ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಲಾವಿದ ಅಥವಾ ತಂಡ ಇವೆರಡನ್ನು ತುಲನೆ ಮಾಡಿ ನೋಡಿದಾಗ ಯಾವುದು ಮುಖ್ಯ ಎಂಬ ಸಂಘರ್ಷ ಹುಟ್ಟಿಕೊಳ್ಳುತ್ತದೆ. ಆದರೆ ನಾವೆಲ್ಲರೂ ಕಲೆಗೆ ಶರಣಾದಾಗ ಮಾತ್ರ ಸಂಘಟನೆ ವಿಭಜನೆಯಾಗದೇ ಮುನ್ನಡೆಯುತ್ತದೆ. ಇಂದಿನ ದಿನಗಳಲ್ಲಿ ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡಬೇಕಾಗಿದೆ. ಹಿರಿಯರು ನೀಡಿದ ಧನಾತ್ಮಕ ಸಲಹೆಗಳನ್ನು ವಿಮರ್ಶಿಸಿ ಅರಿತಾಗಲೇ ಹೊಸ ಬದುಕಿನತ್ತ ಸಾಗಲು ಸಾಧ್ಯವಾಗುತ್ತದೆ ಎಂದು ರಂಗಭೂಮಿ ಉಡುಪಿ ಇದರ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಹೇಳಿದರು.
ಇಲ್ಲಿನ ಶಾರದಾ ವೇದಿಕೆಯಲ್ಲಿ ಬುಧವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಲಾವಣ್ಯ ಬೈಂದೂರು ವತಿಯಿಂದ ಐದು ದಿನಗಳ ಕಾಲ ನಡೆದ ರಂಗಪಂಚಮಿ-2022 ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಇಂದಿನ ಕಾಲಘಟ್ಟದಲ್ಲಿ ಆಧುನಿಕತೆ ಹಾಗೂ ಹಿಂದಿನ ವ್ಯವಸ್ಥೆಯನ್ನು ಸರಿದೂಗಿಸಿಕೊಂಡು ಹೋಗುವ ಅನಿವಾರ್ಯತೆಯಿದೆ. ಸಂಸ್ಥೆ ಹಿಂದಿನ ಕಷ್ಟದ ದಿನಗಳನ್ನು ಹಾಗೂ ಅದರ ಕಲ್ಪನೆಗಳನ್ನು ಮತ್ತು ನಡೆದು ಬಂದ ರಹದಾರಿಯನ್ನು ಮುಂದಿನ ದಿನಗಳಲ್ಲಿ ಸಂಸ್ಥೆಯನ್ನು ಮುನ್ನೆಡೆಸುವವರು ನೆನಪಿಟ್ಟುಕೊಂಡು ಆಗಾಗ ಸಿಂಹಾಲೋಕನ ಮಾಡಿಕೊಳ್ಳುವುದು ಅತ್ಯವಶ್ಯಕ. ಹಳೆಯದನ್ನು ನೆನಪಿಸಿಕೊಂಡಾಗ ನಮ್ಮಲ್ಲಿನ ಗೊಂದಲಗಳು ಹಾಗೂ ನಮ್ಮ ಮುಂದಿನ ದಾರಿ ನಿಶ್ಚಳವಾಗುತ್ತದೆ. ಸಂಸ್ಥೆಯನ್ನು ಬದ್ರಬನಾದಿಯಲ್ಲಿ ನಿಲ್ಲಿಸಲು ಸಹಕಾರಿಯಾಗುತ್ತದೆ ಎಂದರು.
ಉದ್ಯಮಿ ರಾಜೇಂದ್ರ ಹೆಜ್ಜಾಲು ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಅರೆಹೊಳೆ ಪ್ರತಿಷ್ಠಾನದ ಅಧ್ಯಕ್ಷ ಅರೆಹೊಳೆ ಸದಾಶಿವ ರಾವ್ ಇವರನ್ನು ಸನ್ಮಾನಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಉದ್ಯಮಿ ಯು. ಪಾಂಡುರಂಗ ಪಡಿಯಾರ್, ಸೇನೇಶ್ವರ ದೇವಳದ ಆಡಳಿತಾಧಿಕಾರಿ ಮಂಜುನಾಥ ಬಿಲ್ಲವ, ನೃತ್ಯ ವಿದೂಷಿ ಶಾಂಭವಿ ಆಚಾರ್ಯ, ಸುರಭಿ ಅಧ್ಯಕ್ಷ ನಾಗರಾಜ ಪಿ. ಯಡ್ತರೆ, ಅಂಬೇಡ್ಕರ್ ಸಂಘದ ಅಧ್ಯಕ್ಷ ಲಕ್ಷ್ಮಣ ಯಡ್ತರೆ ಶುಭಹಾರೈಸಿದರು. ಲಾವಣ್ಯ ಸ್ಥಾಪಕಾಧ್ಯಕ್ಷ ಯು. ಶ್ರೀನಿವಾಸ ಪ್ರಭು, ಮಾಜಿ ಅಧ್ಯಕ್ಷ ಕೆ. ಪ್ರಭಾಕರನ್ ಇದ್ದರು. ಕಾರ್ಯದರ್ಶಿ ಮೂರ್ತಿ ಬೈಂದೂರು ಪ್ರಾರ್ಥಿಸಿದರು. ಎಚ್. ವಿಶ್ವನಾಥ ಆಚಾರ್ಯ ಸ್ವಾಗತಿಸಿ, ಹರೇಗೋಡು ಉದಯ್ ಆಚಾರ್ಯ ವಂದಿಸಿದರು. ಶ್ರೀಧರ ವಸ್ರೆ ನಿರೂಪಿಸಿದರು.