Kundapra.com ಕುಂದಾಪ್ರ ಡಾಟ್ ಕಾಂ

ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವವರಿಗೆ ಪ್ರೋತ್ಸಾಹ ಅಗತ್ಯ: ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಸಂಘ ಸಂಸ್ಥೆಗಳ ಮೂಲಕ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ಬಹುಮುಖ್ಯ. ತಾವು ಬೆಳೆಯುವುದರೊಂದಿಗೆ ತಮ್ಮೊಂದಿಗೆ ಇರುವವರನ್ನು ಗುರುತಿಸಿ ಬೆನ್ನು ತಟ್ಟುವ ಕೆಲಸ ಮಾಡಿದರೆ, ಅವರೂ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.

ಸುರಭಿ ರಿ. ಬೈಂದೂರು ಆಶ್ರಯದಲ್ಲಿ ಇಲ್ಲಿನ ಶಾರದಾ ವೇದಿಕೆಯಲ್ಲಿ ಆಯೋಜಿಸಲಾದ ನಾಲ್ಕು ದಿನಗಳ ಸುರಭಿ ಜೈಸಿರಿ 2ನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಸುರಭಿ ಸಂಸ್ಥೆ ಎರಡು ದಶಕಗಳಿಂದ ಹತ್ತಾರು ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಿ ಮನೆಮಾತಾಗಿದೆ. ಬೈಂದೂರಿನ ಕೀರ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನಾರ್ಹ ಎಂದರು.

ಡಿಜಿಟಲ್ ಆರ್ಟ್ ಕಲಾವಿದ ಕಿಶನ್ ಪ್ರಭು ಅವರನ್ನು ಸನ್ಮಾನಿಸಲಾಯಿತು. ಯಕ್ಷಗಾನ ಗುರುಗಳಾದ ಪ್ರಶಾಂತ ಮಯ್ಯ ದಾರಿಮಕ್ಕಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.

ಬೈಂದೂರು ಬಂಟರ ಸಂಘದ ಅಧ್ಯಕ್ಷರಾದ ಜಗನ್ನಾಥ ಶೆಟ್ಟಿ, ಬೈಂದೂರು ಸೇವಾ ಸಂಗಮ ಶಿಶುಮಂದಿರದ ಅಧ್ಯಕ್ಷರಾದ ಮಂಜುನಾಥ ಶೆಟ್ಟಿ, ಪಡುವರಿ ಗ್ರಾಪಂ ಮಾಜಿ ಉಪಾಧ್ಯಕ್ಷರಾದ ಸದಾಶಿವ ಡಿ ಪಡುವರಿ, ಸುರಭಿ ಅಧ್ಯಕ್ಷರಾದ ನಾಗರಾಜ ಪಿ. ಯಡ್ತರೆ, ಕಾರ್ಯದರ್ಶಿ ಭಾಸ್ಕರ ಬಾಡ ಉಪಸ್ಥಿತರಿದ್ದರು.

ಸುರಭಿಯ ಸೌಮ್ಯ ಶೆಟ್ಟಿ ಸ್ವಾಗತಿಸಿ, ರವಿರಾಜ ಡಿ. ಮಯ್ಯಾಡಿ ವಂದಿಸಿದರು. ವಿನೋದಾ ಸನ್ಮಾನಿತರ ಪರಿಚಯಿಸಿದರು. ರಾಮಕೃಷ್ಣ ದೇವಾಡಿಗ ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು.

Exit mobile version