ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜಾಡಿ ಮೈದಾನದಲ್ಲಿ ಜರುಗಿದ ದೇವಲ್ಕುಂದ ಪ್ರೀಮಿಯರ್ ಲೀಗ್-2022 ರ ಸೂಪರ್ ಸಿಕ್ಸ್ ಪಂದ್ಯಾಟದಲ್ಲಿ ದುರ್ಗಾ ವಾರಿಯರ್ಸ್ ಬಾಳಿಕೆರೆ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಎರಡು ದಿನಗಳ ಕಾಲ ಜಾಡಿಯ ಮೈದಾನದಲ್ಲಿ ಬಗ್ವಾಡಿ, ದೇವಲ್ಕುಂದ, ಬಾಳಿಕೆರೆ ಆಟಗಾರರಾಗಿ ನಡೆದ ಡಿಪಿಎಲ್ ಸೀಸನ್-2 ಕ್ರಿಕೆಟ್ ಪಂದ್ಯಾಟದಲ್ಲಿ ಜಯಂತ್ ಕುಂದರ್ ಹಾಗೂ ಪ್ರಥ್ವಿರಾಜ್ ಶೆಟ್ಟಿ ಮಾಲೀಕತ್ವದ ದುರ್ಗಾ ವಾರಿಯರ್ಸ್ ತಂಡವು ಸೋನು ಶೆಟ್ಟಿ ಮಾಲೀಕತ್ವದ ಎಮ್.ಸಿ.ಸಿ ತಂಡದ ವಿರುದ್ದ ಗೆಲುವು ಸಾಧಿಸಿ ಮಹಾವಿಷ್ಣು ಟ್ರೋಫಿ-2022 ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಚಾಂಪಿಯನ್ ಆಗಿ ಹೊರಹೊಮ್ಮಿದ ದುರ್ಗಾ ವಾರಿಯರ್ಸ್ ತಂಡಕ್ಕೆ ಒಂದು ಲಕ್ಷ ನಗದು ಹಾಗೂ ಶಾಶ್ವತ ಫಲಕ ಮತ್ತು ರನ್ನರ್ಸ್ ಅಪ್ ಪ್ರಶಸ್ತಿ ಪಡೆದುಕೊಂಡ ಎಮ್ ಸಿ ಸಿ ತಂಡಕ್ಕೆ ಅರವತ್ತು ಸಾವಿರ ನಗದು ಹಾಗೂ ಶಾಶ್ವತ ಫಲಕಗಳನ್ನು ನೀಡಿ ಗೌರವಿಸಲಾಯಿತು.
ಫೈನಲ್ ಪಂದ್ಯಾಟದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ದುರ್ಗಾ ವಾರಿಯರ್ಸ್ ನ ರೋಶನ್ ಪೂಜಾರಿ, ಉತ್ತಮ ದಾಂಡಿಗ ಬಗ್ವಾಡಿ ಸೂಪರ್‌ಕಿಂಗ್ಸ್ ನ ವಿಶ್ವಾಸ್ ಶೆಟ್ಟಿ, ಉತ್ತಮ ಎಸೆತಗಾರ ಎಮ್ ಸಿ ಸಿ ಯ ಸಚಿನ್, ಉತ್ತಮ ಕ್ಷೇತ್ರರಕ್ಷಕ ಎಮ್ ಸಿ ಸಿ ಯ ಸವಿನ್ ಶೆಟ್ಟಿ, ಉತ್ತಮ ಗೂಟರಕ್ಷಕ ದುರ್ಗಾ ವಾರಿಯರ್ಸ್ ನ ಪ್ರಥ್ವಿರಾಜ್ ಶೆಟ್ಟಿ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಎಮ್ ಸಿ ಸಿ ತಂಡದ ಸೋನು ಶೆಟ್ಟಿ ಪಡೆದುಕೊಂಡರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಕಟ್ ಬೇಲ್ತೂರು ಪಂಚಾಯತ್ ಅಧ್ಯಕ್ಷ ನಾಗರಾಜ್ ಪುತ್ರನ್, ಉದ್ಯಮಿ ರಾಮಣ್ಣ ಶೆಟ್ಟಿ, ಪಂಚಾಯತ್ ಸದಸ್ಯ ರಾಮ ಶೆಟ್ಟಿ, ಡಿಪಿಎಲ್ ನ ರಕ್ಷಿತ್ ಶೆಟ್ಟಿ, ದೀಪಕ್ ಶೆಟ್ಟಿ ಮೊದಲಾದವರು ಇದ್ದರು.