Kundapra.com ಕುಂದಾಪ್ರ ಡಾಟ್ ಕಾಂ

ಮಾತೃಭಾಷೆ ಪ್ರತಿಯೊಬ್ಬರ ಅಸ್ಮಿತೆ: ಮಾಜಿ ರಾಜ್ಯಪಾಲ ಪಿ. ಬಿ ಆಚಾರ್ಯ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಇಂಗ್ಲೀಷ ಕೇವಲ ಭಾಷೆಯಗಿದೆ. ಆದರೆ ಪ್ರತಿಯೊಬ್ಬರ ಮಾತೃಭಾಷೆಯೇ ಅವರ ಅಸ್ಮಿತೆಯಾಗಿರುತ್ತದೆ ಎಂದು ನಾಗಾಲ್ಯಾಂಡಿನ ಮಾಜಿ ರಾಜ್ಯಪಾಲ ಪಿ. ಬಿ ಆಚಾರ್ಯ ಹೇಳಿದರು.

ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್ ವತಿಯಿಂದ ನಡೆದ ವಿಶೇ? ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ನೀಡುವುದು ಒಳಿತು ಇದರಿಂದ ಮಕ್ಕಳು ಸಂಸ್ಕಾರವಂತರಾಗಲು ಅವಕಾಶವಿದೆ. ಶಿಕ್ಷಣದ ಮುಖ್ಯ ಉದ್ದೇಶ ಪದವಿ ಅಥವಾ ಅಂಕ ಗಳಿಸುವುದಲ್ಲ, ಹೊರತಾಗಿ ಸಮಾಜಮುಖಿ ಚಿಂತನೆಗಳ ಮೂಲಕ ದೇಶವನ್ನು ನಿರ್ಮಾಣ ಮಾಡುವುದು. ಭಾರತವು ಎಲ್ಲಾ ಆಯಾಮಗಳಲ್ಲಿ ಸಮೃದ್ಧ ದೇಶ. ಭಾರತೀಯರಾಗಿ ಜನಿಸಿದ್ದಕ್ಕೆ ನಾವೆಲ್ಲ ಹೆಮ್ಮೆಪಡಬೇಕು ಎಂದು ಹೇಳಿದರು.

ಈಶಾನ್ಯ ರಾಜ್ಯಗಳ ನಡುವೆ ಸಾಂಸ್ಕೃತಿಕ ಏಕೀಕರಣವನ್ನು ಸಾಧಿಸಲು ಆ ಭಾಗದ ಜನರೊಂದಿಗೆ ಆಗಾಗ್ಗೆ ಸಂವಹನ ನಡೆಸಬೇಕು. ಅಲ್ಲಿನ ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಲಭಿಸದೆ, ಆಧುನಿಕ ಮಾರುಕಟ್ಟೆ ವ್ಯವಸ್ಥೆಯಲ್ಲಿ ಮೋಸ ಹೋಗುವಂತಾಗಿದೆ. ವಿದ್ಯಾವಂತ ಯುವಕರು ಅಂತಹ ಸಮುದಾಯಗಳ ಸದಸ್ಯರಿಗೆ ಸೂಕ್ತ ಮಾರ್ಗದರ್ಶನ ನೀಡಲು ಮುಂದೆ ಬರಬೇಕು ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೋಸ್ಟಲ್ ಗಾರ್ಡನ ಡಿಐಜಿ ಎಸ್.ಬಿ. ವೆಂಕಟೇಶ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳೆ ದೇಶದ ಮುಂದಿನ ಸತ್ಪ್ರಜೆಗಳು ಹಾಗಾಗಿ ವಿದ್ಯಾರ್ಥಿಗಳು ದೇಶದ ಕುರಿತು ಸರಿಯಾದ ದೃಷ್ಟಿಕೋನವನ್ನು ಹೊಂದುವುದು ಒಳಿತು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ, ಮಾತಿನ ಮೂಲಕ ಸೌಧ ಕಟ್ಟುವವರು ಎಂದೂ ನಮ್ಮ ಮಾರ್ಗದರ್ಶಕರಲ್ಲ. ತಮ್ಮ ಕ್ರಿಯೆಗಳಿಂದ ಇನ್ನೊಬ್ಬರಿಗೆ ಸ್ಪೂರ್ತಿಯಾಗಬಲ್ಲವರು ಮಾತ್ರ ಗುರುಗಳೆಣಿಸಬಲ್ಲರು. ಪಿ ಬಿ ಆಚಾರ್ಯರವರು ನಿಜಾರ್ಥದಲ್ಲಿ ನಮ್ಮೆಲ್ಲರ ಗುರುಗಳು ಎಂದು ತಿಳಿಸಿದರು.

ಈಶಾನ್ಯ ರಾಜ್ಯಗಳ ಪರಿಸ್ಥಿತಿಯನ್ನು ತಳಮಟ್ಟದಲ್ಲಿ ಅವಲೋಕನ ಮಾಡುವ ಹಿನ್ನಲೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಕ್ಷೇತ್ರ ಬೇಟಿಯ ನೆಲೆಯಲ್ಲಿ ಈಶಾನ್ಯ ರಾಜ್ಯಗಳ ಬುಡಕಟ್ಟು ಜನಾಂಗಗದ ಕಲೆ, ಸಂಸ್ಕೃತಿ, ಆಚಾರ , ವಿಚಾರ, ಸಮಸ್ಯೆಗಳ ಅಧ್ಯಯನಕ್ಕೆ ಕಳುಹಿಸುವುದಾಗಿ ತಿಳಿಸಿದರು.

ಋಗ್ವೇದ, ಸಾಮ ವೇದಗಳಿಗೆ ಸಂಬಂದಿಸಿದ ೧೬ ಪುಸ್ತಕಗಳನ್ನು ಆಳ್ವಾಸ್ ಲೈಬ್ರೇರಿಗೆ ಕೊಡುಗೆಯಾಗಿ ಮಾಜಿ ರಾಜ್ಯಪಾಲರು ನೀಡಿದರು. ಕಾರ್ಯಕ್ರಮದಲ್ಲಿ ಆಚಾರ್ಯ ದಂಪತಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕವಿತಾ ಆಚಾರ್ಯ, ಮಹಾಲಕ್ಷ್ಮಿ ವೆಂಕಟೇಶ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಐಶ್ವರ್ಯ ಪ್ರಾರ್ಥಿಸಿ, ಲಿಖಿತಾ ದೇವಿ ನಿರೂಪಿಸಿದರು.

Exit mobile version