ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬದುಕಿನಲ್ಲಿ ಅವಕಾಶಗಳು ಎದುರಾದಾಗ ಅದನ್ನು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಯಶಸ್ಸು ಅವಲಂಬಿತವಾಗಿರುತ್ತದೆ. ಧನಾತ್ಮಕ ಚಿಂತನೆಯೊಂದಿಗೆ ಅವಕಾಶವನ್ನು ಗುರುತಿಸುವ ಹಾಗೂ ಸ್ವೀಕರಿಸುವ ಮುನ್ನಡೆಯುವ ಜಾಣ್ಮೆ ನಮ್ಮದಾಗಬೇಕಿದೆ ಎಂದು ರೋಟರಿ ಜಿಲ್ಲೆ 3182 ಜಿಲ್ಲಾ ಗವರ್ನರ್ ಎಂ. ಜಿ. ರಾಮಚಂದ್ರ ಮೂರ್ತಿ ಹೇಳಿದರು.
ಅವರು ಬುಧವಾರ ಬೈಂದೂರು ರೋಟರಿ ಸಮುದಾಯ ಭವನದಲ್ಲಿ ಆಯೋಜಿಸಲಾದ ಬೈಂದೂರು ರೋಟರಿ ಕ್ಲಬ್‌ಗೆ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ನಾವು ಮಾಡುವ ಸೇವಾ ಕಾರ್ಯದ ಮೂಲಕ ಯಾರದ್ದೋ ಬದುಕಿನಲ್ಲಿ ಬದಲಾವಣೆ ತರುವಂತಾದರೆ ಅದರಿಂದ ದೊರೆಯುವ ಸಂತೃಪ್ತಿ ದೊಡ್ಡದು. ಪ್ರಸಕ್ತ ಸಾಲಿನಲ್ಲಿ ರೋಟರಿ ಜಿಲ್ಲೆಯಲ್ಲಿ ಒಟ್ಟು 12ಕೋಟಿಗೂ ಅಧಿಕ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಸದಸ್ಯರಿಗೆ ರೋಟರಿ ಮಾಹಿತಿ ಉತ್ತಮವಾಗಿದ್ದರೆ, ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯವಾಗುತ್ತದೆ. ವೃತ್ತಿಯೊಂದಿಗೆ ಉತ್ತಮ ಪ್ರವೃತ್ತಿ ನಮ್ಮದಾಗಿದ್ದರೆ ಅದರಿಂದ ನೆಮ್ಮದಿಯೂ ದೊರೆಯುತ್ತದೆ ಎಂದರು.
ಯಕ್ಷಗಾನ ಕಲಾವಿದ ತೀರ್ಥಹಳ್ಳಿ ಗೋಪಾಲ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆಗೈದ ನಾಲ್ವರು ವಿದ್ಯಾರ್ಥಿಗಳಿಗೆ ಬೈಂದೂರು ರೋಟರಿ ಟ್ರಸ್ಟ್ನಿಂದ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಗೆ ರೋಟರಿ ಅಧ್ಯಕ್ಷರು ನೀಡಿದ ರೂ.20,000 ನೆರವು ಹಸ್ತಾಂತರಿಸಲಾಯಿತು.
ಬೈಂದೂರು ರೋಟರಿ ಅಧ್ಯಕ್ಷ ಡಾ. ಪ್ರವೀಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅಸಿಸ್ಟೆಂಟ್ ಗವರ್ನರ್ ಜಯಪ್ರಕಾಶ್ ಶೆಟ್ಟಿ, ವಲಯ 1ರ ವಲಯ ಸೇನಾನಿ ರಮಾನಾಥ ನಾಯಕ್ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಜಿ. ಉಪ್ಪುಂದ ಸಂಪಾದಿಸಿದ ರೋಟರಿ ಬುಲೆಟಿನ್ ಬಿಂದುವಾಣಿ ಬಿಡುಗಡೆಗೊಳಿಸಲಾಯಿತು.
ಪೂರ್ಣಿಮಾ ಪ್ರಾರ್ಥಿಸಿದರು. ಬೈಂದೂರು ರೋಟರಿ ಅಧ್ಯಕ್ಷ ಡಾ. ಪ್ರವೀಣ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಮಂಗೇಶ್ ಶ್ಯಾನುಭಾಗ್ ವರದಿ ವಾಚಿಸಿ, ವಂದಿಸಿದರು. ಸೋಮನಾಥನ್ ಆರ್. ಕಾರ್ಯಕ್ರಮ ನಿರೂಪಿಸಿದರು.