Kundapra.com ಕುಂದಾಪ್ರ ಡಾಟ್ ಕಾಂ

ಬದುಕಿನ ಪಾತ್ರವನ್ನು ಒರೆಗೆ ಹಚ್ಚುವ ರಂಗಭೂಮಿ: ಮನು ಹಂದಾಡಿ

ಸುರಭಿ ಬೈಂದೂರು – ರಾಜ್ಯ ಮಟ್ಟದ ನಾಟಕೋತ್ಸವ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಅರವತ್ನಾಲ್ಕು ವಿದ್ಯೆಗಳಲ್ಲಿ ನಾಟಕವೂ ಒಂದು. ಅದು ನಮ್ಮ ಬದುಕಿನ ಪಾತ್ರಗಳನ್ನೇ ರಂಗದ ಮೇಲೆ ತಂದು ವಿಮರ್ಷಿಸುವ, ಒರೆಗೆ ಹಚ್ಚುವ ಕಾರ್ಯವನ್ನು ಪರಿಣಾಮಕಾರಿಯಾಗಿ ನಿಭಾಯಿಸಬಲ್ಲದು ಎಂದು ನಡೂರು ರತ್ನಶೀಲ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ, ಹಾಸ್ಯ ಕಲಾವಿದ ಮನು ಹಂದಾಡಿ ಹೇಳಿದರು.

ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಆಶ್ರಯದಲ್ಲಿ ಆಯೋಜಿಸಲಾದ ನಾಲ್ಕು ದಿನಗಳ ರಾಜ್ಯ ಮಟ್ಟದ ನಾಟಕೋತ್ಸವ ’ರಂಗಸುರಭಿ – 2022’ನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ ಮೊಬೈಲ್‌ನಲ್ಲಿಯೇ ಮುಳುಗಿ ಹೋಗಿರುವ ಜನರು ಸಾಂಸ್ಕೃತಿಕ ಚಟುವಟಿಕೆಗಳಿಂದ ವಿಮುಖರಾಗುತ್ತಿದ್ದಾರೆ. ಅವರನ್ನು ಮತ್ತೆ ನೈಜತೆಯತ್ತ ಸೆಳೆಯಲು ಕಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ಅನಿವಾರ್ಯವಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ. ಗೋವಿಂದ ಬಾಬು ಪೂಜಾರಿ ಅವರು ಮಾತನಾಡಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಮಗು ಮುಂದೆ ಉತ್ತಮ ಕಾರ್ಯಗಳಲ್ಲಿಯೇ ಮುಂದುವರಿಯುತ್ತದೆ. ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಕಾರ್ಯವಾದಾಗ ಮುಂದಿನ ಪೀಳಿಗೆಗೆ ಉತ್ತಮವಾದುದನ್ನು ಕೊಡಲು ಸಾಧ್ಯವಿದೆ ಎಂದರು.

ಹಿರಿಯ ನಟ, ನಿರ್ದೇಶಕ ರವೀಂದ್ರ ಕಿಣಿ ಕಂಚಿಕಾನ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಉಡುಪಿ ಅರಣ್ಯ ಸಂಚಾರಿ ದಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ ಪಿ., ಉದ್ಯಮಿ ಪ್ರಸಾದ್ ಪ್ರಭು ಶಿರೂರು, ಶಿರೂರು ಜೆಸಿಐ ಅಧ್ಯಕ್ಷ ಸುರೇಶ್ ಮಾಕೋಡಿ, ಡಾ| ಬಿ. ಆರ್. ಅಂಬೇಡ್ಕರ್ ಸಂಘದ ಬೈಂದೂರು ಇದರ ಕಾರ್ಯದರ್ಶಿ ದಯಾನಂದ ಯಡ್ತರೆ ಉಪಸ್ಥಿತರಿದ್ದರು.

ಸುರಭಿ ನಿರ್ದೇಶಕ ಸುಧಾಕರ ಪಿ. ಬೈಂದೂರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಲಾವಿದರಾದ ಪೂರ್ಣಿಮಾ, ಲಲಿತಾ ಪೂರ್ಣಿಮಾ ಸುರಭಿ ಗೀತೆ ಹಾಡಿದರು. ಸುರಭಿ ಅಧ್ಯಕ್ಷ ನಾಗರಾಜ ಪಿ. ಯಡ್ತರೆ ಸ್ವಾಗತಿಸಿ ಕಾರ್ಯದರ್ಶಿ ಭಾಸ್ಕರ ಬಾಡ ಅವರು ಧನ್ಯವಾದಗೈದರು. ಸುರಭಿ ಸದಸ್ಯ ಸುನಿಲ್ ಹೆಚ್. ಜಿ. ಬೈಂದೂರು ಕಾರ್ಯಕ್ರಮ ನಿರೂಪಿಸಿದರು.

Exit mobile version