ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಂಬೇಡ್ಕರ್ ಕಾಲದಲ್ಲಿ ಆಸ್ಪೃಶ್ಯತೆ, ವರ್ಗ ಸಂಘರ್ಷ, ಸಮಾಜದಲ್ಲಿ ಇದ್ದ ವೈಪರೀತ್ಯಗಳ ಮೆಟ್ಟಿನಿಂತು ಸಂವಿಧಾನ ರಚಿಸಿ, ದೇಶಕ್ಕೆ ಸಂವಿಧಾನ ನೀಡಿದ ಅಂಬೇಡ್ಕರ್ ಸಾಗಿಬಂದ ಹಾದಿ ಸುಲಭದ್ದಾಗಿರಲಿಲ್ಲ. ಭಾರತ ಶಕ್ತಿಯುತ ದೇಶವಾಗಿ ಬೆಳೆಯಲು ಅಂಬೇಡ್ಕರ್ ಅವರ ಸಂವಿಧಾನ ಕಾರಣವಾಗಿದೆ ಎಂದು ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು ಅಭಿಪ್ರಾಯಪಟ್ಟರು.
ಕುಂದಾಪುರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಂಘಟನೆ ಆಶ್ರಯದಲ್ಲಿ ತಾಲೂಕು ಪಂಚಾಯಿತಿ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಗುರುವಾರ ನಡೆದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಉದ್ಘಾಟಿಸಿ ಮಾತನಾಡಿ ನಾವು ಅಂಬೇಡ್ಕರ್ ಅವರು ಸಾಗಿಬಂದ ದಾರಿಯಲ್ಲಿ ಸಾಗುವ ಮೂಲಕ ನಮ್ಮಿಂದಾದ ಕೊಡುಗೆ ದೇಶಕ್ಕೆ ನೀಡಿದರೆ ಅಂಬೇಡ್ಕರ್ ಜಯಂತಿಗೊಂದು ಅರ್ಥಬರುತ್ತದೆ ಎಂದರು.
ಕುಂದಾಪುರ ಪುರಸಭೆ ಅಧ್ಯಕ್ಷ ವೀಣಾ ಭಾಸ್ಕರ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಮಂಜುನಾಥ ಹಿಲಿಯಾಣ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ಉಪನ್ಯಾಸ ಮಾಡಿದರು.
ದಲಿತ ಸಮಾಜದ ಪರ ದ್ವನಿಯಾಗಿ ಸಂಘಟನೆ ಹಾಗೂ ಸಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸಿದ ಗೋವಿಂದ ಮಾರ್ಗೋಳಿ, ಗೋಪಾಲಕೃಷ್ಣ ಹಾಗೂ ಸೀತಾ ಅವರ ಎಸಿ ಕೆ.ರಾಜು ಸನ್ಮಾನಿಸಿದರು.
ಕುಂದಾಪುರ ತರಹಸೀಲ್ದಾರ್ ಕಿರಣ್ ಜಿ.ಗೌರಯ್ಯ, ತಾಪಂ ಇಒ ಶ್ವೇತಾ ಎನ್., ಡಿಎಸ್ಪಿ ಕೆ.ಶ್ರೀಕಾಂತ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ವಿಜಯ ಎಸ್.ಪೂಜಾರಿ, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ದಲಿತ ಮುಖಂಡರಾದ ಗುಡ್ಡೆಯಂಗಡಿ, ನಾಗರಾಜ ಇದ್ದರು.
ಕುಂದಾಪುರ ಸಮಾಜ ಕಲ್ಯಾಣಿ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ಆರ್.ವರ್ಣೇಕರ್ ಸ್ವಾಗತಿಸಿದರು. ಹಾಸ್ಟೆಲ್ ವಾರ್ಡನ್ ಉಷಾರಾಣಿ ನಿರೂಪಿಸಿದರು. ಆರ್.ಎನ್.ಶೆಟ್ಟಿ ಪಿಯು ಕಾಲೇಜ್ ಸಂಗೀತ ಶಿಕ್ಷಕ ಪ್ರಕಾಶ್ ಕ್ರಾಂತಿಗೀತೆ ಹಾಡಿದರು. ಸಮಾಜ ಕಲ್ಯಾಣ ಇಲಾಖೆ ಮೆನೇಜರ್ ರಮೇಶ್ ಕುಲಾಲ್ ವಂದಿಸಿದರು.