Kundapra.com ಕುಂದಾಪ್ರ ಡಾಟ್ ಕಾಂ

ಮಹನೀಯರ ತತ್ವ, ಆದರ್ಶಗಳನ್ನು ಯುವ ಪೀಳಿಗೆ ಮೈಗೂಡಿಸಿಕೊಳ್ಳಿ: ಅಪರ ಜಿಲ್ಲಾಧಿಕಾರಿ ವೀಣಾ ಬಿ. ಎನ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ,ಮೇ12:
ಸಾಧಕರು, ದಾರ್ಶನಿಕರ ತತ್ವ, ಆದರ್ಶಗಳನ್ನು ಇಂದಿನ ಯುವ ಪೀಳಿಗೆ ಮೈಗೂಡಿಸಿಕೊಳ್ಳುವುದರೊಂದಿಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ತಿಳಿಸಿದರು.

ಇಂದು ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ, ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆದ ಭಗೀರಥ ಮಹರ್ಷಿ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ, ಮಹನೀಯರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದರು.

ಹೇಮರೆಡ್ಡಿ ಮಲ್ಲಮ್ಮ ಅಚಲವಾದ ವಿಶ್ವಾಸ, ತಾಳ್ಮೆಯಿಂದ ತಮ್ಮ ಕುಟುಂಬದವರ ಮನಸ್ಸನ್ನು ಗೆಲ್ಲುವುದರ ಜೊತೆಗೆ ಅವರ ಮನ ಪರಿವರ್ತನೆ ಮಾಡುವುದರೊಂದಿಗೆ ಸಮಾಜದಲ್ಲಿ ಬದಲಾವಣೆಯನ್ನು ತರುವುದರ ಮೂಲಕ ಸಮಾಜ ಸುಧಾರಣೆಯನ್ನು ಮಾಡಿದರು.

ತನ್ನ ಭಕ್ತಿ ಕಾಯಕದಿಂದ ಮನೆ ಮಾತಾಗಿದ್ದರು. ಕೌಟುಂಬಿಕ ಕಷ್ಟಗಳನ್ನು ಮೆಟ್ಟಿನಿಂತು ಆದರ್ಶ ಮೌಲ್ಯಗಳನ್ನು ಬದುಕಿನಲ್ಲಿ ರೂಢಿಸಿಕೊಂಡು, ಸಾಮಾಜಿಕ ಹಾಗೂ ಧಾರ್ಮಿಕ ಚಿಂತನೆಯಲ್ಲಿ ಸಾಧನೆಗೈದ ಶಿವಶರಣೆಯೇ ಹೇಮರೆಡ್ಡಿ ಮಲ್ಲಮ್ಮ ನಮ್ಮೆಲ್ಲರಿಗೆ ಮಾದರಿ ಎಂದರು.

ಭಗೀರಥ ಮಹರ್ಷಿಯು ತನ್ನ ಸತತ ಪ್ರಯತ್ನದಿಂದ ಶಿವನ ಜಟೆಯಲ್ಲಿದ್ದ ಗಂಗೆಯನ್ನು ಧರೆಗೆ ತಂದನು. ಭಗೀರಥ ಪ್ರಯತ್ನ ಎಂಬ ನುಡಿಗಟ್ಟು ಸ್ಪೂರ್ತಿಯ ಸೆಲೆಯಾಗಿದೆ. ಗುರುಭಕ್ತಿ, ಶ್ರದ್ಧೆ, ಏಕಾಗ್ರತೆ ಹಾಗೂ ತಪೋನಿಷ್ಠೆಗೆ ಭಗೀರಥ ಮಹರ್ಷಿ ಆದರ್ಶವಾಗಿದ್ದು, ಅವರ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕು ಎಂದರು.

ಇಂತಹ ಮಹನೀಯರ ದಿನಾಚರಣೆಗಳನ್ನು ಸರಕಾರ ಹೆಚ್ಚಿನ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ನಡೆಸಬೇಕು, ಯುವಜನತೆಗೆ ಮಹಾನ್ ವ್ಯಕ್ತಿಗಳ ಜೀವನದ ಬಗ್ಗೆ ತಿಳಿಸಬೇಕು ಎಂದರು.

ಚಿತ್ರಕಲಾ ಶಾಲೆಯ ಪ್ರಾಂಶುಪಾಲ ನಿರಂಜನ್ ಯು.ಸಿ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಹಾಗೂ ಭಗೀರಥ ಮಹರ್ಷಿಯ ಕುರಿತು ಉಪನ್ಯಾಸ ನೀಡಿದರು.

ಸಮಾಜದ ಮುಖಂಡ ಸಿದ್ಧಬಸಯ್ಯ ಸ್ವಾಮಿ ಮಾತನಾಡಿ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮರ ಜೀವನಚರಿತ್ರೆಯ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಉಡುಪಿ ತಹಶೀಲ್ದಾರ್ ಅರ್ಚನಾ ಭಟ್, ನೆಹರೂ ಯುವ ಕೇಂದ್ರದ ಸಮನ್ವಯ ಅಧಿಕಾರಿ ವಿಲ್ಫೆçಡ್ ಡಿ ಸೋಜಾ, ವಾರ್ತಾಧಿಕಾರಿ ಮಂಜುನಾಥ್ ಬಿ, ಸಮುದಾಯದ ಮುಖಂಡರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

Exit mobile version