Kundapra.com ಕುಂದಾಪ್ರ ಡಾಟ್ ಕಾಂ

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ವಾರ್ಷಿಕ ಜಾತ್ರೆ: ಪೂರ್ವಭಾವಿ ಸಭೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು:
ದಕ್ಷಿಣ ಭಾರತದಲ್ಲಿ ಪ್ರಸಿದ್ದಿ ಪಡೆದಿರುವ ಕೊಲ್ಲೂರು ಶ್ರೀ ಮೂಕಾಂಬಿಕಾ ಅಮ್ಮನವರ ವಾರ್ಷಿಕ ಜಾತ್ರೆಯು ಮಾ.18ರಿಂದ 27ರ ವರೆಗೆ ನಡೆಯಲಿದ್ದು, ಮಂಗಳವಾರ ಜಗದಾಂಬಿಕಾ ಸಭಾಗೃಹದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಅಧ್ಯಕ್ಷತೆಯಲ್ಲಿ ಉತ್ಸವದ ಪೂರ್ವಭಾವಿ ಸಭೆ ನಡೆಯಿತು.

ಕೋವಿಡ್ ನಿಯಂತ್ರಣಕ್ಕಾಗಿ ಸರಕಾರ ಕೆಲವು ಮುಂಜಾಗೃತಾಕ್ರಮವನ್ನು ಅನುಸರಿಸುವಂತೆ ಮಾರ್ಗಸೂಚಿ ನೀಡಿದೆ. ಇದನ್ನು ಪಾಲಿಸಿಕೊಂಡು ಕೊಲ್ಲೂರು ಕ್ಷೇತ್ರದ ಜಾತ್ರಾ ಮಹೋತ್ಸವವು ಪರಂಪರಾಗತವಾಗಿ ನಡೆದುಕೊಂಡು ಬಂದಿರುವಂತೆ ಶಾಸ್ತ್ರ, ಸಂಪ್ರದಾಯ ಬದ್ಧವಾಗಿ ಸಕಲ ಪೂಜಾ ವಿಧಿವಿಧಾನಗಳ ಸುವ್ಯವಸ್ಥೆಗಳೊಂದಿಗೆ ಈ ಬಾರಿ ನಡೆಸಲು ತೀರ್ಮಾನಿಸಲಾಗಿದೆ. ವಿವಿಧ ಉತ್ಸವಾದಿಗಳು ನಡೆಯಲಿವೆ. ಹೊರಗಿನಿಂದ ಬರುವ ವ್ಯಾಪಾರಸ್ಥರಿಗೆ, ಅಂಗಡಿ ಮುಂಗಟ್ಟುಗಳಿಗೆ ಅವಕಾಶವಿದೆ. ಸೀಮಿತ ಪ್ರಮಾಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದರು.

ಭಕ್ತಾದಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಬಂದೋಬಸ್ತ್, ದೀಪಾಲಂಕಾರ, ಪಾರ್ಕಿಂಗ್, ಊಟದ ವ್ಯವಸ್ಥೆಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಸಭೆಯಲ್ಲಿದ್ದ ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಸಾರ್ವಜನಿಕರ ಹಿತದೃಷಿಯಿಂದ ದೇವಳದ ಕಾರ್ಯಕ್ಕೆ ಗ್ರಾಪಂ ಹೆಚ್ಚಿನ ಸಹಕಾರ ನೀಡುವ ಮೂಲಕ ಕಾರ್ಯನಿರ್ವಹಿಸಬೇಕು ಎಂದು ಮನವಿ ಮಾಡಿದರು.

ದೇವಳದ ಇಒ ಎಸ್. ಪಿ. ಬಿ. ಮಹೇಶ್, ಎಇಒ ಗೋವಿಂದ ನಾಯ್ಕ್, ಬೈಂದೂರು ತಹಶೀಲ್ದಾರ ಶೋಭಾಲಕ್ಷ್ಮಿ ಎಚ್. ಎಸ್., ಕೊಲ್ಲೂರು ಗ್ರಾಪಂ ಅಧ್ಯಕ್ಷ ಶಿವರಾಮಕೃಷ್ಣ ಭಟ್, ಉಪಾಧ್ಯಕ್ಷ ಹರೀಶ್ ಶೆಟ್ಟಿ, ಪಿಡಿಒ ರುಕ್ಕನಗೌಡ, ತಂತ್ರಿ ಡಾ. ಕೆ. ರಾಮಚಂದ್ರ ಅಡಿಗ, ಬಂದೂರು ವೃತ್ತ ನಿರೀಕ್ಷಕ ಸಂತೋಷ್ ಆನಂದ್ ಕಾಯ್ಕಿಣಿ, ಕೊಲ್ಲೂರು ಠಾಣಾಧಿಕಾರಿ ಈರಣ್ಣ ಶಿರಗುಂಪಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಡಾ. ಅತುಲ್‌ಕುಮಾರ್ ಶೆಟ್ಟಿ, ಜಯಾನಂದ ಹೋಬಳಿದಾರ್, ಗೋಪಾಲಕೃಷ್ಣ ನಾಡ, ಬೆಳ್ವೆ ಗಣೇಶ್ ಕಿಣಿ, ಶೇಖರ ಪೂಜಾರಿ, ಸಂಧ್ಯಾ ರಮೇಶ್, ರತ್ನಾ ರಮೆಶ್, ಪ್ರಾಂಶುಪಾಲ ಅರುಣ್‌ಪ್ರಕಾಶ್ ಶೆಟ್ಟಿ, ಅರಣ್ಯ, ಮೆಸ್ಕಾಂ ಸಿಬ್ಬಂದಿಗಳು, ಅರ್ಚಕ, ಪುರೋಹಿತ, ಉಪಾಧಿವಂತರು ಹಾಗೂ ಗ್ರಾಮಸ್ಥರು ಇದ್ದರು. ಗಣೇಶ ಉಡುಪ ಸ್ವಾಗತಿಸಿದರು.

Exit mobile version