Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಕಾಲೇಜುಗಳು ಪುನರಾರಂಭ, ಹಿಜಾಬ್ ಧರಿಸುವ ವಿದ್ಯಾರ್ಥಿನಿಯರು ಗೈರು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಫೆ.9ರಂದು ಮುಚ್ಚಿದ್ದ ಪದವಿಪೂರ್ವ, ಪದವಿ ಕಾಲೇಜುಗಳು ಇಂದು ಪುನರಾರಂಭವಾಗಿದ್ದು, ಇತರೆ ವಿದ್ಯಾರ್ಥಿಗಳು ಎಂದಿನಂತೆ ತರಗತಿಗೆ ಹಾಜರಾಗಿದ್ದರೇ, ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಪಟ್ಟು ಹಿಡಿದ ವಿದ್ಯಾರ್ಥಿನಿಯರು ಗೈರು ಹಾಜರಾಗಿದ್ದಾರೆ.

ಕುಂದಾಪುರ ಪದವಿ ಪೂರ್ವ ಕಾಲೇಜಿನ 28 ವಿದ್ಯಾರ್ಥಿನಿಯರ ಪೈಕಿ, 2 ವಿದ್ಯಾರ್ಥಿನಿಯರು ಧೀರ್ಘಾವಧಿ ಗೈರಾಗಿದ್ದು, ಓರ್ವ ವಿದ್ಯಾರ್ಥಿನಿ ಎಂದಿನಂತೆ ಕಾಲೇಜಿಗೆ ಹಿಜಾಬ್ ತೆಗೆದು ಹಾಜರಾಗಿದ್ದಾಳೆ. ಉಳಿದ 25 ಮಂದಿ ವಿದ್ಯಾರ್ಥಿನಿಯರು ಗೈರಾಗಿದ್ದಾರೆ. ತಾಲೂಕಿನ ಇತರ ಸರಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲಿಯೂ ಬಹುಪಾಲು ವಿದ್ಯಾರ್ಥಿನಿಯರು ತರಗತಿಗೆ ಗೈರಾಗಿದ್ದಾರೆ ಎನ್ನಲಾಗಿದೆ.

ಕಾಲೇಜು ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಫೆ.16ರಿಂದ 23ರ ತನಕ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಬೀಗು ಪೊಲೀಸ್ ಬಂದೋವಸ್ತ್ ಮಾಡಲಾಗಿತ್ತು. ಕಾಲೇಜು ಗೇಟಿನ ಬಳಿ ನಿಷೇಧಾಜ್ಞೆ ಜಾರಿಯಾಗಿರುವ ನೋಟಿಸು ಅಂಟಿಸಲಾಗಿತ್ತು. ಉಪನ್ಯಾಸರು ಕಾಲೇಜು ಆವರಣದಲ್ಲಿ ನಿಂತು ಪರಿಶೀಲಿಸುತ್ತಿರುವುದು ಕಂಡುಬಂತು. ಎಎಸ್ಪಿ ಸಿದ್ಧಲಿಂಗಪ್ಪ, ಎಸಿ ರಾಜು ಕಾಲೇಜಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಡಿ.ವೈ.ಎಸ್.ಪಿ ಶ್ರೀಕಾಂತ್ ಮಾರ್ಗದರ್ಶನದಂತೆ, ಪೊಲೀಸ್ ವೃತ್ತ ನಿರೀಕ್ಷಕ ಗೋಪಿಕೃಷ್ಣ, ಕುಂದಾಪುರ ಪಿಎಸ್ಐ ಸದಾಶಿವ ಗವರೋಜಿ, ಶಂಕರನಾರಾಯಣ ಪಿಎಸ್ಐ ಶ್ರೀಧರ ನಾಯ್ಕ್, ಹಾಗೂ ಸಿಬ್ಬಂದಿಗಳು ಭದ್ರತೆಯ ಕರ್ತವ್ಯದ್ದರು.

ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ ಮಧ್ಯಂತರ ತೀರ್ಪು ಹಾಗೂ ರಾಜ್ಯ ಸರಕಾರದ ಆದೇಶವನ್ನು ಪಾಲಿಸುವಂತೆ ಉಡುಪಿ ಜಿಲ್ಲಾಧಿಕಾರಿ ಕೂರ್ವರಾವ್ ಎಂ. ಹೇಳಿದ್ದರೇ, ಉಡುಪಿ ಪ.ಪೂ. ಬಾಲಕಿಯರ ಕಾಲೇಜಿನ 6 ವಿದ್ಯಾರ್ಥಿನಿಯರು ಕಾಲೇಜಿಗೆ ಬಾರದೇ ಹೈಕೋರ್ಟ್ ಪೂರ್ಣ ತೀರ್ಪು ಬರುವ ತನಕ ಕಾದು ಮುಂದಿನ ನಿರ್ಧಾರ ಕೈಗೊಳ್ಳುವ ಬಗ್ಗೆ ವಿದ್ಯಾರ್ಥಿನಿಯ ಪೋಷಕರೊಬ್ಬರು ಹೇಳಿಕೊಂಡಿದ್ದಾರೆ. ಕುಂದಾಪುರದಲ್ಲಿಯೂ ಹಿಜಾಬ್ ಧರಿಸಲು ಪಟ್ಟು ಹಿಡಿದಿರುವ ವಿದ್ಯಾರ್ಥಿನಿಯರು ಗೈರಾಗಿದ್ದಾರೆ.

ಜಿಲ್ಲಾಧಿಕಾರಿಗಳು ಕರೆದ ಶಾಂತಿ ಸಭೆಯಲ್ಲಿ ಎಲ್ಲಾ ಸಮುದಾಯದ ಮುಖಂಡರು ಹೈಕೋರ್ಟ್ ಮಧ್ಯಂತರ ಆದೇಶ ಪಾಲಿಸುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಹೈಕೋರ್ಟ್ ಮಧ್ಯಂತರ ಆದೇಶ ಪಾಲನೆ ಕಡ್ಡಯವಾಗಿದೆ ಎಂದಿದ್ದಾರೆ. – ರಾಜು, ಕುಂದಾಪುರ ಉಪವಿಭಾಗಾಧಿಕಾರಿ

ಕಾಲೇಜು ಆವರಣದ ಸುತ್ತ 144 ಸೆಕ್ಷನ್ ಜಾರಿಯಲ್ಲಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮವಹಿಸಲಾಗಿದೆ. ಪರಿಸ್ಥಿತಿ ಶಾಂತಿಯುತವಾಗಿದೆ – ಸಿದ್ಧಲಿಂಗಪ್ಪ, ಎಎಸ್ಪಿ

Exit mobile version