Kundapra.com ಕುಂದಾಪ್ರ ಡಾಟ್ ಕಾಂ

ಮೇ.21ರಂದು ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ದೇವಳ ರಾಜಗೋಪುರ ಸಮರ್ಪಣೆ: ಯು.ಬಿ. ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ತಾಲೂಕಿನ ಕಾರಣಿಕ ಕ್ಷೇತ್ರ ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ನೂತನ ರಾಜಗೋಪುರ ಸಮರ್ಪಣಾ ಹಾಗೂ ಉದ್ಘಾಟನಾ ಸಮಾರಂಭ ಮೇ.21ರ ಶನಿವಾರ ಬೆಳಿಗ್ಗೆ 11 ಗಂಟೆಗೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಠಾರದಲ್ಲಿ ಜರುಗಲಿದೆ ಎಂದು ಯು.ಬಿ.ಎಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಯು.ಬಿ. ಶೆಟ್ಟಿ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಶಾಲಾ ಆವರಣದಲ್ಲಿ ಜರುಗಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಕಳೆದ ಎಂಟು ವರ್ಷಗಳ ಹಿಂದೆ ತಾಯಿ ದುರ್ಗಾಪರಮೇಶ್ವರಿಗೆ ರಾಜಗೋಪುರ ನಿರ್ಮಾಣ ಮಾಡಬೇಕು ಎಂಬ ಕನಸು ಕಂಡಿದ್ದೆ. ಮೂರು ವರ್ಷದ ಹಿಂದೆ ಸಂಕಲ್ಪ ಮಾಡಿ ನಿರ್ಮಾಣ ಕಾರ್ಯ ಆರಂಭಿಸಲಾಗಿತ್ತು. ಇದೀಗ ಕಾಮಗಾರಿ ಪೂರ್ಣಗೊಂಡಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ರಾಜಶ್ರೀ ಡಾ. ಡಿ. ವಿರೇಂದ್ರ ಹೆಗ್ಗಡೆ ಅವರು ರಾಜಗೋಪುರವನ್ನು ಉದ್ಘಾಟಿಸಲಿದ್ದಾರೆ ಎಂದರು.

ಧಾರ್ಮಿಕ ಸಭಾ ಕಾರ್ಯಕ್ರಮ:
ಧರ್ಮಸ್ಥಳದ ಧರ್ಮಾಧಿಕಾರಿ ರಾಜಶ್ರೀ ಡಾ. ಡಿ. ವಿರೇಂದ್ರ ಹೆಗ್ಗಡೆ ಅವರು ರಾಜಗೋಪುರವನ್ನು ಉದ್ಘಾಟಿಸಲಿದ್ದಾರೆ. ಸಮಾರಂಭವನ್ನು ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದ ಬಿ.ವೈ. ರಾಘವೇಂದ್ರ, ಬಸ್ರೂರು ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಬಸ್ರೂರು ಅಪ್ಪಣ್ಣ ಹೆಗ್ಡೆ, ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಉಪ್ಪುಂದ ಗ್ರಾಮ ಪಂಚಾಯತ್ ಅಧ್ಯಕ್ಷ ಲಕ್ಷ್ಮೀ ಖಾರ್ವಿ, ಬೈಂದೂರು ತಹಶೀಲ್ದಾರ್ ಹಾಗೂ ದೇವಳದ ಆಡಳಿತಾಧಿಕಾರಿ ಶೋಭಾಲಕ್ಷ್ಮೀ ಎಚ್. ಎಸ್. ಮೊದಲಾದವರು ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.

ಮೇ.18ರಿಂದ ಧಾರ್ಮಿಕ ಕಾರ್ಯಕ್ರಮ:
ಮೇ.18ರಿಂದ ಪ್ರಧಾನ ಅರ್ಚಕರಾದ ಪ್ರಕಾಶ ಉಡುಪ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ಮೇ.19ರಂದು ಗೋಪುರ ಸಂಬಂಧಿ ವಿವಿಧ ಪೂಜಾ ಕಾರ್ಯಗಳು, ಮೇ.20ರಂದು ಕಲಶ ಸ್ಥಾಪನೆ, ಶತಚಂಡಿಕಾ ಯಾಗ, ಶ್ರೀದೇವಿಗೆ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ಜರುಗಲಿದೆ. ಮೇ.21ರಂದು ರಾಜಗೋಪುರ ಲೋಕಾರ್ಪಣೆ, ಧಾರ್ಮಿಕ ಸಭಾ ಕಾರ್ಯಕ್ರಮ, ಹಾಗೂ ಅಂದು ಮಹಾ ಅನ್ನಸಂತರ್ಪಣೆ ಜರುಗಲಿದೆ.

ಭಕ್ತಿ ಗಾನ ವೈಭವ:
ಮೇ.21ರ ಮಧ್ಯಾಹ್ನ ಅಂತರಾಷ್ಟ್ರೀಯ ಖ್ಯಾತಿಯ ಗಾಯಕಿ ನಂದಿನಿ ರಾವ್ ಗುಜರ್ ಪುಣೆ ಅವರಿಂದ ಭಕ್ತಿ ಗಾನ ವೈಭವ ಕಾರ್ಯಕ್ರಮ ಜರುಗಲಿದೆ.

ರಾಜಗೋಪುರ ಸಮರ್ಪಣಾ ಕಾರ್ಯದಲ್ಲಿ ಉಪ್ಪುಂದ ದುರ್ಗಾಪರಮೇಶ್ವರೀ ಭಕ್ತವರ್ಗ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದು, ವಿಶೇಷವಾಗಿ ಮೀನುಗಾರರು, ವಿವಿಧ ಸಂಘಸಂಸ್ಥೆಗಳು ಸ್ವಯಂಸೇವೆಯಲ್ಲಿ ತೊಡಗಿಕೊಲಿದ್ದಾರೆ. ಬಸ್ರೂರು ಅಪ್ಪಣ್ಣ ಹೆಗ್ಡೆಯವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಬಸ್ರೂರು ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಬಸ್ರೂರು ಅಪ್ಪಣ್ಣ ಹೆಗ್ಡೆ, ಯು.ಬಿ.ಎಸ್. ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಯಶಶ್ರೀ ಶೆಟ್ಟಿ, ಕಾನೂನು ಸಲಹೆಗಾರ ರಂಜಿತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಇದನ್ನೂ ಓದಿ:
► ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ರಾಜಗೋಪುರ ನಿರ್ಮಾಣಕ್ಕೆ ಶಂಕುಸ್ಥಾಪನೆ – https://kundapraa.com/?p=35146 .
► ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ: ಪ್ರಗತಿಯಲ್ಲಿ ರಾಜಗೋಪುರ ನಿರ್ಮಾಣ ಕಾಮಗಾರಿ – https://kundapraa.com/?p=38713 .

Exit mobile version