Kundapra.com ಕುಂದಾಪ್ರ ಡಾಟ್ ಕಾಂ

ಪಠ್ಯೇತರ ಚಟುವಟಿಕೆಗಳಿಂದ ಆತ್ಮ ಜಾಗೃತಿ ಹೆಚ್ಚುತ್ತದೆ: ಡಾ. ಮಂಜುನಾಥ ಎ ಕೋಟ್ಯಾನ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ:
ಸಹಪಠ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳಲ್ಲಿ ಆತ್ಮ ಜಾಗೃತಿ ಹೆಚ್ಚಾಗಿರುತ್ತದೆ ಎಂದು ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ ಎ ಕೋಟ್ಯಾನ್ ಹೇಳಿದರು.

ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಕಲಾ ಮತ್ತು ವಾಣಿಜ್ಯ ವಿಭಾಗದ ಬಹುಮಾನ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದರಿಂದ ವಿದ್ಯಾರ್ಥಿಗಳಲ್ಲಿ ಆತ್ಮ ಜಾಗೃತಿ ಬೆಳೆಯುತ್ತದೆ. ಪ್ರಸ್ತುತ ಜಾಗತಿಕವಾಗಿ ಗುರುತಿಸಿಕೊಳ್ಳಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಕ್ಲೌಡ್ ಕಂಪ್ಯೂಟಿಂಗ್, ಡೇಟಾ ಸೈನ್ಸ್ ಮುಂತಾದ ಕೌಶಲ್ಯಗಳನ್ನು ವಿದ್ಯಾರ್ಥಿ ದೆಸೆಯಿಂದಲೇ ಕಲಿಯುವುದು ಅಗತ್ಯ. ಜೀವನದಲ್ಲಿ ಸಾಧಿಸುವ ಛಲ ಹಾಗೂ ಅವಕಾಶಗಳನ್ನು ಬಳಸಿಕೊಂಡು ಆಸಕ್ತಿಯಿಂದ ತೊಡಗಿಸಿಕೊಂಡಾಗ ಮಾತ್ರ ಯಶಸ್ಸಿನ ಹಾದಿ ಸುಗಮವಾಗುತ್ತದೆ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಕೇಳುವ ವಿಷಯಗಳಿಕ್ಕಿಂತ ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ. ವಿದ್ಯಾರ್ಥಿಗಳ ಪ್ರತಿಯೊಂದು ನಡೆಯೂ ಸಂಸ್ಕೃತಿಯನ್ನು ಬಿಂಬಿಸುವಂತಿರಬೇಕು. ನಮ್ಮಲ್ಲಿರುವ ವಿಭಿನ್ನತೆಯಂತೆ ಮಾತ್ರ ಅಸ್ತಿತ್ವ ನಿರ್ಮಾಣ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಸಾಂಸೃತಿಕ ವಿಭಾಗದಲ್ಲಿ ೨೬ ಬಹುಮಾನ, ಕ್ರೀಡೆಯಲ್ಲಿ ೫, ಪ್ರೊಡಕ್ಟ್ ಲಾಂಚ್‌ನಲ್ಲಿ ೫, ಪ್ರೊಫಿಶಿಯೆನ್ಸಿ ೨೭, ಎನ್‌ಸಿಸಿ ವಿಭಾಗದಲ್ಲಿ ೮ ಬಹುಮಾನಗಳನ್ನು ವಿತರಿಸಲಾಯಿತು. ಕಲಾ ಹಾಗೂ ವಾಣಿಜ್ಯ ವಿಭಾಗದ ೪೮ ವಿದ್ಯಾರ್ಥಿ ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದವು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಸದಾಕತ್, ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ. ಡಿ ಸ್ವಾಗತಿಸಿ, ಕಲಾ ವಿಭಾಗದ ಡೀನ್ ವೇಣುಗೋಪಾಲ ಶೆಟ್ಟಿ ವಂದಿಸಿದರು. ಸಂಸ್ಕೃತ ವಿಭಾಗ ಮುಖ್ಯಸ್ಥ ಅಂಬರೀಶ್ ಚಿಪ್ಳೂಣ್‌ಕರ್ ನಿರೂಪಿಸಿದರು.

Exit mobile version