Kundapra.com ಕುಂದಾಪ್ರ ಡಾಟ್ ಕಾಂ

ಉಡುಪಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆದ್ಯತೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ,ಏ.11:
ಮುಂಬರುವ ದಿನಗಳಲ್ಲಿ ಬೀಚ್ ಟೂರಿಸಂ ಹಾಗೂ ಟೆಂಪಲ್ ಟೂರಿಸಂ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಯಾಗಲಿದೆ. ಕರಾವಳಿ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಸಿಆರ್‌ಝಡ್ ನಿಯಮಾವಳಿಗಳು ಬದಲಾಯಿಸುವ ಬಗ್ಗೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಲಾಗಿದ್ದು, ಸೂಕ್ತ ಸ್ಪಂದನೆ ದೊರೆತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಕರ್ನಾಟಕ ರಸ್ತೆ ಸಾರಿಗೆ ನಿಗಮ, ಮಂಗಳೂರು ವಿಭಾಗದ ವತಿಯಿಂದ ನೂತನವಾಗಿ ನಿರ್ಮಿಸಿರುವ ಡಾ. ವಿ.ಎಸ್.ಆಚಾರ್ಯ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದರು.

ಉಡುಪಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆದ್ಯತೆ:
ಉಡುಪಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಸರ್ಕಾರದ ಆದ್ಯತೆಯಾಗಿದೆ. 250 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಪಿಪಿಪಿ ಮಾದರಿಯಲ್ಲಿ
ಮೆಡಿಕಲ್ ಕಾಲೇಜು ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. 200 ಹಾಸಿಗೆ ಸಾಮರ್ಥ್ಯದ ಸುಸಜ್ಜಿತವಾದ ತಾಯಿ ಮಕ್ಕಳ ಆಸ್ಪತ್ರೆಯ ನಿರ್ಮಾಣ ಕೈಗೊಳ್ಳಲಾಗುತ್ತಿದೆ. ಕುಡಿಯುವ ನೀರು ಹಾಗೂ ಒಳಚರಂಡಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಮೀನುಗಾರಿಕೆ, ಪ್ರವಾಸೋದ್ಯಮಕ್ಕೆ ಸದಾ ಪ್ರೋತ್ಸಾಹ ನೀಡಲಿದ್ದು, ಕರಾವಳಿ ಭಾಗದ ಜನರ ಆರ್ಥಿಕ ಪರಿಸ್ಥಿತಿ ಉತ್ತಮಗೊಳಿಸುವ  ಗುರಿಯನ್ನು ಸರ್ಕಾರ ಹೊಂದಿದೆ ಎಂದು ತಿಳಿಸಿದರು.

ಬಸ್ ನಿಲ್ದಾಣದಲ್ಲಿ ಸಮಯ ಪರಿಪಾಲನೆ ಹಾಗೂ ಸ್ವಚ್ಛತೆ ಮುಖ್ಯ:
ಸಾರಿಗೆ ಸೇವೆಯಲ್ಲಿ ಸಮಯ ಮತ್ತು ಬದ್ಧತೆ ಬಹಳ ಮುಖ್ಯ. ಕರಾವಳಿ ಪ್ರದೇಶದಲ್ಲಿ ಖಾಸಗಿ ಸಾರಿಗೆ ದೊಡ್ಡ ಪ್ರಮಾಣದಲ್ಲಿ ಜನರ ಸೇವೆ ಮಾಡುತ್ತಿದೆ. ನಮ್ಮ ಸಾರಿಗೆ ಸಂಸ್ಥೆ ಜನರ ಸೇವೆ, ಖಾಸಗಿಯವರಿಗಿಂತ ಹೆಚ್ಚಿನ ದಕ್ಷತೆ ಹಾಗೂ ನಿಷ್ಠೆಯಿಂದ ಸೇವೆ ಸಲ್ಲಿಸಬೇಕು. ಶಾಲಾ ಕಾಲೇಜು ಮಕ್ಕಳಿಗೆ, ಆಸ್ಪತ್ರೆಗಳಿಗೆ ಹೋಗುವವರಿಗೆ ಬಸ್ ಸೇವೆ ಅತ್ಯಂತ ಮಹತ್ವವಾದದ್ದು. ಬಸ್ ನಿಲ್ದಾಣದಲ್ಲಿ ಬಸ್ ಓಡಾಟದ ಸಮಯ ಪರಿಪಾಲನೆ ಹಾಗೂ ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಬೇಕು. ಬಸ್ ನಿಲ್ದಾಣದ ಆವರಣದಲ್ಲಿ ಎರಡು ಮಲ್ಟಿಪ್ಲೆಕ್ಸ್ ಚಿತ್ರಮಂದಿರ ನಿರ್ಮಿಸಲು ಅತಿ ಶೀಘ್ರದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಡಾ. ವಿ.ಎಸ್.ಆಚಾರ್ಯ ಅವರ ಪ್ರಾಮಾಣಿಕತೆ ಎಲ್ಲರಿಗೂ ಆದರ್ಶ:
ಸಾರ್ವಜನಿಕ ಬದುಕಿನಲ್ಲಿ ಪ್ರಾಮಾಣಿಕವಾಗಿ ಆಡಳಿತ ನಡೆಸಬಹುದು ಎನ್ನುವುದಕ್ಕೆ ಆದರ್ಶವಾಗಿರುವ  ಡಾ. ವಿ.ಎಸ್.ಆಚಾರ್ಯ ಅವರ ಹೆಸರಿನಲ್ಲಿ ಬಸ್ ನಿಲ್ದಾಣ ಪ್ರಾರಂಭಿಸಿರುವುದು ಉತ್ತಮ ಕಾರ್ಯವಾಗಿದೆ ಎಂದರು.

ಸಮಾರಂಭದಲ್ಲಿ  ಸಾರಿಗೆ ಸಚಿವ ಬಿ. ಶ್ರೀರಾಮುಲು, ಸಚಿವರಾದ ಎಸ್. ಅಂಗಾರ, ಕೋಟ ಶ್ರೀನಿವಾಸ ಪೂಜಾರಿ,  ಸುನೀಲ್ ಕುಮಾರ್ ಶಾಸಕರಾದ ರಘುಪತಿ ಭಟ್, ಮೊದಲಾದವರು ಉಪಸ್ಥಿತರಿದ್ದರು.

Exit mobile version