Kundapra.com ಕುಂದಾಪ್ರ ಡಾಟ್ ಕಾಂ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.85.63 ಫಲಿತಾಂಶ. ಬಾಲಕಿಯರು, ಗಾಮೀಣ ವಿದ್ಯಾರ್ಥಿಗಳ ಮೇಲುಗೈ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು,ಮೇ.19:
2021-22ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, 85.63% ಫಲಿತಾಂಶ ದಾಖಲಾಗಿದೆ. ಪರೀಕ್ಷೆಗೆ ಹಾಜರಾಗಿದ್ದ, 8,73,884 ವಿದ್ಯಾರ್ಥಿಗಳ ಪೈಕಿ 8,53,436 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 7,30,881 ಮಂದಿ ಉತ್ತೀರ್ಣರಾಗಿದ್ದಾರೆ. ಇದರಲ್ಲಿ 40,061 ಮಂದಿ ಗ್ರೇಸ್ ಮಾರ್ಕ್ ಮೂಲಕ ಪಾಸ್ ಆಗಿದ್ದಾರೆ.

ಒಟ್ಟು 4,08,523 ಬಾಲಕರು ಪರೀಕ್ಷೆಗೆ ಹಾಜರಾಗಿ 3,52,752 ಮಂದಿ ಪಾಸ್ ಆಗುವ ಮೂಲಕ ಬಾಲಕರು ಶೇ. 86.34 ಮತ್ತು ಒಟ್ಟು 3,98,683 ಬಾಲಕಿಯರು ಪರೀಕ್ಷೆಗೆ ಹಾಜರಾಗಿ 3,68,579 ಮಂದಿ ಪಾಸ್ ಆಗಿ ಶೇ.92.44 ಫಲಿತಾಂಶದ ಮೂಲಕ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಒಟ್ಟು 85.63% ಫಲಿತಾಂಶ ಬಂದಿರುವುದು ಕಳೆದ 10 ವರ್ಷಗಳಲ್ಲಿ ದಾಖಲೆಯ ಫಲಿತಾಂಶವಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಬಿ.ಸಿ. ನಾಗೇಶ್ ಫಲಿತಾಂಶ ಪ್ರಕಟಿಸಿದ್ದಾರೆ.

ಒಟ್ಟು 145 ಮಂದಿ ಈ ಬಾರಿ 625ಕ್ಕೆ 625 ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. 309 ವಿದ್ಯಾರ್ಥಿಗಳು 624 ಅಂಕ ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. 472 ವಿದ್ಯಾರ್ಥಿಗಳು 623 ಅಂಕ ಪಡೆಯುವ ಮೂಲಕ ಮೂರನೇ ಸ್ಥಾನ ಪಡೆದಿದ್ದಾರೆ. ರಾಜ್ಯದ 3,920 ಶಾಲೆಗಳಿಗೆ ಶೇ.100 ಫಲಿತಾಂಶ ಬಂದಿದೆ. ಸರಕಾರಿ ಶಾಲೆಗೆ ಶೇ.88 ಫಲಿತಾಂಶ, ಅನುದಾನಿತ ಶಾಲೆಯಲ್ಲಿ ಶೇ.87.84 ಫಲಿತಾಂಶ ಅನುದಾನ ರಹಿತ ಶಾಲೆ ಶೇ.92.29 ಫಲಿತಾಂಶ ಬಂದಿರುತ್ತದೆ.

ಈ ಬಾರಿಯೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶೇ.91.32 ರ ಮೂಲಕ ಮೇಲುಗೈ ಸಾಧಿಸಿದ್ದಾರೆ. ನಗರದ ವಿದ್ಯಾರ್ಥಿಗಳಿಗೆ ಶೇ.86.64 ಫಲಿತಾಂಶ ಬಂದಿದೆ.

ಫಲಿತಾಂಶ ನೋಡಲು ಅಭ್ಯರ್ಥಿಗಳು https://karresults.nic.in/ ಗೆ ಭೇಟಿ ನೀಡಿ ಮೊದಲಿಗೆ ತಮ್ಮ ಪರೀಕ್ಷಾ ರಿಜಿಸ್ಟರ್ ನಂಬರ್ ಅನ್ನು ದಾಖಲಿಸಿ. ತದ ನಂತರ ಹಾಲ್ ಟಿಕೆಟ್ ನಲ್ಲಿ ನಮೂದಿಸಿರುವ ಹುಟ್ಟಿದ ದಿನಾಂಕ, ತಿಂಗಳು ಮತ್ತು ವರ್ಷವನ್ನು ನಮೂದಿಸಿ ಬಳಿಕ ಸಬ್ಮಿಟ್ ಬಟನ್ ಒತ್ತಿ. ಕೂಡಲೇ ನಿಮ್ಮ ಅಂಕಗಳ ಪಟ್ಟಿ ವಿಷಯಾವಾರು ಕಾಣಿಸಿಕೊಳ್ಳುತ್ತದೆ. ಮುಂದಿನ ದಾಖಲಾತಿಗೆ ಇದನ್ನು ಡೌನ್ ಲೋಡ್ ಮಾಡಿ ಇಟ್ಟುಕೊಳ್ಳಿ.

Exit mobile version