Kundapra.com ಕುಂದಾಪ್ರ ಡಾಟ್ ಕಾಂ

ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ಗೇಟ್ ಬಳಿ ತಡೆದ ಪ್ರಾಂಶುಪಾಲರ ನಡೆ ಅಮಾನವೀಯ – ತಬ್ರೇಜ್ ನಾಗೂರು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರುತ್ತಿದ್ದ ಕಾರಣಕ್ಕೆ ಕುಂದಾಪುರ ಸರಕಾರಿ ಜ್ಯೂನಿಯರ್ ಕಾಲೇಜಿನ ಪ್ರಾಂಶುಪಾಲರು ಕಾಲೇಜು ಗೇಟಿನ ಒಳಗಡೆ ಬಿಡದೆ ತಡೆದಿದ್ದು ಅಮಾನವೀಯ ನಡೆಯಾಗಿದೆ. ಪ್ರಾಂಶುಪಾಲರು ತಮ್ಮ ಹುದ್ದೆಯ ಘನತೆಯನ್ನು ಗಾಳಿಗೆ ತೂರಿ ಸರ್ಕಾರದ ಕೈಗೊಂಬೆಯಂತೆ ವರ್ತಿಸಿ ಆ ಹುದ್ದೆಗೂ ಅಗೌರವ ತೋರಿದ್ದಾರೆ. ಪ್ರಾಂಶುಪಾಲರ ಈ ನಡೆಯನ್ನು ಖಂಡಿಸುವುದಾಗಿ ಬೈಂದೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ತಬ್ರೇಜ್ ನಾಗೂರು ಹೇಳಿದ್ದಾರೆ.

ಪ್ರಾಂಶುಪಾಲರು ವಿದ್ಯಾರ್ಥಿನಿಯರನ್ನು ತಡೆದ ಸಂದರ್ಭದಲ್ಲಿ ಪದೇ ಪದೇ ಶಾಸಕರಿಂದ ಅನುಮತಿ ಇಲ್ಲ ಎಂದು ಹೇಳುತ್ತಿದ್ದುದು ಏನನ್ನು ಸೂಚಿಸುತ್ತದೆ? ಪ್ರಾಂಶುಪಾಲರು ಬಿಜೆಪಿಯ ಏಜೆಂಟ್ ಹಾಗೆ ಏಕೆ ವರ್ತಿಸುತ್ತಿದ್ದಾರೆ? ವಿದ್ಯಾರ್ಥಿಗಳು ವಿದ್ಯೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕಾದುದು ಪ್ರಾಂಶುಪಾಲರ ಆದ್ಯ ಕರ್ತವ್ಯ ಹಾಗೂ ಜವಾಬ್ದಾರಿ. ಆದರೆ ಕುಂದಾಪುರದ ಜೂನಿಯರ್ ಕಾಲೇಜಿನ ಪ್ರಾಂಶುಪಾಲರು ಖುದ್ದು ಮುಸ್ಲಿಂ ವಿದ್ಯಾರ್ಥಿನಿಯರು ವಿದ್ಯೆಯಿಂದ ವಂಚಿತರಾಗುವ ಹಾಗೆ, ಮುಸ್ಲಿಂ ವಿದ್ಯಾರ್ಥಿನಿಯರು ಗೇಟಿನ ಒಳಗಡೆ ಬಾರದಂತೆ ಕಾವಲು ಕಾಯುತ್ತಿದ್ದಾರೆ. “ನೀವು ಹಾಕುವ ತಲೆವಸ್ತ್ರದ ಕಾರಣ ನಮ್ಮ ಕಾಲೇಜಿನ ಒಳಗೆ ಪ್ರವೇಶವಿಲ್ಲ”ಎಂದು ಗೇಟಿನ ಒಳಗಡೆಯೂ ಬಿಡದೆ ವಿದ್ಯಾರ್ಥಿನಿಯರನ್ನು ಗಂಟೆಗಟ್ಟಲೆ ರಸ್ತೆ ಬದಿಯಲ್ಲಿ ಕೂರಿಸಿದ್ದು ಪ್ರಾಂಶುಪಾಲರ ಹುದ್ದೆಗೆ ತಾನು ಅನರ್ಹ ಎಂದು ಸಾಬೀತುಪಡಿಸಿದ್ದಾರೆ ಅವರ ಈ ನಡೆಯನ್ನು ಬೈಂದೂರು ಅಲ್ಪಸಂಖ್ಯಾತ ಘಟಕ ಖಂಡಿಸುತ್ತದೆ ಎಂದು ತಬ್ರೇಜ್ ನಾಗೂರು ಹೇಳಿದ್ದಾರೆ.

Exit mobile version