Kundapra.com ಕುಂದಾಪ್ರ ಡಾಟ್ ಕಾಂ

ಹೋಳಿ ಹಬ್ಬದ ಪೂರ್ವಭಾವಿ ಶಾಂತಿ ಸಭೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ:
ಗಂಗೊಳ್ಳಿ ಗ್ರಾಮವು ಕೋಮು ಸೂಕ್ಷ್ಮ ಪ್ರದೇಶವಾಗಿದ್ದು ಇತ್ತೀಚಿಗೆ ನಡೆದ ಅಹಿತಕರ ಘಟನೆಗಳು ಮತ್ತು ಕೋಮು ಸಂಬಂಧಿತ ಘರ್ಷಣೆಗಳಿಂದ ಮುಂಬರುವ ಹೋಳಿ ಹಬ್ಬದ ಆಚರಣೆಯನ್ನು ಅತ್ಯಂತ ಶಾಂತಿಯುತವಾಗಿ ನಡೆಸಬೇಕು. ಕೋವಿಡ್-೧೯ ಸಾಂಕ್ರಾಮಿಕ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ಹೇಳಿದರು.

ಹೋಳಿ ಹಬ್ಬದ ಪೂರ್ವಭಾವಿಯಾಗಿ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಸೋಮವಾರ ನಡೆದ ಸರ್ವಧರ್ಮೀಯರ ಶಾಂತಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮೆರವಣಿಗೆ ಮತ್ತು ಇತರ ಕಾರ್ಯಕ್ರಮದ ವೇಳೆ ಅನ್ಯ ಧರ್ಮಿಯರಿಗೆ ಘೋಷಣೆ ಕೂಗುವುದು, ಅಸಂವಿಧಾನಿಕ ಭಾಷೆ ಉಪಯೋಗಿಸುವುದು, ರಾಜಕೀಯ ಪ್ರೇರಿತ ಘೋಷಣೆ ಕೂಗದಂತೆ, ಅನ್ಯ ಧರ್ಮಿಯರ ಭಾವನೆಗಳಿಗೆ ಧಕ್ಕೆ ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮೆರವಣಿಗೆ ಸಂದರ್ಭ ಅಸಭ್ಯ, ಅಶಿಸ್ತು ವರ್ತನೆ ಮಾಡದಂತೆ ಸಮಾಜದ ಮುಖಂಡರು ನೋಡಿಕೊಳ್ಳಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾದಲ್ಲಿ ನಿರ್ದಾಕ್ಷಿಣ್ಯವಾಗಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದರು.

ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ನಂಜಾ ನಾಯ್ಕ್ ಮಾಹಿತಿ ನೀಡಿದರು. ಗಂಗೊಳ್ಳಿ ಗ್ರಾಪಂ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ರಾಮದಾಸ ಪಟೇಲ್, ನಾಗಪ್ಪಯ್ಯ ಪಟೇಲ್, ಗ್ರಾಪಂ ಸದಸ್ಯ ಎನ್.ನಾಗರಾಜ ಖಾರ್ವಿ, ಶಿವಪ್ಪ ಖಾರ್ವಿ, ಗಂಗೊಳ್ಳಿ ಜಮಾತ್ ಅಧ್ಯಕ್ಷ ಪಿ.ಎಂ.ಹಸೈನಾರ್, ಕಾರ್ಯದರ್ಶಿ ರೆಹಾನ್ ಅಹಮ್ಮದ್, ವಿವಿಧ ಸಮುದಾಯಗಳ ಮುಖಂಡರು ಮೊದಲಾದವರು ಉಪಸ್ಥಿತರಿದ್ದರು.

Exit mobile version