯ ಗಣಹೋಮ, ಮಹಾಪೂಜೆ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ಜರುಗಿತ್ತು.

ಪ್ರತಿದಿನ ಸಂಜೆ ವಿವಿಧ ಸ್ವರ್ಧೆ, ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು ಸೆ.19ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಆಗಮಿಸಿ ಧಾರ್ಮಿಕ ಪ್ರವಚನ ನೀಡಿ ಆಶಿರ್ವದಿಸಿದರು.

ಸೆ.23ರ ಸಂಜೆ ನಡೆದ ವೈಭವಪೂರಿತ ಪುರಮೆರವಣಿಗೆ ಸಾರ್ವಜನಿಕರ ಗಮನ ಸೆಳೆಯಿತು. ಕುಂದಾಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದಿಂದ ಆರಂಭಗೊಂಡು ಶಾಸ್ತ್ರೀವೃತ್ತವನ್ನು ಸುತ್ತುವರಿದ ಪಂಚಗಂಗಾವಳಿ ನದಿಯತ್ತ ಸಾಗಿದ ಬೃಹತ್ ಮೆರವಣಿಗೆ ಈ ಭಾರಿ ವಿಶೇಷತೆಗಳಿಂದ ಕೂಡಿತ್ತು.

ವಿಶೇಷ ಆಕರ್ಷಣೆಯಾಗಿ 65 ಬಣ್ಣ ಬಣ್ಣದ ವಿದ್ಯುದಲಾಂಕಾರಗಳಿಂದ ಕೂಡಿದ ಟ್ಯಾಬ್ಲೊಗಳು, ವಿವಿಧ ಸಂದೇಶ ಸಾರುವ ಟ್ಯಾಬ್ಲೋಗಳು ಕುಂದಾಪುರದ ಮುಖ್ಯರಸ್ತೆಯಲ್ಲಿ ಸಂಚರಿಸಿದವು.
ಕೇರಳದ ಚಂಡೆ, ಗಣಪತಿ ಟ್ಯಾಬ್ಲೋ, ರಾಮಮಂದಿರ, ಬೆಂಕಿ ಆಟ, ಕಾಳಿಂಗ ಕೃಷ್ಣ ನರ್ತನ, ಹುಲಿವೇಷ, ಸ್ವರ್ಣ ಕುಟೀರ ಸ್ಥಬ್ದ ಚಿತ್ರ, ಕುದುರೆ ಗಾಡಿ, ಶ್ರೀ ಕೃಷ್ಣ ಪಾರಿಜಾತ, ರಾಮಾಂಜನೇಯ ಸ್ತಬ್ಧ ಚಿತ್ರ, ಮಹಿಳೆಯರ ಡೊಳ್ಳು ಕುಣಿತ, ಚಂಡೆ, ಭಜನೆ, ಸೇರಿದಂತೆ ಹತ್ತಾರು ಟ್ಯಾಬ್ಲೋ, ನೃತ್ಯರೂಪಕ ಮೆರವಣಿಗೆಯ ಮೆರಗು ಹೆಚ್ಚಿಸಿದವು. ಮೆರವಣಿಗೆಯ ಬಳಿಕ ಗಣಪತಿಯ ವಿಗ್ರಹವನ್ನು ಪಂಚಗಂಗಾವಳಿ ನದಿಯಲ್ಲಿ ವಿಸರ್ಜಿಸಲಾಯಿತು.

ಮೆರವಣಿಗೆಯಲ್ಲಿ ರಾಮಕ್ಷತ್ರಿಯ ಯುವಕ ಮಂಡಲದ ಅಧ್ಯಕ್ಷ ರಾಧಾಕೃಷ್ಣ ಯು, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಕಲ್ಪತರು, ಕಾರ್ಯದರ್ಶಿ ರಾಜಶೇಖರ ಹೆಗ್ಡೆ, ಕುಂದಾಪುರ ರಾಮಕ್ಷತ್ರಿಯ ಸಂಘದ ಅಧ್ಯಕ್ಷ ಸುರೇಶ್ ಬೆಟ್ಟಿನ್ ಸೇರಿದಂತೆ ರಾಮಕ್ಷತ್ರಿಯ ಸಮಾಜದ ವಿವಿಧ ಗಣ್ಯರು, ಸಮಾಜ ಭಾಂಧವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

Exit mobile version