Kundapra.com ಕುಂದಾಪ್ರ ಡಾಟ್ ಕಾಂ

ಆನ್ಲೈನ್ ವಂಚನೆ ತಡೆಗೆ ವ್ಯಾಪಕ ಜಾಗೃತಿ ಮೂಡಿಸಿ: ಡಾ. ನವೀನ್ ಭಟ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ,ಮಾ.30:
ಆನ್ಲೈನ್ ಮೂಲಕ ಬ್ಯಾಂಕ್ ಗ್ರಾಹಕರನ್ನು ವಂಚಿಸುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಬಗ್ಗೆ ಜಿಲ್ಲೆಯ ಗ್ರಾಮೀಣ ಭಾಗದ ಬ್ಯಾಂಕ್ ಗ್ರಾಹಕರಿಗೆ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಂಚನೆಯಿAದ ತಡೆಯುವಂತೆ ಮಾಡಲು ಕ್ರಮ ಕೈಗೊಳ್ಳುವಂತೆ ಜಿಲ್ಲೆಯ ಎಲ್ಲಾ ಬ್ಯಾಂಕ್ನ ಅಧಿಕಾರಿಗಳಿಗೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಸೂಚನೆ ನೀಡಿದರು.

ಅವರು ಇಂದು ಜಿ.ಪಂ. ಸಭಾಂಗಣದಲ್ಲಿ ನಡೆದ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಬ್ಯಾಂಕ್ನ ಗ್ರಾಹಕರ ಮೊಬೈಲ್ಗೆ ಬರುವ ವಿವಿಧ ರೀತಿಯ ವಂಚನೆ ಕರೆಗಳ ಕುರಿತಂತೆ ಮಾಹಿತಿ, ತಮ್ಮ ಮೊಬೈಲ್ಗೆ ಬರುವ ಓ.ಟಿ.ಪಿ.ಯನ್ನು ಇತರರಿಗೆ ನೀಡದಂತೆ ಹಾಗೂ ವಂಚನೆಗೊಳಗಾದಲ್ಲಿ ತಕ್ಷಣವೇ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಜಿಲ್ಲೆಯಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕ ರೀತಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಸಾರ್ವಜನಿಕರು ಆನ್ಲೈನ್ ವಂಚನೆಗಳಿಗೆ ಒಳಗಾಗದಂತೆ ತಡೆಯಿರಿ ಎಂದರು.

ಇತ್ತೀಚೆಗೆ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಂದು ಕೊರತೆ ಸಭೆಯಲ್ಲಿ, ವಿವಿಧ ಯೋಜನೆಗಳಡಿಯಲ್ಲಿ ಅರ್ಜಿ ಸಲ್ಲಿಸುವ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಸಾಲದ ಅರ್ಜಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತಿರಸ್ಕೃತಗೊಳಿಸುತ್ತಿರುವ ಕುರಿತು ದೂರುಗಳು ಬಂದಿದ್ದು, ಈ ಕುರಿತಂತೆ ಜಿಲ್ಲಾ ಲೀಡ್ಬ್ಯಾಂಕ್ ಮ್ಯಾನೇಜರ್ ಅವರ ಅಧ್ಯಕ್ಷತೆಯಲ್ಲಿ ಒಂದು ಪ್ರತ್ಯೇಕ ಕೋಶವನ್ನು ತೆರೆದು, ಎಲ್ಲಾ ಬ್ಯಾಂಕ್ಗಳು ತಮ್ಮಲ್ಲಿ ಬರುವ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಸಾಲದ ಅರ್ಜಿಗಳು ಸೇರಿದಂತೆ ಮತ್ತಿತರ ಸಾಮಾನ್ಯರ ಅರ್ಜಿಗಳನ್ನು ಇಲ್ಲಿಗೆ ಸಲ್ಲಿಸಿ, ಈ ಸಮಿತಿಯಲ್ಲಿ ಅರ್ಜಿಗಳನ್ನು ಪರಿಶೀಲಿಸಿ ಸಾಲ ಮಂಜೂರು ಮಾಡುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ನರೇಗಾ ಯೋಜನೆಯ ಪ್ರಗತಿ ಉತ್ತಮವಾಗಿದ್ದು, ಯೋಜನೆಯಡಿ ಕಾರ್ಯನಿರ್ವಹಿಸಿದ ಕಾರ್ಮಿಕರಿಗೆ ವೇತನ ಪಾವತಿಸುವ ಸಂದರ್ಭದಲ್ಲಿ ಆಧಾರ್ ಸೀಡಿಂಗ್ನಿAದ ಸಮಸ್ಯೆಗಳಾಗುತ್ತಿದ್ದು, ಈ ಸಮಸ್ಯೆಯನ್ನು 1 ತಿಂಗಳ ಒಳಗೆ ಬಗೆಹರಿಸುವಂತೆ ತಿಳಿಸಿದರು.

ಜಿಲ್ಲೆಯ ಬ್ಯಾಂಕ್ಗಳಲ್ಲಿ ಕನ್ನಡ ಮಾತನಾಡಲು ಬಾರದ ಅಧಿಕಾರಿಗಳಿಂದ ದೈನಂದಿನ ವ್ಯವಹಾರ ನಿರ್ವಹಿಸಲು ಸಾರ್ವಜನಿಕರಿಗೆ ಸಮಸ್ಯೆಗಳಾಗುತ್ತಿದ್ದು, ಪ್ರಸ್ತುತ ಬ್ಯಾಂಕ್ಗಳಲ್ಲಿ ಇರುವ ಹೊರರಾಜ್ಯದ ಅಧಿಕಾರಿಗಳಿಗೆ ಕಡ್ಡಾಯವಾಗಿ ಕನ್ನಡ ಕಲಿಯುವ ಕುರಿತು ಹಾಗೂ ಅಧಿಕಾರಿಗಳ ವಾರ್ಷಿಕ ವರದಿಯಲ್ಲಿ ಕನ್ನಡ ಪರೀಕ್ಷೆ ಉತ್ತೀರ್ಣರಾಗಿರುವುದನ್ನು ನಮೂದಿಸುವ ಬಗ್ಗೆ ಈ ಸಭೆಯ ಮೂಲಕ ರಾಜ್ಯಮಟ್ಟದ ಸಮಿತಿಗೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.

ಪ್ರಸ್ತುತ ತ್ರೆöÊಮಾಸಿಕ ಅವಧಿಯಲ್ಲಿ ಜಿಲ್ಲೆಯ ಸಾಲ ಮತ್ತು ಠೇವಣಿ ಅನುಪಾತ ಕಳೆದ ಬಾರಿಗಿಂತ ಶೇ.3.8% ಅಧಿಕಗೊಂಡಿದ್ದು, ಇದೇ ರೀತಿಯಲ್ಲಿ ಎಲ್ಲಾ ಬ್ಯಾಂಕ್ಗಳು ತಮಗೆ ನಿಗಧಿಪಡಿಸಿದ ಪ್ರಮಾಣವನ್ನು ತಲುಪುವಂತೆ ತಿಳಿಸಿದ ಸಿಇಓ, ವಿವಿಧ ಸರಕಾರಿ ಯೋಜನೆಗಳಡಿಯಲ್ಲಿ ಸಲ್ಲಿಕೆಯಾಗುವ ಸಾಲದ ಅರ್ಜಿಗಳನ್ನು ಆದಷ್ಟು ಶೀಘ್ರದಲ್ಲಿ ಫಲಾನುಭವಿಗಳಿಗೆ ಬಿಡುಗಡೆ ಮಾಡುವಂತೆ ಹಾಗೂ ಎಲ್ಲಾ ಬ್ಯಾಂಕ್ಗಳು ಮತ್ತು ಸರಕಾರಿ ಇಲಾಖೆಗಳು ಉತ್ತಮ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಹೇಳಿದರು.

ಬ್ಯಾಂಕ್ಗಳು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿದರೆ ಬ್ಯಾಂಕಿನ ಆರ್ಥಿಕ ಚಟುವಟಿಕೆಗಳು ಹೆಚ್ಚುತ್ತವೆ ಎಂದ ಅವರು, ಸಾಲಮೇಳಗಳು ನಡೆಸುವುದು ಸೇರಿದಂತೆ ಸರ್ಕಾರಿ ಇಲಾಖೆಗಳ ಕಾರ್ಯಕ್ರಮಗಳಲ್ಲಿ, ಬ್ಯಾಂಕ್ಗಳಲ್ಲಿ ಜನಸಾಮಾನ್ಯರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಆರ್.ಬಿ.ಐ ನ ಎಜಿಎಂ ತನು ನಂಜಪ್ಪ ಮಾತನಾಡಿ, ಠೇವಣಿ ಹಾಗೂ ಸಾಲ ನೀಡುವಿಕೆಯ ಅನುಪಾತ ಕೆಲವು ಬ್ಯಾಂಕ್ಗಳಲ್ಲಿ ತುಂಬಾ ಕಡಿಮೆ ಇದೆ ಎಂದ ಅವರು ಎಲ್ಲಾ ಕ್ಷೇತ್ರದವರಿಗೂ ಸಾಲ ನೀಡುವ ಕಾರ್ಯ ಹೆಚ್ಚಿಸಬೇಕು ಎಂದರು.

ಕೆನರಾ ಬ್ಯಾಂಕ್ನ ಪ್ರಾದೇಶಿಕ ಮ್ಯಾನೇಜರ್ ಲೀನಾ ಪಿಂಟೋ ಮಾತನಾಡಿ, ಜಿಲ್ಲೆಯಲ್ಲಿ 3 ನೇ ತ್ರೆöÊಮಾಸಿಕ ಅವಧಿಯಲ್ಲಿ, 31045 ಕೋಟಿ ರೂ. ಠೇವಣಿ ಸಂಗ್ರಹಿಸಿ 10.70% ಬೆಳವಣಿಗೆ ಸಾಧಿಸಿದ್ದು, 14660 ಕೋಟಿ ರೂ. ಸಾಲ ವಿತರಿಸಿ, 12.61% ಬೆಳವಣಿಗೆ ದಾಖಲಿಸಿದ್ದು, ಜಿಲ್ಲೆಯ ಸಾಲ ಮತ್ತು ಠೇವಣಿ ಅನುಪಾತ 47.22% ಆಗಿದೆ ಎಂದರು.

ಕೃಷಿ ವಲಯಕ್ಕೆ 2498 ಕೋಟಿ ರೂ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯಕ್ಕೆ 2181 ಕೋಟಿ ರೂ, ವಿದ್ಯಾಭ್ಯಾಸ ಸಾಲ 85 ಕೋಟಿ, ವಸತಿ ವಲಯಕ್ಕೆ 434 ಕೋಟಿ ರೂ ವಿತರಿಸಿದೆ. ಆದ್ಯತಾ ವಲಯಕ್ಕೆ ಒಟ್ಟು 5655 ಕೋಟಿ ರೂ ಹಾಗೂ ಆದ್ಯತೇತರ ವಲಯಕ್ಕೆ 3124 ಕೋಟಿ ರೂ ಸಾಲ ವಿತರಿಸಿದೆ , ದುರ್ಬಲ ವರ್ಗದ 89720 ಮಂದಿಗೆ 3250 ಕೋಟಿ ರೂ ಮತ್ತು ಅಲ್ಪ ಸಂಖ್ಯಾತ ವರ್ಗದ 37261 ಮಂದಿಗೆ 1412 ಕೋಟಿ ರೂ ವಿತರಿಸಿದೆ ಎಂದರು.

ಇದೇ ಸಂದರ್ಭದಲ್ಲಿ 2022-23 ರಲ್ಲಿ ಜಿಲ್ಲೆಯ ಬ್ಯಾಂಕ್ ಗಳ ಮೂಲಕ , ಆದ್ಯತಾ ವಲಯದ ಕೃಷಿ, ಉದ್ಯಮ , ವಸತಿ ವಲಯಕ್ಕೆ 9654.70 ಕೋಟಿ ರೂ, ಸೇರಿದಂತೆ ಒಟ್ಟು 12659.26 ಕೋಟಿ ರೂ. ಮೊತ್ತದ ಸಾಲ ನೀಡುವ ಗುರಿ ಹೊಂದಿರುವ, ಜಿಲ್ಲಾ ಕ್ರೆಡಿಟ್ ಪ್ಲಾನ್ ಪುಸ್ತಕ ಬಿಡುಗಡೆ ಮಾಡಲಾಯಿತು.

ಸಭೆಯಲ್ಲಿ ನಬಾರ್ಡ್ನ ಎಜಿಎಂ ಸಂಗೀತಾ ಕಾರ್ಥಾ, ಕೆನರಾ ಬ್ಯಾಂಕ್ನ ಪ್ರಾದೇಶಿಕ ಮ್ಯಾನೇಜರ್ ಕಾಳಿ, ಯೂನಿಯನ್ ಬ್ಯಾಂಕ್ನ ಪ್ರಾದೇಶಿಕ ಮ್ಯಾನೇಜರ್ ಡಾ.ವಾಸಪ್ಪ, ಕೆ.ವಿ.ಜಿ ಬ್ಯಾಂಕ್ನ ಪ್ರಾದೇಶಿಕ ಮ್ಯಾನೇಜರ್ ಸೂರ್ಯ ನಾರಾಯಣ, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪಿಂಜಾರ ಮತ್ತು ಜಿಲ್ಲೆಯ ವಿವಿಧ ಬ್ಯಾಂಕ್ಗಳ ಅಧಿಕಾರಿಗಳು ಮತ್ತು ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Exit mobile version