Kundapra.com ಕುಂದಾಪ್ರ ಡಾಟ್ ಕಾಂ

ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗವಲ್ಲ, ಸರ್ಕಾರದ ವಸ್ತ್ರಸಂಹಿತೆ ಆದೇಶ ಪಾಲಿಸಿ: ಹೈಕೋರ್ಟ್ ತೀರ್ಪು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ,ಮಾ.15:
ಜಿಲ್ಲೆಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಾರಂಭವಾಗಿ ಇಡೀ ದೇಶದಲ್ಲಿ ಸಂಘರ್ಷಕ್ಕೆ ಎಡೆ ಮಾಡಿದ್ದ ಹಿಜಾಬ್ ವಿವಾದ ಕುರಿತು ಮಹತ್ವದ ತೀರ್ಪು ಹೊರಬಿದ್ದಿದ್ದು, ಸರ್ಕಾರದ ಆದೇಶ ಕಾನೂನು ಬದ್ದವಾಗಿದೆ. ಸರ್ಕಾರ ಹೊರಡಿಸಿದ ವಸ್ತ್ರಸಂಹಿತೆಯನ್ನು ಪ್ರಶ್ನಿಸುವಂತಿಲ್ಲ. ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗವಲ್ಲ. ಸರ್ಕಾರ ಆದೇಶ ಕಾನೂನು ಬದ್ದವಾಗಿದೆ. ಹಿಜಾಬ್ ಧರಿಸುವಂತೆ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು ವಜಾಗೊಳಿಸಿ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಧಾರಣೆ ಕಡ್ಡಾಯ ಎನ್ನುವ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.

ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಜೆ. ಎಂ. ಖಾಜಿ ಅವರನ್ನು ಒಳಗೊಂಡ ಪೀಠವು ತೀರ್ಪು ಪ್ರಕಟಿಸಿದೆ. 11 ದಿನ ಸುದೀರ್ಘ ವಿಚಾರಣೆ ನಡೆಸಿದ್ದ ಪೂರ್ಣ ಪೀಠವು ಫೆಬ್ರವರಿ 25ರಂದು ತೀರ್ಪು ಕಾಯ್ದಿರಿಸಿತ್ತು. ಸರಿ ಸುಮಾರು 23.5 ತಾಸು ವಿಚಾರಣೆ ಆಲಿಸಿರುವ ಪೀಠವು 17 ದಿನಗಳ ಬಳಿಕ ತೀರ್ಪು ಪ್ರಕಟಿಸಿದೆ.

ಪ್ರಕರಣ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಹಿಜಾಬ್ ಪ್ರಕರಣ ಹೈಕೋರ್ಟ್ ಏಕಸದಸ್ಯ ಪೀಠದಿಂದ ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾವಣೆ ಮಾಡಿದ್ದರು. ಆ ಬಳಿಕ ತ್ರಿ ಸದಸ್ಯ ಪೀಠ ಮಧ್ಯಂತರ ಆದೇಶ ಪ್ರಕಟಿಸಿತ್ತು. ಹಿಜಾಬ್ ವಿವಾದ ಪ್ರಕರಣದಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ಆರಂಭಿಸಿದ್ದ ಮೂವರು ಸದಸ್ಯರ ವಿಸ್ತೃತ ಪೀಠ, ವಿ ವಿದ್ಯಾರ್ಥಿಗಳು ಸಮವಸ್ತ್ರದ ಹೊರತಾದ ಧಾರ್ಮಿಕ ಗುರುತು ಪ್ರದರ್ಶಿಸುವ ಉಡುಪು ಧರಿಸಿ ತರಗತಿಗೆ ಹೋಗುವಂತಿಲ್ಲ ಎಂದು ಮಧ್ಯಂತರ ಆದೇಶ ನೀಡಿತ್ತು.

Exit mobile version