Kundapra.com ಕುಂದಾಪ್ರ ಡಾಟ್ ಕಾಂ

ಕರ್ಕುಂಜೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸೊಬಗು ಹೆಚ್ಚಿಸಿದ ಕನ್ನಡ ಮನಸುಗಳು ಯುವ ತಂಡ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ
: ಕನ್ನಡ ಮನಸುಗಳು ಸಂಸ್ಥೆಯಿಂದ ಹಮ್ಮಿಕೊಂಡ ‘ಸರಕಾರಿ ಶಾಲೆ ಉಳಿಸಿ ಅಭಿಯಾನ’ದ ಭಾಗವಾಗಿ ಯುವ ತಂಡವೊಂದು ಶ್ರಮದಾನದ ಮೂಲಕ ಕರ್ಕುಂಜೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸುಣ್ಣ ಬಣ್ಣ ಮಾಡಿ ಶಾಲೆಯ ಮೆರಗು ಹೆಚ್ಚಿಸಿದ್ದಾರೆ. ಜೊತೆಗೆ ಶಾಲೆಗೆ ಆಧುನಿಕ ಕಲಿಕಾ ಪರಿಕರ, ವಾಟರ್ ಫಿಲ್ಟರ್, ಫ್ಯಾನ್ ಮೊದಲಾದ ಅಗತ್ಯ ವಸ್ತುಗಳು, ಶಾಲಾ ಮಕ್ಕಳಿಗೆ ಪುಸ್ತಕ, ಪೆನ್ನು, ಮಾಸ್ಕ್ ದೇಣಿಗೆಯಾಗಿ ನೀಡಿ ಸೇವಾ ಸಾರ್ಥಕ್ಯ ಮೆರೆದಿದ್ದಾರೆ.

ವಿವಿಧೆಡೆ ನೌಕರರಾಗಿರುವ ತಂಡದ ಸದಸ್ಯರು ವೀಕೇಂಡ್ ರಜೆಯನ್ನು ಸದುಪಯೋಗಪಡಿಸಿಕೊಂಡು ಕನ್ನಡ ಶಾಲೆ ಉಳಿಸಿ ಅಭಿಯಾನ ನಡೆಸುತ್ತಿದೆ. ಅದರಂತೆ ಅದರಂತೆ ಕರ್ಕುಂಜೆ ಶಾಲೆಯ ಹಳೆ ವಿದ್ಯಾರ್ಥಿ ಗಣೇಶ್ ಕೊಡ್ಲಾಡಿ ಅವರ ಮನವಿ ಮೇರೆಗೆ ಕುಂದಾಪುರ ತಾಲೂಕಿನ ಕರ್ಕುಂಜೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕೂಡಿಗೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಬೆಂಗಳೂರಿನಿಂದ ಆಗಮಿಸಿದ 50ಕ್ಕೂ ಹೆಚ್ಚು ಮಂದಿಯ ತಂಡ ಶನಿವಾರ ಕರ್ಕುಂಜೆ ಶಾಲೆಯಲ್ಲಿ ಅಭಿಯಾನ ನಡೆಸಿತು. ಭಾನುವಾರದಂದು ಕೂಡಿಗೆ ಶಾಲೆಯಲ್ಲಿ ಅಭಿಯಾನ ಮುಂದವರಿಸಿದೆ. ಬೆಂಗಳೂರಿನಲ್ಲಿನ ದಾನಿಗಳು ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.

ಕರ್ಕುಂಜೆ ಶಾಲೆ ಕಾಂಪೌಂಡ್ ಗೋಡೆಗೆ ವಾರ್ಲಿ ಆರ್ಟ್, ಒಳಭಾಗದಲ್ಲಿ ಶಾಲೆ ಗೋಡೆಗಳಿಗೆ ಸುಣ್ಣಬಣ್ಣ, ಮುಖ್ಯ ರಸ್ತೆಗೆ ಕಾಣುವ ಹಾಗಿರುವ ಕೊಠಡಿಯ ಗೋಡೆಯಲ್ಲಿ ಪೇಂಟಿಂಗ್ ಮೂಲಕ ಯಕ್ಷಗಾನದ ಕಲಾಕೃತಿ, ಪಿಲ್ಲರ್ಗಳಿಗೆ ಬಣ್ಣ, ಧ್ವಜಸ್ತಂಭಕ್ಕೆ ಬಣ್ಣ ಬಳಿಯಲಾಯಿತು. ಕನ್ನಡ ಚಿತ್ರನಟಿ ನೀತು ಶೆಟ್ಟಿ ಸೇರಿದಂತೆ ಕರ್ಜುಂಜೆ ಶಾಲಾ ಎಸ್.ಡಿ.ಎಂ.ಸಿ ಸದಸ್ಯರು, ಹಳೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದ ಕೈಜೋಡಿಸಿದರು.

ರಾಜ್ಯದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸರ್ಕಾರಿ ಶಾಲೆಗಳನ್ನು ಗುರುತಿಸಿ ದಾನಿಗಳ ಸಹಕಾರದೊಂದಿಗೆ ಲಕ್ಷಗಟ್ಟಲೇ ವೆಚ್ಚದಲ್ಲಿ ಸುಣ್ಣ ಬಣ್ಣ ಮತ್ತು ಅಗತ್ಯವಿರುವ ವಸ್ತುಗಳನ್ನು ನೀಡುವ ವ್ಯವಸ್ಥೆ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯಾದ್ಯಂತ ಈವರೆಗೆ 10 ಸರ್ಕಾರಿ ಶಾಲೆಗಳಿಗೆ ಬಣ್ಣ ಬಳಿದು, ಆಯಾ ಶಾಲೆಗಳಿಗೆ ಅಗತ್ಯವಿರುವ ನೀರು, ಟಾಯ್ಲೆಟ್ ಸೇರಿ ವಿವಿಧ ಮೂಲ ಸೌಕರ್ಯಗಳನ್ನು ಒದಗಿಸಿದ್ದಾರೆ. ಈಗಾಗಾಲೇ ಕಾಸರಗೋಡು, ಬೆಂಗಳೂರು, ದಕ್ಷಿಣಕನ್ನಡದ ಸುಳ್ಯ, ಉಡುಪಿ, ರಾಮನಗರ, ಹಾಸನ, ಮಂಡ್ಯ, ಶಿವಮೊಗ್ಗ ಜಿಲ್ಲೆಯ ಶಾಲೆಗಳಲ್ಲಿ ಈ ಅಭಿಯಾನ ನಡೆದಿದೆ.

ಕನ್ನಡ ನಾಡು, ನುಡಿ, ನೆಲ, ಜಲ ಹೀಗೆ ಕನ್ನಡ ಪರ ಕೆಲಸಗಳನ್ನು ಮಾಡುತ್ತಾ ಒಂದಷ್ಟು ಯುವಕ ಯುವತಿಯರು ಒಂದಾಗಿ ‘ಕನ್ನಡ ಮನಸುಗಳು’ತಂಡ ಹುಟ್ಟಿಕೊಂಡಿದೆ. ಇಲ್ಲಿ ಸರಕಾರಿ ನೌಕರಿ ಖಾಸಗಿ ವೃತ್ತಿಯಲ್ಲಿ ತೊಡಗಿಕೊಂಡವರಿದ್ದಾರೆ. ತಂಡದ ಬಹುತೇಕರು ಕರ್ನಾಟಕದ ಗ್ರಾಮೀಣ ಭಾಗದ ಶಾಲೆಗಳಲ್ಲಿ ಕಲಿತು, ಬಳಿಕ ವಿವಿಧ ಕ್ಷೇತ್ರಗಳಲ್ಲಿ ಪದವಿ, ಉನ್ನತ ಶಿಕ್ಷಣ ಪಡೆದು ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದಿದ್ದೇವೆ. ತಾವು ಕಲಿತ ಗ್ರಾಮೀಣ ಭಾಗದ ಶಾಲೆಗಳ ಬಗ್ಗೆ ಅದೇ ಕಾಳಜಿ, ಅಭಿಮಾನ ಮತ್ತು ಪ್ರೀತಿಯನ್ನು ಈಗಲೂ ಇಟ್ಟುಕೊಂಡಿದ್ದೇವೆ. ಇಂತಹ ಶಾಲೆಗಳಿಗೆ ತಮ್ಮ ಕೈಲಾದಷ್ಟು ಒಳಿತು ಮಾಡಬೇಕು ಎಂಬ ಆಸೆಯೊಂದಿಗೆ ಒಂದಾಗಿ ಶುರು ಮಾಡಿದ ಕನ್ನಡ ಶಾಲೆ ಉಳಿಸಿ ಅಭಿಯಾನ ರಾಜ್ಯದ ವಿವಿಧೆಡೆಯ ಹಲವು ಸರ್ಕಾರಿ ಶಾಲೆಗಳನ್ನು ಆಧುನಿಕಗೊಳಿಸಿದೆ ಮತ್ತು ಅಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಹೊಸ ಹುರುಪು, ಉತ್ಸಾಹ ಮೂಡಿಸುವ ವಾತಾವರಣವನ್ನು ರೂಪಿಸಿಕೊಟ್ಟಿದೆ. ಸರಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸರಕಾರಿ ಶಾಲೆಗಳ ಪೋಷಣೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. – ಪವನ್, ತಂಡದ ಪ್ರಮುಖ

ಶಾಲೆಯಲ್ಲಿ ಶ್ರಮದಾನದ ಜೊತೆಗೆ ವಿವಿಧ ಪರಿಕರಗಳನ್ನು ದೇಣಿಗೆ ನೀಡಿರುವುದು ಸಂತೋಷದ ವಿಚಾರ. ರಾಜ್ಯ ವಿವಿಧೆಡೆಗಳಿಂದ ಶಾಲೆಯ ಬಂದು ತೋರಿದ ಕಾಳಜಿಗೆ ಕನ್ನಡ ಮನಸುಗಳು ತಂಡವನ್ನು ಈ ಊರು, ಶಾಲೆಯವರು ಬಹುಕಾಲ ನೆನೆಯಲಿದೆ. – ಮೋತಿಲಾಲ್ ಲಮಾಣಿ, ಮುಖ್ಯ ಶಿಕ್ಷಕರು ಕರ್ಕುಂಜೆ ಶಾಲೆ

Exit mobile version