Site icon Kundapra.com ಕುಂದಾಪ್ರ ಡಾಟ್ ಕಾಂ

ಶಾಲಾ ಕಾಲೇಜು ಆರಂಭವಾಗುವಷ್ಟರಲ್ಲಿ ಗ್ರಾಮೀಣ ಭಾಗಕ್ಕೆ ಬಸ್ ಬಿಡದಿದ್ದರೆ ಧರಣಿ: ಶಾಸಕ ಬಿ. ಎಂ ಸುಕುಮಾರ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕೆಲವು ದಿನಗಳಲ್ಲಿ ಶಾಲಾ ಕಾಲೇಜುಗಳು ಆರಂಭವಾಗಲಿದ್ದು, ಗ್ರಾಮೀಣ ಭಾಗಕ್ಕೆ ಕೆಎಸ್‌ಆರ್‌ಟಿಸಿ ಬಸ್ ಬಿಟ್ಟಿಲ್ಲ. ಕೆಎಸ್‌ಆರ್‌ಟಿಸಿ ನಡೆಸುವುದು ಲಾಭ ನಷ್ಟದ ದೃಷ್ಟಿಯಿಂದಲ್ಲ. ಶಾಲಾ ಕಾಲೇಜ್ ಆರಂಭಕ್ಕೂ ಮುನ್ನಾ ಎಲ್ಲಾ ಗ್ರಾಮೀಣ ಭಾಗಗಳಿಗೆ ಬಸ್ ಹೋಗಬೇಕು. ಗ್ರಾಮೀಣ ಭಾಗಕ್ಕೆ ಬಸ್ ಬಿಡದಿದ್ದರೆ ವಿದ್ಯಾರ್ಥಿಗಳ ಜೊತೆಗೆ ಡಿಪೋ ಮುಂದೆ ಧರಣಿ ಕೂರುವುದಾಗಿ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು.

ಅವರು ಕುಂದಾಪುರ ತಾಲೂಕು ಪಂಚಾಯಿತಿ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆದ ಕುಂದಾಪುರ ಹಾಗೂ ಬೈಂದೂರು ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ ಮಳೆಗಾಲ ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಆದಷ್ಟು ಬೇಗೆ ಎಲ್ಲಾ ಕಾಮಗಾರಿ ಮುಗಿಸಬೇಕು. ರಸ್ತೆಗಳ ಅಭಿವೃದ್ಧಿಗಾಗಿ ಬೈಂದೂರು ಕ್ಷೇತ್ರಕ್ಕೆ ಸರ್ಕಾರ 600 ಕೋಟಿ ಕೊಟ್ಟಿದೆ. ಬಿಲೋ ಟೆಂಡರ್ ಹಾಕಿ ಗುತ್ತಿಗೆ ಪಡೆದು ಕಳಪೆಯಾಗಿ ಕಾಮಗಾರಿ ನಿರ್ವಹಿಸಿದರೆ ಅದಕ್ಕೆ ಅಧಿಕಾರಿಗಳು ಹೊಣೆ. ಯಾವ ಕಾಮಗಾರಿ ಕಳಪೆಯಾದರೂ ಸಹಿಸೋದಿಲ್ಲ ಎಂದು ಎಚ್ಚರಿಸಿದ್ದಾರೆ.

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಳ್ಳಿಹಳ್ಳಿಯಲ್ಲಿ ಎಣ್ಣೆ ಸಿಗುತ್ತದೆ. ಹಿಂದೆ ಗಂಡ ಕುಡಿದುಬಂದು ಹೆಂಡತಿಗೆ ಹೊಡೆಯುತ್ತಿದ್ದು, ಈಗ ಹೆಂಡತಿ ಗಂಡನಿಗೆ ಬಡಿಯುವ ಪರಿಸ್ಥಿತಿ ಬಂದಿದೆ. ಹಳ್ಳಿಯ ಸಂಸ್ಕೃತಿ ಹಾಳಾಗುತ್ತಿದ್ದು, ಅಬಕಾರಿ ಇಲಾಖೆ ಗೂಡಂಗಡಿಗಳಲ್ಲಿ ಬೀರು ಬ್ರಾಂಡಿ ಮಾರಾಟ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.

ಬೈಂದೂರು ಶಾಲೆ ಶಿಕ್ಷಕರಿಗೆ ಎರಡು ತಿಂಗಳಿಂದ ಸಂಬಳವಿಲ್ಲ. ಸಂಬಳ ಆಗದಿರುವುದಕ್ಕೆ ಕಾರಣ ಏನು ಎಂಬ ಶಾಸಕರ ಪ್ರಶ್ನೆಗೆ ಬಿಒ ಅರುಣ ಕುಮಾರ್ ಶೆಟ್ಟಿ ಉತ್ತರಿಸಿ, ಕುಂದಾಪುರ ಸರ್ಕಾರಿ ಶಾಲೆ ಎಲ್ಲಾ ಶಿಕ್ಷಕರಿಗೂ ಸಂಬಳ ಆಗಿದ್ದು, ಬೈಂದೂರು ತಾಲೂಕು ಪಂಚಾಯಿತಿಯಾಗಿ ವಿಂಗಡಿಸಿದ್ದರಿಂದ ಶಿಕ್ಷರಿಗೆ ಸಂಬಳ ನೀಡುವ ವಿಶೇಷ ಅಧಿಕಾರಿ ತಾಪಂ ಇಒಗೆ ನೀಡಬೇಕಿದೆ ಎಂದರು. ಸಚಿವರ ಜೊತೆ ಮಾತನಾಡಿ ಇಒ ವಿಶೇಷ ಅಧಿಕಾರ ನೀಡುವಂತೆ ಒತ್ತಡ ಹಾಕಲಾಗುತ್ತದೆ ಎಂದು ಹೇಳಿದರು.

ಕಾರ್ಮಿಕ ಇಲಾಖೆ ಕರೋನಾ ಸಮಯದಲ್ಲಿ ಕೋಟ್ಯಾಂತರ ರೂ ಕಿಟ್ ನೀಡಲು ಅನುದಾನ ನೀಡಿದ್ದರೆ ಕಾರ್ಮಿಕ ಇಲಾಖೆ ಅಧಿಕಾರಿಗಳು 200 ರೂ.ಕಿಟ್‌ಗೆ 500 ಕೊಟ್ಟು ಗೋಲ್ಮಾಲ್ ಮಾಡಿದ್ದಾರೆ, ಕೆಡಿಪಿ ಸಭೆಗೆ ಕಾರ್ಮಿಕ ಅಧಿಕಾರಿಗಳು ಹಾಜರಾಗದೆ ಉದ್ಧಟತನ ತೋರಿಸುತ್ತಿದ್ದಾರೆ ಎಂದು ಗರಮ್ ಆದರು. ರಸ್ತೆ ಬದಿ ಇರುವ ಅಪಾಯಕಾರಿ ಮರ ತೆರವು ಮಾಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಸರ್ಕಾರ ಎಲ್ಲರ ಮನೆಗೂ ಬೆಳಕು ಕೊಡಬೇಕು ಎಂದು ಬೆಳಕು ಯೋಜನೆ ಜಾರಿಗೆ ತಂದಿದ್ದು, ಸಬೂಬು ಹೇಳದೆ ಬೆಳಕು ಯೋಜನೆಯಲ್ಲಿ ಅರ್ಜಿ ಹಾಕಿದವರಿಗೆ ವಿದ್ಯುತ್ ನೀಡಬೇಕು. ಕೊಲ್ಲೂರು ಪ್ರವಾಸಿ ಮಂದಿರ ಹಾಗೂ ರಸ್ತೆ ಕಾಮಾರಿಗೆ ಒಟ್ಟು 21 ಕೋಟಿ ಬಿಡುಗಡೆ ಮಾಡಿದ್ದು, ಶೀಗ್ರ ಕಾಮಗಾರಿ ಪೂರೈಸಬೇಕು. ಸೌಕೂರು ಏತನೀರಾವರಿ ಯೋಜನೆಯಲ್ಲಿ ತಲ್ಲೂರು ಗ್ರಾಮ ಸೇರಿಸುವಂತೆ ಸೂಚಿಸಿದರು.

ಕುಂದಾಪುರ ತಾಪಂ ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಎನ್. ಕುಂದಾಪುರ ತಹಸೀಲ್ದಾರ್ ಕಿರಣ್ ಜಿ. ಗೌರಯ್ಯ ಇದ್ದರು.

Exit mobile version