Kundapra.com ಕುಂದಾಪ್ರ ಡಾಟ್ ಕಾಂ

ಬಗ್ವಾಡಿ ಶಾಲೆ: ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಸಿದ್ಧಪಡಿಸಿದ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ನೂಜಾಡಿ -2 ಬಗ್ವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ನಿರ್ಮಿಸಲಾದ ವಿನೂತನ ಮಾದರಿ ಸ್ಮಾರ್ಟ್ ತರಗತಿ ಶನಿವಾರ ಉದ್ಘಾಟನೆಗೊಂಡಿತು.

ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಮಾತನಾಡಿ ಕಟ್ಟಕಡೆಯ ಮಗು ಶಿಕ್ಷಣ ಪಡೆದರೆ ದೇಶ ಬದಲಾಗಲು ಸಾಧ್ಯ. ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೇರುತ್ತಾರೆ. ಶಿಕ್ಷಣದಿಂದ ಯಾವ ಮಗುವೂ ವಂಚಿತವಾಗಬಾರದು. ಗ್ರಾಮೀಣ ಶಾಲೆಗಳ ಮೂಲಸೌಕರ್ಯ ಒದಗಿಸುವ ಕಾರ್ಯ ಆಗುತ್ತಿದ್ದು, ಕೆಸ್ಸಾರ್ಟಿಸಿ ಬಸ್ನಲ್ಲಿ ಸ್ಮಾರ್ಟ್ ಕ್ಲಾಸ್ ರಾಜ್ಯಕ್ಕೆ ಮಾದರಿ ಎಂದರು.

ಗ್ರಾಮೀಣ ಭಾಗದ ಸಂಚಾರ ಪರವಾನಿಗೆ ಇದ್ದರೂ ಬಸ್ ಓಡಿಸದೆ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಸಮಸ್ಯೆ ಆಗುತ್ತಿದೆ. ಪರವಾನಿಗೆ ಇರುವ ಗ್ರಾಮ ಪ್ರದೇಶಗಳಿಗೆ ಕೆಎಸ್ಸಾರ್ಟಿಸಿ ಬಸ್ ಬಿಡದಿದ್ದರೆ 25 ಸಾವಿರ ವಿದ್ಯಾರ್ಥಿಗಳ ಸಹಿತ ಕುಂದಾಪುರ ಕೆಎಸ್ಸಾರ್ಟಿಸಿ ಡಿಪೋ ಎದುರು ಪ್ರತಿಭಟನೆ ನಡೆಸಲಾಗುತ್ತದೆ ಎಚ್ಚರಿಕೆ ನೀಡಿದ್ದಾರೆ.

ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ಕಮಲ ಕುಮಾರ್ ಮಾತನಾಡಿ ನಿರುಪಯುಕ್ತ ಕೆಎಸ್‌ಆರ್‌ಟಿಸಿ ಬಸ್ ಸಂಪೂರ್ಣ ಬದಲಾಗಿ ಸ್ಮಾರ್ಟ್ ಕ್ಲಾಸ್ ಆಗಿ ವಿದ್ಯಾರ್ಥಿಗಳ ತರಗತಿ ಕೊಠಡಿ ಆಗುತ್ತಿದ್ದು, ಕೊಡಿಗೆ ನೀಡಿದ ಬಸ್ ಶೈಕ್ಷಣಕಕ್ಕೆ ಬಳಕೆಯಾಗುತ್ತಿರುವುದು ಸಂತಸದ ವಿಷಯ. ನಗರ ಪಟ್ಟದಲ್ಲಿ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದು, ಗ್ರಾಮೀಣ ಭಾಗದಲ್ಲೂ ಅಂತಾ ಶಿಕ್ಷಣ ಮಕ್ಕಳಿಗೆ ಸಿಗಬೇಕು. ಕೆಎಸ್ಸಾರ್ಟಿಸಿ ಬಸ್ ಸ್ಮಾರ್ಟ್ ಕ್ಲಾಸ್ ಆಗಿ ಗ್ರಾಮೀಣ ಭಾಗದ ಮಕ್ಕಳಿಗೆ ಆಧುನಿಕ ಶಿಕ್ಷಣ ನೀಡುತ್ತಿರುವುದು ನಮ್ಮ ಸಂಸ್ಥೆಗೆ ಹೆಮ್ಮೆಯ ವಿಷಯ. ಅದರ ಕ್ರೆಡಿಟ್ ಪ್ರಶಾಂತ ಆಚಾರ್ಯರಿಗೆ ಸಲ್ಲುತ್ತದೆ ಎಂದರು.

ಹಕ್ಲಾಡಿ ಗ್ರಾಮ ಬಗ್ವಾಡಿ ಪ್ರಶಾಂತ ಆಚಾರ್ಯ ಕರೋನಾ ಸಮಯದಲ್ಲಿ ರಾಜ್ಯ ಸಾರಿಗೆ ಬಸ್ ಮಾಡಲ್ ಸಿದ್ದಪಡಿಸಿ ಸಾರಿಗೆ ಸಚಿರಿಗೆ ನೀಡಿದ್ದು, ಮಾಡೆಲ್ ನೋಡಿ ಖುಷಿಯಾದ ಸಾರಿಗೆ ಸಚಿವ ಲಕ್ಷ್ಮಣ ಸವದಿ ಕೊಡುಗೆಯಾಗಿ ನೀಡಿದ ಗುಜರಿ ಕೆಎಸ್ಸಾರ್ಟಿಸಿ ಬಸ್ ಬಗ್ವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೀಡಿ, ವಿನ್ಯಾಸದ ಮೂಲಕ ಸ್ಮಾರ್ಟ್ ಕ್ಲಾಸ್ ಆಗಿ ಪರಿರ್ತಿಸಿದ ಪ್ರಶಾಂತ್ ಆಚಾರ್ಯಾ ಹಾಗೂ ಸಹೋದರ ಪ್ರಕಾಶ್ ಆಚಾರ್ಯ ಅವರ ಶಾಲಾ ವತಿಯಿಂದ ಸನ್ಮಾನಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ.ಮುಂದಿನಮನೆ, ಹಕ್ಲಾಡಿ ಗ್ರಾಪಂ ಸದಸ್ಯರಾದ ಅಶೋಕ ಪೂಜಾರಿ, ಶಾರದಾ ಮೊಗವೀರ, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ನಿವೃತ್ತ ನಿರ್ದೇಶಕ ಬಿ.ಎನ್.ಶೆಟ್ಟಿ, ಪುರೋಹಿತ ನಾಗಪ್ಪಯ್ಯ ಭಟ್, ಎಸ್ಡಿಎಂಸಿ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಅಬ್ದುಲ್ ಸಲಾಮ್, ಮಹಿಷಾಸುರಮರ್ಧಿನಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ, ನಾಗೂರು ಉದ್ಯಮಿ ಕೆ.ಅಬ್ದುಲ್ ರೆಹಮಾನ್. ಗ್ರಂಥಾಲಯ ಕೊಡಗೆ ನೀಡಿದ ಅಜಿತ್ ಕುಮಾರ್ ಬಗ್ವಾಡಿಮನೆ, ಸಮನ್ವಯ ಅಧಿಕಾರಿ ಅಬ್ದುಲ್ ಹಫೀಜ್, ಕೆಎಸ್ಸಾರ್ಟಿಸಿ ಡಿಪೋ ಮೆನೇಜರ್ ರಾಜೇಶ್ ಮೊಗವೀರ, ಎಸ್ಡಿಎಂಸಿ ಅಧ್ಯಕ್ಷ ಮಂಜುನಾಥ ಪುತ್ರನ್, ವಿದ್ಯಾರ್ಥಿ ನಾಯಕಿ ಪ್ರಜ್ಞಾ ಇದ್ದರು.

ಶಾಲಾ ಮುಖ್ಯೋಪಾಧ್ಯಾಯನಿ ಶೈಲಜಾ ವಿ. ಶೆಟ್ಟಿ ಸ್ವಾಗತಿಸಿದರು. ವಂಡ್ಸೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ವಸಂತ ಶೆಟ್ಟಿ ಮತ್ತು ಶಿಕ್ಷಕಿ ಶೋಭಾ ನಿರೂಪಿಸಿದರು. ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ರಾಜೀವ ಶೆಟ್ಟಿ ವಂದಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Exit mobile version