ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಯಾವುದೇ ಕ್ಷೇತ್ರದದಲ್ಲಿ ಸಾಧಕರಾದರೂ ಜೀವನದಲ್ಲಿ ಕೃತಜ್ಞತಾ ಭಾವವಿರಬೇಕು, ನಮ್ಮ ಉದ್ದೇಶ ಸ್ಪಷ್ಟವಾಗಿದ್ದಾಗ ಮಾತ್ರ ಬುದ್ಧಿಮತ್ತೆಯಿಂದ ಗುರಿ ತಲುಪಲು ಸಾಧ್ಯ ಎಂದು ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಸ್. ಅಬ್ದುಲ್ ನಜ್ಹೀರ್ ಹೇಳಿದರು.
ಪುತ್ತಿಗೆಯ ಕೆ. ವನಜಾಕ್ಷಿ ಶ್ರೀಪತಿ ಭಟ್ ವೇದಿಕೆಯಲ್ಲಿ ನಡೆದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ವಿವಿಗಳ ಕಳೆದ ಮೂರು ವರ್ಷಗಳ ಶೈಕ್ಷಣಿಕ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಶಿಕ್ಷಣ ಮೆದುಳನ್ನು ಪಳಗಿಸಬೇಕೇ ವಿನಃ ಮಾಹಿತಿಯನ್ನು ತುಂಬುವ ಮೆದುಳನ್ನಾಗಿಸಬಾರದು. ವೇಗವಾಗಿ ಬೆಳೆಯುತ್ತಿರುವ ಆಧುನಿಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ವೃತ್ತಿಜೀವನ ಹಾಗೂ ವೈಯಕ್ತಿಕ ಜೀವನವನ್ನು ಸಮಬಲದಲ್ಲಿ ನಿಭಾಯಿಸಬೇಕು. ಪ್ರತಿಯೊಬ್ಬರೂ ವಿವಿಧ ಸಮಯದಲ್ಲಿ ಹಲವು ವಿಚಾರಗಳನ್ನು ಕಲಿಯುತ್ತಲೇ ಇರುತ್ತಾರೆ, ಕಲಿಯುವಿಕೆಯು ನಿರಂತರ ಪ್ರಕ್ರಿಯೆ ಆದ್ದರಿಂದ ಪಡೆದ ಜ್ಞಾನದ ಕೆಲವು ಅಂಶಗಳನ್ನಾದರೂ ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕೆಂದರು.
ತಮ್ಮ ಜೀವನದ ಆದರ್ಶದ ಕುರಿತು ಮಾತನಾಡಿದ ಅವರು, ದೆಹಲಿಯ ತಮ್ಮ ನಿವಾಸದಿಂದ ಸುಪ್ರೀಂ ಕೋರ್ಟ್ ಗೆ ತೆರಳುವ ಸಂದರ್ಭದಲ್ಲಿ ತುಘಲಕ್ ರಸ್ತೆ ಹಾಗೂ ಡಾ. ಎ. ಪಿ.ಜೆ ಅಬ್ದುಲ್ ಕಲಾಂ ರೋಡ್ ಎರಡರ ನಡುವೆ ಕಲಾಂ ರಸ್ತೆಯಲ್ಲಿ ಹಾದು ಹೋಗುವ ಮೂಲಕ ಆ ವ್ಯಕ್ತಿಯ ಆದರ್ಶಗಳನ್ನು ನನ್ನೊಳಗೆ ಅಳವಡಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ ಎಂದರು.
ಸಮಾರಂಭದಲ್ಲಿ 2018-19, 2019-20 ಹಾಗೂ 2020-21ನೇ ಸಾಲಿನ ಮಂಗಳೂರು ಯೂನಿವರ್ಸಿಟಿಯ 3064 ವಿದ್ಯಾರ್ಥಿಗಳಿಗೆ, ರಾಜೀವ್ ಗಾಂಧಿ ಆರೋಗ್ಯ ವಿವಿಯ 1069 ವಿದ್ಯಾರ್ಥಿಗಳು ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ 1131 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 5264 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಆಳ್ವಾಸ್ ಸಂಸ್ಥೆಯು ರಾಜೀವ್ ಗಾಂಧಿ ಯೂನಿವರ್ಸಿಟಿಯಿಂದ 72 ರ‍್ಯಾಂಕ್, ಮಂಗಳೂರು ವಿವಿಯಿಂದ 78 ರ‍್ಯಾಂಕ್, ವಿಶ್ವೇಶ್ವರಯ್ಯ ತಾಂತ್ರಿಕ ಯೂನಿವರ್ಸಿಟಿಯಿಂದ 1 ರ‍್ಯಾಂಕ್ ಪಡೆದುಕೊಂಡಿದೆ.
ರಾಜೀವ್ ಗಾಂಧಿ ಹೆಲ್ತ್ ಯೂನಿವರ್ಸಿಟಿಯ ಮಾಜಿ ಉಪಕುಲಪತಿ ಡಾ. ಚಂದ್ರಶೇಖರ್ ಶೆಟ್ಟಿ, ಕರ್ನಾಟಕ ಜಾನಪದ ವಿವಿಯ ಮಾಜಿ ಉಪಕುಲಪತಿ ಡಾ. ಚಿನ್ನಪ್ಪ ಗೌಡ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿವಿಯ ಮಾಜಿ ಉಲಕುಲಪತಿ ಡಾ. ರಮಾನಂದ ಶೆಟ್ಟಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅದ್ಯಕ್ಷ ಡಾ. ಎಂ. ಮೋಹನ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕಾಲೇಜುಗಳ ಪ್ರಾಚಾರ್ಯರು ಉಪಸ್ಥಿತರಿದ್ದರು. ಡಾ. ವನಿತಾ ಶೆಟ್ಟಿ, ಪ್ರಿಯಾ ಸಿಕ್ವೆರಾ ರ‍್ಯಾಂಕ್ ವಿಜೇತರ ಪಟ್ಟಿ ವಾಚಿಸಿದರು. ರಾಜೇಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.