Kundapra.com ಕುಂದಾಪ್ರ ಡಾಟ್ ಕಾಂ

ಸುರಭಿ ಜೈಸಿರಿ: ಡಾ. ಎಂ. ಮೋಹನ ಆಳ್ವ ಅವರಿಗೆ ಬಿಂದುಶ್ರೀ ಪ್ರಶಸ್ತಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಎ
.27: ಸುರಭಿ ಜೈಸಿರಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಕೊಡಮಾಡುತ್ತಿರುವ ಬಿಂದಶ್ರೀ ಪ್ರಶಸ್ತಿಗೆ ಈ ಭಾರಿ ಸಾಂಸ್ಕೃತಿಕ ಚಿಂತಕ, ಶಿಕ್ಷಣ ಕ್ರಾಂತಿಯ ಹರಿಕಾರ ಡಾ. ಎಂ. ಮೋಹನ ಆಳ್ವ ಆಯ್ಕೆಯಾಗಿದ್ದು, ಮೇ.9ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು ಇಪ್ಪತ್ತೈದು ಸಾವಿರ ರೂ. ನಗದು, ಚಿನ್ನದ ಪದಕ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.

ಈ ಬಗ್ಗೆ ಬುಧವಾರ ಬೈಂದೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸುರಭಿ ಸಂಸ್ಥೆಯ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯ ಎಸ್. ಜನಾರ್ದನ ಮರವಂತೆ ಮಾಹಿತಿ ನೀಡಿದರು.

ಸುರಭಿ ಅಧ್ಯಕ್ಷ ನಾಗರಾಜ ಪಿ ಯಡ್ತರೆ ಮಾತನಾಡಿ ಇಪ್ಪತ್ತೆರಡನೇ ವರ್ಷದ ಸಂಭ್ರಮದಲ್ಲಿರುವ ಬೈಂದೂರಿನ ಕಲಾ ಸಂಸ್ಥೆ ಸುರಭಿ ಆಶ್ರಯದಲ್ಲಿ ಮೇ.7ರಿಂದ ನಾಲ್ಕು ದಿನಗಳ ಕಾಲ ಸುರಭಿ ಜೈಸಿರಿ ಕಾರ್ಯಕ್ರಮ ಹಾಗೂ ಎಂಟನೇ ವರ್ಷದ ಬಿಂದುಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಸಂಜೆ 6ಕ್ಕೆ ಶಾರದಾ ವೇದಿಕೆಯಲ್ಲಿ ಜರುಗಲಿದೆ ಎಂದರು.

ಡಾ. ಎಂ. ಮೋಹನ ಆಳ್ವ:
ದಕ್ಷಿಣ ಕನ್ನಡ ಜಿಲ್ಲೆಯ ಮಿಜಾರುಗುತ್ತು ಮನೆತನದಲ್ಲಿ ಜನಿಸಿದ ಡಾ. ಎಂ. ಮೋಹನ ಆಳ್ವರದ್ದು ಬಹುಮುಖ ಪ್ರತಿಭಾನ್ವಿತ ವ್ಯಕ್ತಿತ್ವ. 70ರ ವಯಸ್ಸಿನಲ್ಲಿಯೂ ಸದಾ ಕ್ರೀಯಾಶೀಲ ನಡೆಯ ಮೂಲಕ ಮಾದರಿಯಾದವರು. ವೃತ್ತಿಯಲ್ಲಿ ವೈದ್ಯರಾದರೂ ಕ್ರೀಡೆ, ಜಾನಪದ, ಶಿಕ್ಷಣ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಅವಿರತವಾಗಿ ತೊಡಗಿಸಿಕೊಂಡು ಸಾಕಷ್ಟು ದಾಖಲೆ ನಿರ್ಮಿಸಿದ ಖ್ಯಾತಿ ಅವರದ್ದು. ಕಲೆ ಸಂಸ್ಕೃತಿಗಾಗಿ ತಮ್ಮ ಬದುಕನ್ನೇ ಮುಡಿಪಾಗಿಸಿದ ಅವರು ಭಾರತೀಯ ಕಲೆ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಮೋಹನ ಆಳ್ವರ ಕನಸಿನಂತೆ ಕಟ್ಟಿ ಬೆಳೆಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ದೇಶದಲ್ಲಿಯೇ ವಿಶಿಷ್ಟವಾಗಿ ಗುರುತಿಸಿಕೊಂಡಿದೆ. ಆಳ್ವಾಸ್ ನುಡಿಸಿರಿ, ವಿರಾಸತ್ ಕಾರ್ಯಕ್ರಮಗಳು ಹಲವು ದಾಖಲೆ, ವೈಶಿಷ್ಟ್ಯತೆಗಳಿಗೆ ಮುನ್ನುಡಿ ಬರೆದಿದೆ.

ಪತ್ರಿಕಾಗೋಷ್ಠಿಯಲ್ಲಿ ಸುರಭಿ ನಿರ್ದೇಶಕ ಸುಧಾಕರ ಪಿ. ಬೈಂದೂರು, ಖಜಾಂಜಿ ಸುರೇಶ್ ಹುದಾರ್ ಉಪಸ್ಥಿತರಿದ್ದರು.

Exit mobile version