Kundapra.com ಕುಂದಾಪ್ರ ಡಾಟ್ ಕಾಂ

ಪರಿಶಿಷ್ಠ ವರ್ಗ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಆರ್ಥಿಕವಾಗಿ ಹಿಂದುಳಿದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಹಲವಾರು ಶೈಕ್ಷಣಿಕ ಯೋಜನೆಗಳ ಮೂಲಕ ಅವಕಾಶ ಮಡಿಕೊಟ್ಟಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಹೇಳಿದರು.

ಉಡುಪಿ ಜಿಲ್ಲಾಡಳಿತ, ಜಿಪಂ, ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಇವರ ಆಶ್ರಯದಲ್ಲಿ ಬೈಂದೂರಿನಲ್ಲಿ ಸುಮಾರು 4.25 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಪರಿಶಿಷ್ಠ ವರ್ಗ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣದಿಂದ ಮಾತ್ರ ಜೀವನದ ಮೌಲ್ಯಗಳನ್ನು ಹಾಗೂ ಸಾಧನೆಯ ದಾರಿಯನ್ನು ಕಂಡುಕೊಳ್ಳಬಹುದು. ಈ ವಿದ್ಯಾರ್ಥಿ ನಿಲಯದಲ್ಲಿ ಕಲಿಯುವ ಮಕ್ಕಳು ಅತ್ಯಂತ ಶ್ರದ್ಧೆಯಿಂದ ವ್ಯಾಸಾಂಗ ಮಾಡುವ ಮೂಲಕ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಪಡೆದರೆ ಯೋಜನೆಯ ಸಾರ್ಥಕತೆ ದೊರೆಯುತ್ತದೆ ಎಂದರು. ರಾಜ್ಯದಾದ್ಯಂತ 2,439 ವಿದ್ಯಾರ್ಥಿ ನಿಲಯಗಳಿದ್ದು, ಒಟ್ಟು 19,863 ಬಾಲಕ, ಬಾಲಕಿಯರು ಈ ಮೂಲಕ ಶಿಕ್ಷಣ ಪಡೆಯುತ್ತಿದ್ದಾರೆ. ಇನ್ನೂ ಅನೇಕ ಕಡೆಗಳಲ್ಲಿ ವಿದ್ಯಾರ್ಥಿ ನಿಲಯಗಳ ಬೇಡಿಕೆಯಿದ್ದು, ಶೀಘ್ರದಲ್ಲಿ ಸರ್ಕಾರ ಸ್ಪಂದಿಸಲಿದೆ ಎಂದ ಸಚಿವರು, ಅಧಿಕಾರಿಗಳು ನಿಲಯದಲ್ಲಿ ಇರುವ ಮಕ್ಕಳನ್ನು ಪ್ರೀತಿ, ವಿಶ್ವಾಸದಿಂದ ಮೂಲಸೌಕರ್ಯಗಳಿಗೆ ಕೊರತೆ ಆಗದ ಹಾಗೆ ನೋಡಿಕೊಳ್ಳಬೇಕು. ಮಕ್ಕಳಿಗೆ ಗುಣ ಮಟ್ಟದ ಆಹಾರ ನೀಡಬೇಕು. ನಿಲಯದ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ವಹಿಸಬೇಕು. ಈ ಬಗ್ಗೆ ನಕಾರಾತ್ಮಕವಾಗಿ ಏನಾದರೂ ಪಾಲಕರಿಂದ ಅಥವಾ ಸಾರ್ವಜನಿಕರಿಂದ ದೂರುಗಳು ಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಶಾಸಕ ಬಿ. ಎಂ. ಸುಕುಮರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸಚಿವ, ಶಾಸಕ ಹಾಗೂ ಗುತ್ತಿಗೆದಾರರನ್ನು ಇಲಾಖೆಯ ವತಿಯಿಂದ ಸನ್ಮಾನಿಸಲಾಯಿತು. ಜಿಪಂ ಸಿಇಒ ಪ್ರಸನ್ನ ಹೆಚ್., ಕುಂದಾಪುರ ಸಹಾಯಕ ಆಯುಕ್ತ ಕೆ. ರಾಜು, ತಹಶೀಲ್ದಾರ್ ಶೋಭಾಲಕ್ಷ್ಮೀ ಎಸ್. ಎಚ್., ಬೈಂದೂರು ತಾಪಂ ಸಿಇಒ ಭಾರತಿ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ನಿರ್ದೇಶಕ ರಾಮು, ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ನೆಲ್ಯಾಡಿ ದೀಪಕ್‌ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಪೂರ್ಣಿಮಾ ಮತ್ತು ಪೂರ್ಣಿಮಾ ಪ್ರಾರ್ಥಿಸಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ಆರ್. ವರ್ಣೇಕರ್ ಸ್ವಾಗತಿಸಿದರು. ಐಟಿಡಿಪಿ ಯೋಜನಾ ಸಮನ್ವಯಾಧಿಕಾರಿ ದೂದ್‌ಪೀರ್ ಪಿ. ಪ್ರಾಸ್ತಾವಿಸಿದರು. ಶಿಕ್ಷಕ ಸುಧಾಕರ ಪಿ. ಕಾರ್ಯಕ್ರಮ ನಿರೂಪಿಸಿದರು.

Exit mobile version