Site icon Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ವಾರ್ಷಿಕೋತ್ಸವ, ರಾಮ ಎಂ. ಚಂದನ್ ಅವರಿಗೆ ಪ್ರಶಸ್ತಿ ಪ್ರದಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಏಳನೇ ವಾರ್ಷಿಕೋತ್ಸವ ಹಾಗೂ ಸೂತ್ರಕ್ರೀಡೆಯ ಗಾರುಡಿಗ ಕೊಗ್ಗ ದೇವಣ್ಣ ಕಾಮತ್‌ರವರ ಜನ್ಮ ಶತಮಾನೋತ್ಸವ ಸಮಾರೋಪ ಸಮಾರಂಭ ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ವಿಜೃಂಭಣೆಯಿಂದ ಜರುಗಿತು.

ಕುಂದಾಪುರದ ಮಹಿಳಾ ತಂಡದವರು ವಿಷ್ಣು ಸಹಸ್ರನಾಮ ಪಠಿಸಿದರು. ಇದೇ ಸಂದರ್ಭದಲ್ಲಿ ಸುಜೀರ್ ಲಕ್ಷ್ಮೀನಾರಾಯಣ ನಾಯಕ್, ಉಪಾಧ್ಯಕ್ಷರು, ಟಾಟಾ ಮೋಟರ್ ಫೈನಾನ್ಸ್, ಮುಂಬಯಿ ಇವರು ಅಕಾಡೆಮಿಗೆ ದೇಣಿಗೆಯಾಗಿ ನೀಡಿದ ಸೋಲಾರ್ ಲೈಟ್ ನ್ನು ರಘುನಾಥ್ ನಾಯಕ್, ಮಾಜಿ ಡೆಪ್ಯೂಟಿ ಚೀಫ್ ಎಲೆಕ್ಟ್ರಿಕಲ್ ಇಂಜಿನಿಯರ್, ಕೊಂಕಣ್ ರೈಲ್ವೆ ಇವರು ಉದ್ಘಾಟಿಸಿರು.

ಉಪ್ಪಿನಕುದ್ರು ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಯ ಕಲಾವಿದರ ಪ್ರಾರ್ಥನೆಯೊಂದಿಗೆ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಪುನರೂರುರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಪ್ರಾರಂಭವಾಯಿತು. ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್‌ರು ಗಣ್ಯರನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರೊ. ವರದೇಶ್ ಹಿರೇಗಂಗೆ, ಮುಖ್ಯಸ್ಥರು, ಗಾಂಧಿಯನ್ ಸೆಂಟರ್ ಫಾರ್ ಫಿಲೋಸೊಫಿಕಲ್ ಆಟ್ಸ್ ಆಂಡ್ ಸೈನ್ಸ್, ಮಾಹೆ, ಮಣಿಪಾಲ್ ಇವರು ದೀಪ ಬೆಳಗಿಸಿ, ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ -2022ನ್ನು ಹಿರಿಯ ಯಕ್ಷಗಾನ ಹಾಗೂ ಗೊಂಬೆಯಾಟ ಕಲಾವಿದ ರಾಮ ಎಂ. ಚಂದನ್, ಹೆಮ್ಮಾಡಿ ಇವರಿಗೆ ಪ್ರದಾನ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ನಿವೃತ್ತ ಉಪನ್ಯಾಸಕ ಪ್ರೊ. ವೆಂಕಟೇಶ್ ಪೈ, ಪತ್ರಕರ್ತ ಜಾನ್ ಡಿ’ಸೋಜಾ, ಕಾಸರಗೋಡಿನ ಉದ್ಯಮಿ ಸದಾಶಿವ ಭಟ್, ಮಣಿಪಾಲದ ಪನವಾರ ಕೊಂಕಣಿ ಮಾಸ ಪತ್ರಿಕೆಯ ಸಂಪಾದಕ ಜ್ಞಾನದೇವ ಮಲ್ಯ ಹಾಗೂ ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಅಕಾಡೆಮಿಗೆ ಸಿ ಸಿ ಕ್ಯಾಮೆರಾ ನೀಡಿದ ನಾರಾಯಣ ಹರಿದಾಸ್ ಕಾಮತ್, ಬೆಂಗಳೂರು, ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಯ ಕಲಾವಿದರಾದ ಉಮೇಶ್ ಸುವರ್ಣ ಹಾಗೂ ರಾಮ ಬಳೆಗಾರ್ ಜೋಗಿ, ಸುಜೀರ್ ಲಕ್ಷ್ಮೀನಾರಾಯಣ ನಾಯಕ್ ಇವರನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಿ ಸತ್ಕರಿಸಲಾಯಿತು. ಇನ್ನು ಉಪ್ಪಿನಕುದ್ರು ವಲಯದ ಆಶಾಕಾರ್ಯಕರ್ತೆಯರಾದ ಜ್ಯೋತಿ ಮಹಾಬಲ ಪೂಜಾರಿ, ಯಶೋಧಾ ನಾಗೇಶ್ ಸೇರುಗಾರ, ರೇವತಿ ಚಂದ್ರಶೇಖರ ಸೇರುಗಾರ ರನ್ನು ಸಹ ಸನ್ಮಾನಿಸಲಾಯಿತು. ಸ್ಥಳೀಯ ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರಿಗೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅರ್ಹತಾ ಪತ್ರ ಹಾಗೂ ಬಹುಮಾನ ನೀಡಲಾಯಿತು.

ಮನೋರಂಜನಾ ಕಾರ್ಯಕ್ರಮವಾಗಿ ಭಾಸ್ಕರ್ ಕೊಗ್ಗ ಕಾಮತ್ ರವರು ತಮ್ಮ ತಂಡದವರೊಂದಿಗೆ ಕೂಡಿ ನಡೆಸಿದ ಗೊಂಬೆಯಾಟ ಪ್ರಾತ್ಯಕ್ಷಿಕೆ ಕಿಕ್ಕಿರಿದು ನೆರೆದ ಜನರ ಹೃನ್ಮನ ತಣಿಸಿತು. ತದನಂತರ ಸ್ಥಳೀಯ ವಿದ್ಯಾರ್ಥಿಗಳಿಂದ ನಡೆದ ವೈವಿಧ್ಯಮಯ ನೃತ್ಯಗಳು ನೆರೆದ ಪ್ರೇಕ್ಷಕರನ್ನು ರಂಜಿಸಿತು. ಶಿಕ್ಷಕ ನಾಗೇಶ್ ಶ್ಯಾನುಭಾಗ್, ಕುಮಾರಿ ಚೇತನಾ ಶ್ಯಾನುಭಾಗ್ ಕಾರ್ಯಕ್ರಮ ನಿರ್ವಹಿಸಿದರು. ಉದಯ ಭಂಡಾರ್‌ಕಾರ್ ಧನ್ಯವಾದ ಸಲ್ಲಿಸಿದರು.

Exit mobile version