Kundapra.com ಕುಂದಾಪ್ರ ಡಾಟ್ ಕಾಂ

ತಲ್ಲೂರು: ಎಸ್‌ಸಿಡಿಸಿಸಿ ಬ್ಯಾಂಕ್ 108ನೇ ಶಾಖೆ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ (ಎಸ್‌ಸಿಡಿಸಿಸಿ) ಬ್ಯಾಂಕ್ ಸ್ಥಾಪನೆಯಾಗಿ 108 ವರ್ಷದ ಸಂಭ್ರಮದ ಸಂದರ್ಭದಲ್ಲಿ ತಲ್ಲೂರು ಶ್ರೀಜಲ ಅವೆನ್ಯೂ ಕಟ್ಟಡದಲ್ಲಿ ಸೋಮವಾರ 108ನೇ ಎಸ್‌ಸಿಡಿಸಿಸಿ ಬ್ಯಾಂಕ್ ಶಾಖಾ ಕಚೇರಿ ಉದ್ಘಾಟನೆ ಜರುಗಿತು.

ಬೈಂದೂರು ಕ್ಷೇತ್ರದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಬ್ಯಾಂಕ್ ಹಲವಾರು ಪರಿವರ್ತನೆ ಮೂಲಕ ಸೇವಾ ಕ್ಷೇತ್ರದಲ್ಲಿ ಎತ್ತರಕ್ಕೆ ಏರಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸರಿಸಮಾನಾಗಿ ನಿಂತಿದೆ. ಗ್ರಾಹಕರು ಹೆಚ್ಚಿನ ಠೇವಣಿ ಇಡುವ ಮೂಲಕ ಎಸ್‌ಸಿಡಿಸಿಸಿ ಬ್ಯಾಂಕ್ ತಮ್ಮ ಬ್ಯಾಂಕ್ ಆಗಿ ಮಾಡಿಕೊಂಡಿದ್ದಾರೆ. ಉತ್ತಮ ಸೇವೆಗೆ ಸಹಕಾರಿ ಬ್ಯಾಂಕ್ ಮಾದರಿಯಾಗಿದೆ ಎಂದರು.

ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಹಕರು ಕೊಟ್ಟ ಸಾಲ ಕಟ್ಟುವುದಿಲ್ಲ ಎನ್ನುವ ಆರೋಪ ಸಾಮಾನ್ಯ. ಆದರೆ ಎಸ್‌ಸಿಡಿಸಿಸಿ ಬ್ಯಾಂಕ್‌ನಲ್ಲಿ ಕೊಟ್ಟ ಸಾಲ ನೂರಕ್ಕೆ ನೂರು ಹಿಂದಕ್ಕೆ ಬರುತ್ತಿದೆ. ಕಳೆದ ೨೭ ವರ್ಷದಿಂದ ವಸೂಲಾತಿ ಎಂಬ ಶಬ್ದ ಬಳಸದೆ ಮರುಪಾವತಿ ಆಗುತ್ತಿದೆ. ನೂರಕ್ಕೆ ನೂರು ಸಾಲ ಮರುಪಾವತಿ ಹಾಗೂ ರೈತರ ಆತ್ಕಹತ್ಯೆ ಇಲ್ಲದ ಜಿಲ್ಲೆ ದೇಶದಲ್ಲಿದ್ದರೆ ಅದು ನಮ್ಮ ಜಿಲ್ಲೆಯಾಗಿದೆ. ಈ ಶ್ರೇಯಸ್ಸು ಸಂಪೂರ್ಣ ಗ್ರಾಹಕರಿಗೆ ಸಲ್ಲುತ್ತದೆ ಎಂದು ಹೇಳಿದರು.

ಸಮಯಕ್ಕೆ ಸರಿಯಾಗ ಆರ್ಥಿಕ ಸಹಕಾರ ನಮ್ಮ ಬ್ಯಾಂಕಿನಂದ ಆಗುತ್ತಿದೆ. ಗ್ರಾಮೀಣ ಭಾಗ ತಲ್ಲೂರಲ್ಲಿ ಎಸ್ಸಿಡಿಸಿ ಬ್ಯಾಂಕ್ ಶಾಖೆ ಆರಂಭವಾಗಿದ್ದು, ಗ್ರಾಹಕರು ಬ್ಯಾಂಕಿನ ಮೇಲೆ ಇಷ್ಟು ನಂಬಿಕೆ ಇಟ್ಟಿದ್ದಾರೆ ಎಂದರೆ ಒಂದೇ ದಿನದಲ್ಲಿ ನಾಲ್ಕು ಕೋಟಿ ರೂ ಠೇವಣಿ ಸಂಗ್ರಹವಾಗದ್ದು, ಒಟ್ಟು 12 ಕೋಟಿ ಠೇವಣಿ ಶಾಖೆ ಹೊಂದಿದೆ. ಮಹಿಳಾ ಆರ್ಥಿಕ ಸಬಲೀಕರಣಕ್ಕಾಗಿ ಬ್ಯಾಂಕ್ ಹೆಚ್ಚಿನ ಒತ್ತು ನೀಡುತ್ತಿದ್ದು, ಈ ಮಟ್ಟದಲ್ಲಿ ಸೇವೆ ನೀಡುತ್ತಿದ್ದರಿಂದ ಬ್ಯಾಂಕ್ ಎತ್ತರಕ್ಕೆ ಏರಲು ಕಾರಣವಾಗದೆ. ಮಾರ್ಚ್ ಮೊದಲ ವಾರದಲ್ಲಿ ಮಹಿಳಾ ಸ್ವಾವಲಂಬಿ ಉದ್ಯೋಗಕ್ಕೆ 20 ಲಕ್ಷ ಸಾಲ ಕಮ್ಮಿ ಬಡ್ಡಿಯಲ್ಲಿ ನೀಡಲಾಗುತ್ತದೆ. ನವೋದಯ ಸಂಘಕ್ಕೆ ರಾಜ್ಯದಿಂದ ಬೇಡಿಕೆ ಬರುತ್ತಿದ್ದು, ಧಾರವಾಡ, ಶಿವಮೊಗ್ಗ, ಗದಗ, ಹಾವೇರಿ, ದಾವಣಗೆರೆ ಜಿಲ್ಲೆಗೆ ವಿಸ್ತರಿಸಲಾಗುತ್ತದೆ ಎಂದು ಹೇಳಿದರು.

ಹೆಮ್ಮಾಡಿ ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘ ಅಧ್ಯಕ್ಷ ಬಾಳೆಮನೆ ಸಂತೋಷ ಕುಮಾರ್ ಶೆಟ್ಟಿ ಗಣಕೀರ, . ತಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭೀಮವ್ವ ಭದ್ರತಾಕೋಶ ಉದ್ಘಾಟಿಸಿದರು.

ಅಂತಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತೆ ನವೋದಯ ಗುಂಪಿನ ಸದಸ್ಯೆ ಜ್ಯೋತಿ ಪೂಜಾರಿ ಪುತ್ರಿ ಧನ್ವಿ ಪೂಜಾರಿಗೆ ೨೫ ಸಾವಿರ ಪ್ರೋತ್ಸಾಹ ಧನ ನೀಡಿ ಡಾ.ರಾಜೇಂದ್ರ ಕುಮಾರ್ ಸನ್ಮಾನಿಸಿದರು. ಕಟ್ಟಡ ಮಾಲೀಕ ಜಯಸೂರ್ಯ ಪೂಜಾರಿ, ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಬ್ಲಾಡಿ ಮಂಜಯ್ಯ ಶೆಟ್ಟಿ, ಶಾಖಾ ವ್ಯವಸ್ಥಾಪಕ ಹಿರಿಯಣ್ಣ ಪೂಜಾರಿ ಅವರ ಸನ್ಮಾನಿಸಲಾಯಿತು.

ಠೇವಣಿ ಇಟ್ಟ ಗ್ರಾಹಕರಿಗೆ ಪ್ರಥಮ 4 ಗ್ರಾಮ್ ಚಿನ್ನ ದ್ವಿತೀಯ ಬಹುಮಾನ 2 ಗ್ರಾಮ ಚಿನ್ನ ಲಕ್ಕಿ ಡ್ರಾ ನಡೆಸಿ ವಿಜೇತರಿಗೆ ಚಿನ್ನ ನೀಡಲಾಯಿತು. 25 ಸಾವಿರ ಠೇವಣಿದಾರರಿಗೆ ಲಕ್ಕಿ ಡ್ರಾದಲ್ಲಿ ಪ್ರಥಮ ಹಾಗೂ ದ್ವಿತೀಯ ಬಹುಮಾನ ವಿಜೇತರಿಗೆ ಚಿನ್ನ ಹಸ್ತಾಂತರಸಲಾಯಿತು. ನವೋದಯ ಸ್ವಸಾಯ ಸದಸ್ಯರಿಗೆ ವಿಮಾ ಹರಿಹಾರ ಚೆಕ್ ವಿತರಿಸಲಾಯಿತು. ಲಾಕರ್ ಸೌಲಭ್ಯದ ಕೀ, ಸಾಲನೀಡಿದ ದ್ವಿಚಕ್ರ ವಾಹನ ಕೀ ಹಸ್ತಾಂತರಿಸಲಾಯಿತು.

ಎಸ್ಸಿಡಿಸಿ ಬ್ಯಾಂಕ್ ಜಿಎಂ ಗೋಪಿಕೃಷ್ಣ ಭಟ್, ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಬಾಂಡ್ಯ ಸಹಕಾರಿ ಸಂಘ ಅಧ್ಯಕ್ಷ ಬಾಂಡ್ಯ ಸುಧಾಕರ ಶೆಟ್ಟಿ, ಬಳ್ಕೂರು ಸಹಾಕರಿ ಅಧ್ಯಕ್ಷ ಸದಾನಂದ ಬಳ್ಕೂರು, ಕುಂದಾಪುರ ಸಹಕಾರಿ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ, ಬಸ್ರೂರು ಸಹಕಾರಿ ಅಧ್ಯಕ್ಷ ಗೋಪಾಲ ಪೂಜಾರಿ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಮಹೇಶ್ ಹೆಗ್ಡೆ ಮೊಳಹಳ್ಳಿ, ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಇಒ ರವೀಂದ್ರ ಬಿ. ಹಾಗೂ ವಿವಿಧ ಸಹಕಾರಿ ಸಂಘ ಅಧ್ಯಕ್ಷರು ಉಪಸ್ಥಿತರಿದ್ದರು.

ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್. ರಾಜು ಪೂಜಾರಿ ಎಸ್ ಸ್ವಾಗತಿಸಿದರು. ಶ್ರೀಪಾದ ನಾಯಕ್ ಪ್ರಾರ್ಥಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ನಿರೂಪಿಸಿದರು. ಸೂಪರ್‌ವೈಜರ್ ಶಿವರಾಮ ಪೂಜಾರಿ ವಂದಿಸಿದರು.

Exit mobile version