Kundapra.com ಕುಂದಾಪ್ರ ಡಾಟ್ ಕಾಂ

ಹಿಂಸೆ, ದು:ಖ ನೀಡದೆ ಬದುಕಿದರೆ ಅದೇ ದೇವರ ಪೂಜೆ: ಪೇಜಾವರ ಶ್ರೀ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಸಕಲ ಸದ್ಗುಣಗಳ ಗಣಿಯೇ ಭಗವಂತ. ದುರ್ಗುಣಗಳನ್ನು ದೂರ ಮಾಡಿ ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ದಾನ, ಧರ್ಮ, ಸತ್ಕರ್ಮಗಳಿಂದ ಸಾತ್ವಿಕ ಸಂಪತ್ತು ವೃದ್ಧಿಯಾಗಿ ಸತ್‌ಕೀರ್ತಿ ದೊರೆಯುತ್ತದೆ. ನಮ್ಮ ಹೃದಯದಲ್ಲಿ ಭಗವಂತ ನೆಲೆಸಿದರೆ ಎಲ್ಲಾ ಭಾಗ್ಯಗಳು ಪ್ರತಿನಿತ್ಯ ಲಭಿಸಿ ಜೀವನ ಪಾವನವಾಗುತ್ತದೆ. ಯಾರಿಗೂ ಹಿಂಸೆ, ದು:ಖ ನೀಡದೆ ಬದುಕಿದರೆ ಅದೇ ದೇವರ ಪೂಜೆ ಎಂದು ಉಡುಪಿ ಪೇಜಾವರ ಅಧೋಕ್ಷಜ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಗುಜ್ಜಾಡಿ ಗ್ರಾಮದ ಕೊಡಪಾಡಿಯ ಶ್ರೀ ಗುಹೇಶ್ವರ ದೇವಸ್ಥಾನದಲ್ಲಿ ಭಾನುವಾರ ಶ್ರೀ ಗುಹೇಶ್ವರ, ಶ್ರೀ ಮಹಾಗಣಪತಿ, ಶ್ರೀ ನಾಗ ದೇವರು, ಶ್ರೀ ಭದ್ರಕಾಳಿ ಅಮ್ಮನವರ ಪ್ರತಿಷ್ಠಾ ವರ್ಧಂತಿ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.

ದೇವರು ಗುಡಿ ಗೋಪುರಗಳಲ್ಲಿ ನೆಲೆಸಿಲ್ಲ ಬದಲಾಗಿ ಎಲ್ಲರ ಹೃದಯದೊಳಗೆ ನೆಲೆಸಿದ್ದಾನೆ. ಬದುಕನ್ನು ಭಗವಂತನ ಆರಾಧನೆಯನ್ನಾಗಿ ಮಾಡಿಕೊಳ್ಳಬೇಕು. ಪವಿತ್ರವಾದ ಶ್ರೀ ಗುಹೇಶ್ವರ ದೇವರ ಸನ್ನಿಧಿಯಲ್ಲಿ ನಿತ್ಯ ನಿರಂತರ ಧಾರ್ಮಿಕ ಉಪಾಸನೆಗಳು ನಡೆಯುತ್ತಿದ್ದು, ಶ್ರೀದೇವರು ಎಲ್ಲರ ಹೃದಯದೊಳಗೆ ನೆಲೆಸಿ ಅವರ ಇಷ್ಟಾರ್ಥಗಳನ್ನು ಅನುಗ್ರಹಿಸಲಿ ಎಂದು ಹೇಳಿದರು.

ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಯಮುನಾ ಪೂಜಾರಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಪ್ರಣಯ್ ಕುಮಾರ್ ಶೆಟ್ಟಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜು ಗಾಣಿಗ ಕೊಡಪಾಡಿ, ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ, ಕೋಶಾಧಿಕಾರಿ ವಿಮಲಾ ಪುತ್ರನ್, ಕ್ಷೇತ್ರಾಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಶ್ರೀಶ ಅಡಿಗ, ಕ್ಷೇತ್ರಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಚಂದ್ರ ಮಯ್ಯ, ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಭಟ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರದೀಪ ಪೂಜಾರಿ, ಶೀನಪ್ಪ, ಜಯಲಕ್ಷ್ಮೀ ಆಚಾರ್, ತೇಜ ದೇವಾಡಿಗ, ಜಯರಾಮ ಖಾರ್ವಿ, ಜಮಖಂಡಿ ಕಂಕಣವಾದಿಯ ಗುಹೇಶ್ವರ ದೇವಸ್ಥಾನದ ಈಶ್ವರ ನಿಂಗಪ್ಪ ಸಿದ್ಧಣ್ಣನವರ್ ಮೊದಲಾದವರು ಉಪಸ್ಥಿತರಿದ್ದರು.

ಕ್ಷೇತ್ರಾಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರ ಗಾಣಿಗ ಸ್ವಾಗತಿಸಿದರು. ಶ್ರೀಶ ಅಡಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಾಪಕ ರಾಜೇಶ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು. ರಾಮಚಂದ್ರ ಮಯ್ಯ ವಂದಿಸಿದರು.

Exit mobile version