Kundapra.com ಕುಂದಾಪ್ರ ಡಾಟ್ ಕಾಂ

ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್: ಉಚಿತವಾಗಿ ನಿರ್ಮಿಸಿದ 2 ನೂತನ ಗೃಹಗಳ ಹಸ್ತಾಂತರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ರಾಮಕ್ಷತ್ರಿಯ ಸಮಾಜದಲ್ಲಿ ಹಂತ ಹಂತವಾಗಿ ಪ್ರಗತಿ ಸಾಧಿಸುತ್ತಿದ್ದು, ಇದಕ್ಕೆ ಪೂರಕವಾಗಿ ದಾನಿಗಳು ಅಗತ್ಯವುಳ್ಳವರಿಗೆ ಮನೆ, ಶೈಕ್ಷಣಿಕ ನೆರವು ಮೊದಲಾದ ಸೇವಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದು ಶ್ಲಾಘನಾರ್ಹ ಎಂದು ಬೈಂದೂರು ಮಾಜಿ ಶಾಸಕರಾದ ಕೆ. ಲಕ್ಷ್ಮೀನಾರಾಯಣ ಹೇಳಿದರು.

ಅವರು ಸೋಮವಾರ ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್ ವತಿಯಿಂದ ಬಿಜೂರು ಭೂಮಿ ಶಂಕರನ ಮನೆ ಪದ್ಮಾವತಿ ಗೋಪಾಲ ಹಾಗೂ ಬೈಂದೂರು ತೊಡಳ್ಳಿ ಗಣಪತಿ ಶೇರುಗಾರ್ ಅವರಿಗೆ ಶ್ರೀ ರಾಮ ಗೃಹ ನಿರ್ಮಾಣ ಯೋಜನೆಯಡಿ ಉಚಿತವಾಗಿ ನಿರ್ಮಿಸಿಕೊಡಲಾದ ನೂತನ ಗೃಹಗಳ ಉದ್ಘಾಟನೆ ಬಳಿಕ ನಡೆದ ಟ್ರಸ್ಟಿನ ವಿಶೇಷ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಟ್ರಸ್ಟಿಗೆ ದಿನದಿಂದ ದಿನಕ್ಕೆ ನೆರವು ಯಾಚನೆ ಪ್ರಮಾಣ ಹೆಚ್ಚುತ್ತಿದೆ ಹಾಗೂ ಎಲ್ಲಾ ವಸ್ತುಗಳ ಬೆಲೆಯು ಹೆಚ್ಚಿದೆ. ಹಾಗಾಗಿ ಟ್ರಸ್ಟಿನಲ್ಲಿರುವ ಮೂಲ ದೇಣಿಗೆ ಹಾಗೂ ದಾನಿಗಳು ಟ್ರಸ್ಟಿಗೆ ನೀಡುವ ನೆರವಿನ ಪ್ರಮಾಣವೂ ಹೆಚ್ಚಬೇಕಿದೆ. ತೀರಾ ಅಗತ್ಯವುಳ್ಳ ಅರ್ಹರನ್ನು ಗುರುತಿಸಿ ನೆರವು ನೀಡುವ ಕಾರ್ಯ ಮುಂದುವರಿಯಲಿ ಎಂದು ಶುಭಹಾರೈಸಿದರು.

ಬೆಂಗಳೂರು ರಾಮರಾಜ ಕ್ಷತ್ರಿಯ ಸಮಾಜದ ಮಾಜಿ ಅಧ್ಯಕ್ಷ, ಸಿ.ಎಸ್.ಆರ್ ಯೋಜನೆಯಡಿಯಲ್ಲಿ ಎರಡೂ ಮನೆಗಳ ನಿರ್ಮಾಣಕ್ಕೆ ಆರು ಲಕ್ಷ ರೂ. ದೇಣಿಗೆ ನೀಡಿದ ಡಿ.ಕೆ. ಮಂಜುನಾಥ ಅವರು ನೂತನ ಮನೆಗಳನ್ನು ಉದ್ಘಾಟಿಸಿ ಮಾತನಾಡಿ, ಬದುಕಿನಲ್ಲಿ ನಾವು ಗಳಿಸಿದ ಹಣ-ಸಂಪತ್ತು ಕರಗಿ ಹೊಗಬಹುದು ಆದರೆ ಮಾಡಿದ ದಾನ ಧರ್ಮ ಪುಣ್ಯ ಕಾರ್ಯಗಳು ಸದಾ ಹಸಿರಾಗಿ ಉಳಿಯುತ್ತದೆ. ಸಾಧ್ಯವಾದಷ್ಟು ಸಮಾಜಕ್ಕೆ ಸೇವೆ ಮಾಡುವ ಕಾರ್ಯಕ್ಕೆ ಎಲ್ಲರೂ ಜೊತೆಗೂಡಬೇಕು. ಸಮಾಜದಿಂದ ಪ್ರಯೋಜನ ಪಡೆದವರು ಸಮಾಜಕ್ಕೆ ಮತ್ತಷ್ಟು ಉತ್ತಮ ಕಾರ್ಯ ಮಾಡುವಂತಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಮ್ಯಾನೇಜಿಂಗ್ ಟ್ರಸ್ಟೀ ಬಿ. ರಾಮಕೃಷ್ಣ ಬಿಜೂರು ಟ್ರಸ್ಟ್ ಕಾರ್ಯವೈಖರಿ ಹಾಗೂ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದರು. ವಿಶ್ವ ರಾಮಕ್ಷತ್ರಿಯ ಮಹಾಸಂಘದ ಅಧ್ಯಕ್ಷರು ಹಾಗೂ ಟ್ರಸ್ಟೀ ಶಶಿಧರ ನಾಯ್ಕ್ ಚೆನ್ನಗಿರಿ, ಟ್ರಸ್ಟೀಗಳಾದ ಜಯಾನಂದ ಹೋಬಳಿದಾರ್, ಚಂದ್ರಶೇಖರ ಕಲ್ಪತರು, ಅಶೋಕ್ ಬಾಡ, ಗೋಪಾಲಕೃಷ್ಣ ಕಲ್ಮಕ್ಕಿ, ಕೆ.ಟಿ. ವೆಂಕಟೇಶ, ಕೃಷ್ಣಯ್ಯ ಮದ್ದೋಡಿ, ಪದ್ಮನಾಭ ಕೊತ್ವಾಲ್, ಶ್ರೀಧರ ಪಿ. ಪಡುವರಿ, ವೆಂಕಟರಮಣ ಬಿಜೂರು ಮೊದಲಾದವರು ಉಪಸ್ಥಿತರಿದ್ದರು.

ಮುಂಬೈ ರಾಮಕ್ಷತ್ರಿಯ ಸಂಘದ ಅಧ್ಯಕ್ಷರಾದ ಗಣಪತಿ ಬೆತ್ತಯ್ಯನಮನೆ, ಬೆಂಗಳೂರು ಕದಂಬ ಗ್ರೂಪ್ನ ರಾಘವೇಂದ್ರ ರಾವ್, ಕೃಷ್ಣಮೂರ್ತಿ, ರಕ್ಷಾ ಚಾರಿಟೇಬಲ್ ಟ್ರಸ್ಟಿನ ಟ್ರಸ್ಟೀ ನಾಗರಾಜ ಕಾಮಧೇನು, ರಾಮಕ್ಷತ್ರಿಯ ಮಾಸಪತ್ರಿಕೆ ಸಂಪಾದಕ ಬಿ.ಎಂ. ನಾಥ್ ಬೈಂದೂರು, ಬಾಲಯ್ಯ ಶೇರುಗಾರ, ರತ್ನಾಕರ ಹೋಬಳಿದಾರ್ ಮೊದಲಾದವರು ಉಪಸ್ಥಿತರಿದ್ದರು.

ಟ್ರಸ್ಟ್ ಸಂಚಾಲಕ ಆನಂದ ಮದ್ದೋಡಿ ಕಾರ್ಯಕ್ರಮ ಪ್ರಸ್ತಾವನೆಗೈದು, ನಿರೂಪಿಸಿದರು. ಸಂಚಾಲಕ ಕೇಶವ ಬಿಜೂರು ವಂದಿಸಿದರು. ವೆಂಕಟರಮಣ ಮಯ್ಯಾಡಿ, ಚೇತನಾ ವೆಂಕಟರಮಣ ಬಿಜೂರು ಸಹಕರಿಸಿದರು.

Exit mobile version