Kundapra.com ಕುಂದಾಪ್ರ ಡಾಟ್ ಕಾಂ

ತ್ರಾಸಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಧಿಕಾರಿಗಳಿಗೆ ಅಭಿನಂದನಾ ಸಮಾರಂಭ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ:
ಅಧಿಕಾರಿಗಳಿಗೆ ಅಧಿಕಾರ ಶಾಶ್ವತವಲ್ಲ. ತಮ್ಮ ಅಧಿಕಾರಾವಧಿಯಲ್ಲಿ ಜನರಿಗೆ ನೀಡುವ ಸೇವೆ, ಕರ್ತವ್ಯದಲ್ಲಿ ತೋರಿಸುವ ಶಿಸ್ತು, ಪ್ರಾಮಾಣಿಕತೆ ಶಾಶ್ವತವಾಗಿ ಜನರ ಮನಸ್ಸಿನಲ್ಲಿ ಉಳಿಯುತ್ತದೆ. ಧರ್ಮಸ್ಥಳ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭ ಸದಸ್ಯರಿಂದ ದೊರೆಯುವ ಪ್ರೀತಿ, ವಿಶ್ವಾಸ ಅವಿಸ್ಮರಣೀಯ. ಮುಖ್ಯವಾಗಿ ಬೈಂದೂರು ತಾಲೂಕಿನಲ್ಲಿ ಸೇವೆ ಸಲ್ಲಿಸಲು ಅವಕಾಶ ದೊರಕಿರುವುದು ಜೀವನದಲ್ಲಿ ಮರೆಯಲಾರದ ಕ್ಷಣ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ನ ಉಡುಪಿ ಜಿಲ್ಲೆ ಹಿರಿಯ ಜಿಲ್ಲಾ ನಿರ್ದೇಶಕ ಗಣೇಶ ಬಿ. ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ತಾಲೂಕು ಜನಜಾಗೃತಿ ವೇದಿಕೆ ಹಾಗೂ ತಾಲೂಕು ಭಜನಾ ಪರಿಷತ್ ವತಿಯಿಂದ ವಲಯ ಮೇಲ್ವಿಚಾರಕರ ಸಹಯೋಗದೊಂದಿಗೆ ತ್ರಾಸಿಯ ಅಣ್ಣಪ್ಪಯ್ಯ ಸಭಾಭವನದಲ್ಲಿ ಸೋಮವಾರ ಜರಗಿದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಕೇಂದ್ರ ಸಮಿತಿ ಅಧ್ಯಕ್ಷ ರಘುರಾಮ ಕೆ.ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕೊಪ್ಪಳ ಪ್ರಾದೇಶಿಕ ನಿರ್ದೇಶಕರಾಗಿ ಪದೋನ್ನತಿ ಹೊಂದಿ ವರ್ಗಾವಣೆಗೊಂಡಿರುವ ಹಿರಿಯ ಜಿಲ್ಲಾ ನಿರ್ದೇಶಕ ಗಣೇಶ ಬಿ. ಮತ್ತು ಉಡುಪಿ ಆರ್‌ಡಿ ಕಛೇರಿಗೆ ವರ್ಗಾವಣೆಗೊಂಡಿರುವ ಬೈಂದೂರು ತಾಲೂಕು ಯೋಜನಾಧಿಕಾರಿ ಶಶಿರೇಖಾ ಪಿ. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬೈಂದೂರು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಸುಧಾಕರ ಆಚಾರ್ಯ, ಪ್ರಗತಿಬಂಧು ಸ್ವಸಹಾಯ ಸಂಘಗಳ ತ್ರಾಸಿ ವಲಯ ಅಧ್ಯಕ್ಷ ನಾಗರಾಜ ಖಾರ್ವಿ, ಕೃಷ್ಣ ಪೂಜಾರಿ, ವೆಂಕಟ ಪೂಜಾರಿ ಶುಭಾಶಂಸನೆಗೈದರು. ತಾಲೂಕಿನ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರು, ಸದಸ್ಯರು, ಜನಜಾಗೃತಿ ವೇದಿಕೆ ಸದಸ್ಯರು, ಮೇಲ್ವಿಚಾರಕರು, ಯೋಜನೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವಲಯ ಮೇಲ್ವಿಚಾರಕ ರಾಮಚಂದ್ರ ಸ್ವಾಗತಿಸಿದರು. ಆಂತರಿಕ ಲೆಕ್ಕಪರಿಶೋಧಕ ರಾಘವೇಂದ್ರ ಕಾರ್ಯಕ್ರಮ ನಿರ್ವಹಿಸಿದರು. ವಲಯ ಮೇಲ್ವಿಚಾರಕ ರವಿಶಂಕರ ವಂದಿಸಿದರು.

Exit mobile version