Kundapra.com ಕುಂದಾಪ್ರ ಡಾಟ್ ಕಾಂ

ಮರವಂತೆಯಲ್ಲಿ ಜಲ ಜಾನಪದೋತ್ಸವ ಸಂಭ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ತಾಲೂಕಿನ ಮರವಂತೆಯಲ್ಲಿ ಕನ್ನಡ ಜಾನಪದ ಪರಿಷತ್ ಬೆಂಗಳೂರು, ಕನ್ನಡ ಜಾನಪದ ಪರಿಷತ್ ಯುವ ಬ್ರಿಗೇಡ್ ಬೆಂಗಳೂರು, ಕರಾವಳಿ ವಿಭಾಗೀಯ ಘಟಕ ಮರವಂತೆ ಹಾಗೂ ಲಯನ್ಸ್ ಕ್ಲಬ್ ಕೋಸ್ಟಲ್ ಕುಂದಾಪುರದ ಸಹಕಾರದೊಂದಿಗೆ ರಾಜ್ಯ ಮಟ್ಟದ ಜಲಜಾನಪದೋತ್ಸವ ಆಯೋಜಿಸಲಾಗಿತ್ತು.

ಮಾಜಿ ಶಾಸಕ, ಧಾರ್ಮಿಕ ಮುಂದಾಳು ಬಿ. ಅಪ್ಪಣ್ಣ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿರುವ ನಾವೆಲ್ಲ, ನಮ್ಮ ಸ್ವಂತಿಕೆಯನ್ನು ಮಸುಕಾಗದಂತೆ ಕಾಪಾಡಿಕೊಳ್ಳಬೇಕಿದೆ. ನಮ್ಮ ಕಲೆ, ಸಂಸ್ಕೃತಿ, ಆಚಾರ, ವಿಚಾರವನ್ನು ಮರೆಯಬಾರದು. ಈ ನಾಡಿನ ಮಣ್ಣಿನ ಗುಣ, ಭಾರತೀಯತೆಯನ್ನು ಉಳಿಸೋಣ. ಆಧುನೀಕತೆಯ ಭರಾಟೆಯಲ್ಲಿ ನಮ್ಮ ಜನಪದೀಯ ಕಲೆಗಳು ಅಳಿದು ಹೋಗುತ್ತಿದ್ದು, ಅದನ್ನು ಉಳಿಸುವ ಜತೆಗೆ ಮಹತ್ವದ ಬಗೆಗೆ ಮುಂದಿನ ಪೀಳಿಗೆಗೆ ತಿಳಿಸುವಂತಹ ಹೊಣೆಗಾರಿಕೆ ನಮ್ಮೆಲ್ಲರದು. ಕಾರಂತರು ಹೇಳಿದಂತೆ ನದಿ, ಕಡಲು, ಬೆಟ್ಟಗಳಲ್ಲಿ ಸಿಗುವಷ್ಟು ಶಾಂತಿ ಬೇರೆಲ್ಲೂ ಸಿಗದು. ಅಂತಹ ಪವಿತ್ರವಾದ ಸ್ಥಳದಲ್ಲಿ ಈ ನಮ್ಮ ಜಾನಪದ ಉತ್ಸವವನ್ನು ಆಯೋಜಿಸಿರುವುದು ಸ್ತುತ್ಯಾರ್ಹ ಎಂದರು.

ಪಾರಂಪರಿಕ ವಸ್ತು ಪ್ರದರ್ಶನವನ್ನು ಉದ್ಯಮಿ, ಡಾ. ಗೋವಿಂದ ಬಾಬು ಪೂಜಾರಿ ಉದ್ಘಾಟಿಸಿ ಮಾತನಾಡಿ, ಇಂತಹ ಉತ್ಸವಗಳಿಂದ ಅಳಿವಿನಂಚಿಗೆ ಸರಿಯುತ್ತಿರುವ ನಮ್ಮ ಕೆಲ ಕಲೆ, ಸಂಸ್ಕೃತಿ, ಆಚರಣೆಗಳನ್ನು ಉಳಿಸುವ ನಿಟ್ಟಿನಲ್ಲಿ ಉತ್ತೇಜನ ನೀಡಿದಂತಾಗುತ್ತದೆ. ನಮ್ಮ ಮಕ್ಕಳಿಗೆ ಇಲ್ಲಿನ ಆಚರಣೆ, ಯಕ್ಷಗಾನ, ಧಾರ್ಮಿಕ ಆಚರಣೆಗಳ ಬಗ್ಗೆ ಕಲಿಸಿಕೊಡುವ ಕಾರ್ಯ ಆಗಲಿ ಎಂದವರು ಹೇಳಿದರು.

ಜಾನಪದ ವಿದ್ವಾಂಸರು, ವಿಶ್ರಾಂತ ಕುಲಪತಿಗಳು ಪ್ರೋ.ಕೆ.ಚಿನ್ನಪ್ಪ ಗೌಡ, ವೃಕ್ಷಮಾತೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ತುಳಸೀ ಗೌಡ, ಕೊಳಲು ವಾದಕರು ಭುಜಂಗ ಕೊರಗ, ದೈವಾರಾಧನೆ ನಾಗರಾಜ ಪಾಣ, ಕುಂಬಾರಿಕೆ ರಘುರಾಮ್ ಕುಲಾಲ, ಹೋಳಿಕುಣಿತ ದೇವೇಂದ್ರ ನಾಯಕ್, ಕೊಂಕಣಿ ಖಾರ್ವಿ ಸಮಾಜದ ಹಿರಿಯ ಕಣಜ ದಾಸ ಖಾರ್ವಿ, ಜನಪದ ಪಾರ್ದನ ತಿಮ್ಮು ಕುತ್ತಾರ್, ಜನಪದ ವೈದ್ಯ ಶಾಲಿನಿ ಮೊನ್ನಗೌಡ, ಜನಪದ ಹಲಗೆವಾದಕರು ಸುಬ್ರಾಯ ವಿ.ಆಗೇರ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕನ್ನಡ ಜಾನಪದ ಪರಿಷತ್ ಯುವ ಬ್ರಿಗೇಡ್‍ನ ರಾಜ್ಯಾಧ್ಯಕ್ಷ ಡಾ. ಎಸ್. ಬಾಲಾಡಿ ಅಧ್ಯಕ್ಷತೆ ವಹಿಸಿದ್ದರು. ಪುಸ್ತಕ ಪ್ರದರ್ಶನವನ್ನು ರಾಜ್ಯ ವೈಜ್ಞಾನಿಕ ಪರಿಷತ್ ಅಧ್ಯಕ್ಷ ಡಾ.ಸುಬ್ರಹ್ಮಣ್ಯ ಭಟ್ ಉದ್ಘಾಟಿಸಿದರು.

ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮಿ, ಕಾರ್ಯನಿರ್ವಣಾಧಿಕಾರಿ ಭಾರತಿ, ಮರವಂತೆ ಗ್ರಾ.ಪಂ. ಅಧ್ಯಕ್ಷೆ ರುಕ್ಮಿಣಿ, ಕುಂದಾಪುರ ಲಯನ್ಸ್ ಕ್ಲಬ್ ಅಧ್ಯಕ್ಷ ಜಯಶೀಲ ಶೆಟ್ಟಿ, ಪರಿಷತ್ ಖಜಾಂಚಿ ಡಾ. ಕನಕತಾರ, ಪ್ರೋ. ಕೆ.ಎಸ್. ಕೌಜಲಗಿ, ಡಾ. ರಮೇಶ್ ತೇಲಿ, ಜಾನಪದ ಪರಿಷತ್ ಜಿಲ್ಲಾಧ್ಯಕ್ಷೆ ಡಾ. ನಿಕೇತನ, ಉತ್ಸವದ ಗೌರವ ಸಲಹೆಗಾರ ಪ್ರೋ. ಕನರಾಡಿ ವಾದಿರಾಜ ಭಟ್, ದಯಾನಂದ ಬಳೆಗಾರ್ ಮರವಂತೆ, ಮರವಂತೆ ಮೀನುಗಾರರ ಸಮಾಜದ ಅಧ್ಯಕ್ಷ ವಾಸುದೇವ ಖಾರ್ವಿ, ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಜಾನಪದ ಪರಿಷತ್ ಕರಾವಳಿ ವಿಭಾಗ ಸಂಚಾಲಕಿ ಡಾ. ಭಾರತಿ ಮರವಂತೆ ಪ್ರಸ್ತಾವಿಸಿ, ಉತ್ಸವದ ಗೌರವ ಸಲಹೆಗಾರ ಎಸ್. ಜನಾರ್ದನ ಮರವಂತೆ ಸ್ವಾಗತಿಸಿದರು. ಶಿಕ್ಷಕ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿ, ಪ್ರ. ಸಂಚಾಲಕ ಉದಯ್ ಕುಮಾರ್ ಬಿ. ಹಾಯ್ಕಾಡಿ ವಂದಿಸಿದರು.

Exit mobile version