Kundapra.com ಕುಂದಾಪ್ರ ಡಾಟ್ ಕಾಂ

ಕುಂಭಾಶಿ: ಅಯೋಧ್ಯಾ ‘ಶ್ರೀ ರಾಮ ದಿವ್ಯ ಬ್ರಹ್ಮರಥ’ ನಿರ್ಮಾಣಕ್ಕೆ ದಾರು ಮುಹೂರ್ತ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಕುಂಭಾಶಿಯ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದಲ್ಲಿ ಅಯೋಧ್ಯೆ ರಾಮ ಮಂದಿರದ ‘ಶ್ರೀ ರಾಮ ದಿವ್ಯ ಬ್ರಹ್ಮರಥ’ ನಿರ್ಮಾಣಕ್ಕೆ ದಾರು ಮುಹೂರ್ತದ ಮೂಲಕ ಶನಿವಾರ ಚಾಲನೆ ನೀಡಲಾಯಿತು.

ರಥ ಶಿಲ್ಪಿ ಲಕ್ಚ್ಮೀನಾರಾಯಣ ಆಚಾರ್ಯರು ಕಚ್ಚು ಹಾಕುವ ಮೂಲಕ ಚಾಲನೆ ನೀಡಿದರು. ಹನುಮದ್ ಜನ್ಮಭೂಮಿ ಕಿಷ್ಕಿಂಧಾ ಕ್ಷೇತ್ರದ ಶ್ರೀ ಗೋವಿಂದಾನಂದ ಸರಸ್ವತೀ ಸ್ವಾಮೀಜಿ, ಆನೆಗುಂದಿ ಮಠ ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ ರಥ ನಿರ್ಮಾಣ ಕಾರ್ಯದಲ್ಲಿ ಉಪಸ್ಥಿತರಿದ್ದು ಆಶೀರ್ವಚಿಸಿದರು.

ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ರಥ ಶಿಲ್ಪಿ ರಾಜಗೋಪಾಲ ಆಚಾರ್ಯ, ಹೈಕೋರ್ಟ್ ನಿವೃತ್ತ ನ್ಯಾಯಾದೀಶ ಕುಮಾರ್, ಕೋಟೇಶ್ವರ ದೇವಸ್ಥಾನ ಜೀರ್ಣೋದ್ದಾರ ಸಮಿತಿ ಕೋಣಿ ಕೃಷ್ಣಾನಂದ ಕಾರಂತ ಇದ್ದರು.

ಶ್ರೀ ರಾಮ ದಿವ್ಯ ಬ್ರಹ್ಮರಥ ಬೃಹತ್ ಸಾಗುವಾನಿ ಮರ:
ಶ್ರೀ ರಾಮ ಮಂದಿರಕ್ಕಾಗಿ ನಿರ್ಮಿಸಲು ಉದ್ದೇಶಿಸಿರುವ 84 ಅಡಿ ಎತ್ತರದ “ಶ್ರೀ ರಾಮ ದಿವ್ಯ ಬ್ರಹ್ಮರಥ” ನಿರ್ಮಾಣಕ್ಕಾಗಿ ಬೃಹತ್ ಸಾಗುವಾನಿ ಮರದ ಬೊಡ್ಡೆಗಳನ್ನು ಹೊತ್ತ ವಾಹನ ಆಂಧ್ರಪ್ರದೇಶದ ವಾರಂಗಲ್ ನಿಂದ ಬುಧವಾರ ಸಂಜೆ ಶ್ರೀ ಕ್ಷೇತ್ರ ಕೋಟೇಶ್ವರಕ್ಕೆ ಆಗಮಿಸಿತು. ಕೋಟೇಶ್ವರದ ಶ್ರೀ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆಯ ಕುಂಭಾಶಿ ಕೇಂದ್ರದಲ್ಲಿ ಈ ಬ್ರಹ್ಮರಥ ನಿರ್ಮಾಣಗೊಳ್ಳಲಿದೆ.

ಭಾರೀ ಗಾತ್ರದ ಸಾಗುವಾನಿ ಬೊಡ್ಡೆಗಳನ್ನು ಹೊತ್ತ ಮಲ್ಟಿ ಅಕ್ಸೆಲ್ ಭಾರೀ ವಾಹನದೊಂದಿಗೆ ಶ್ರೀ ಹನುಮದ್ ಜನ್ಮಭೂಮಿ ಕಿಷ್ಕಿಂಧಾ ಕ್ಷೇತ್ರದ ಶ್ರೀ ಗೋವಿಂದಾನಂದ ಸರಸ್ವತೀ ಸ್ವಾಮೀಜಿಯವರು ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಳ ಮುಂಭಾಗ ಆಗಮಿಸುತ್ತಿದ್ದಂತೆ ದೇವಳ ಆಡಳಿತ ಸಮಿತಿ, ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿಯವರು ಹಾಗೂ ಗ್ರಾಮಸ್ಥರು ಹರಹರ ಮಹಾದೇವ ಘೋಷಣೆಯೊಂದಿಗೆ ಸಂಭ್ರಮದಿಂದ ಬರಮಾಡಿಕೊಂಡರು.

ಶ್ರೀ ಕೋಟಿಲಿಂಗೇಶ್ವರನ ದರ್ಶನದ ನಂತರ ತಂತ್ರಿ ಪ್ರಸನ್ನ ಕುಮಾರ ಐತಾಳರು ವಾಹನಕ್ಕೆ ಪೂಜೆ ನೆರವೇರಿಸಿ, ಈಡುಗಾಯಿ ಒಡೆದರು. ಈ ಸಂದರ್ಭ ಆಶೀರ್ವಚನ ನೀಡಿದ ಕಿಷ್ಕಿಂಧಾ ಮಠಾಧೀಶ ಶ್ರೀ ಗೋವಿಂದಾನಂದ ಸರಸ್ವತೀ ಸ್ವಾಮಿಯವರು, ಶ್ರೀ ರಾಮ ಜನ್ಮಭೂಮಿ ಅಯೋಧ್ಯೆ ಮತ್ತು ಶ್ರೀ ಹನುಮದ್ ಜನ್ಮಭೂಮಿ ಕಿಷ್ಕಿಂಧೆ ಕ್ಷೇತ್ರಗಳ 17 ಲಕ್ಷ ವರ್ಷಗಳ, ತ್ರೇತಾಯುಗದ ದಿವ್ಯ ಸಂಬಂಧ ವೈಭವಗಳನ್ನು ಪುನಃ ಸ್ಥಾಪಿಸಲು ಭಗವಂತನ ಪ್ರೇರಣೆಯಿಂದ ಈ ಬ್ರಹ್ಮರಥವನ್ನು ನಿರ್ಮಿಸಿ, ಶ್ರೀ ಹನುಮಂತ ದೇವರ ಪರವಾಗಿ ಅಯೋಧ್ಯಾಪತಿ ಶ್ರೀ ರಾಮಚಂದ್ರನಿಗೆ ಸಮರ್ಪಿಸಲಾಗುವುದು. 84 ಲಕ್ಷ ಜೀವರಾಶಿಗಳು ಆ ಭಗವಂತನನ್ನೇ ಆಶ್ರಯಿಸಿಕೊಂಡಿರುವುದರ ಪ್ರತೀಕವಾಗಿ ಈ ನೂತನ ಬ್ರಹ್ಮರಥವವು 84 ಅಡಿ ಎತ್ತರವಿರುತ್ತದೆ. ಶೃಂಗೇರಿ ಕ್ಷೇತ್ರಕ್ಕೆ ಆಗಮಿಸಿದಾಗ ಜಗದ್ಗುರುಗಳು ಪೂಜೆ ನೆರವೇರಿಸಿ ಆಶೀರ್ವದಿಸಿದ್ದಾರೆ ಎಂದರು.

ಶ್ರೀ ಕೋಟಿಲಿಂಗೇಶ್ವರ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ. ಪ್ರಭಾಕರ ಶೆಟ್ಟಿ ಸ್ವಾಮೀಜಿಯವರಿಗೆ ಫಲ ಸಮರ್ಪಣೆ ಮಾಡಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೋಣಿ ಕೃಷ್ಣದೇವ ಕಾರಂತ ಜೀರ್ಣೋದ್ಧಾರ ಪ್ರಗತಿಯ ವಿವರ ನೀಡಿದರು. ಕಾರ್ಯನಿರ್ವಹಣಾಧಿಕಾರಿ ಗಣೇಶ್ ಗೌಡ, ಸದಸ್ಯರಾದ ಚಂದ್ರಿಕಾ ಧನ್ಯ, ಸುರೇಶ್ ಶೇರೆಗಾರ್, ಮಂಜುನಾಥ ಆಚಾರ್ಯ, ಶಾರದಾ, ಭಾರತಿ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಪ್ರಭಾಕರ ಕುಂಭಾಶಿ, ಗಣೇಶ್ ಭಟ್, ಶಿಲ್ಪಿಗಳಾದ ಲಕ್ಷ್ಮೀನಾರಾಯಣ ಆಚಾರ್ಯ, ರಾಜಗೋಪಾಲ ಆಚಾರ್ಯ, ಪ್ರಶಾಂತ್ ಕಿಣಿ ಇನ್ನಿತರರು ಉಪಸ್ಥಿತರಿದ್ದರು. ರಥಬೀದಿಯಲ್ಲಿನ ಶ್ರೀ ಮಹಾದೇವಿ ಮಾರಿಯಮ್ಮ ದೇವಳದ ಅರ್ಚಕ ಪಾಂಡುರಂಗ ಜೋಗಿ ಲಾರಿಗೆ ಪೂಜೆ ನೆರವೇರಿಸಿ ಬೀಳ್ಕೊಟ್ಟರು.

Exit mobile version