ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯುಜಿಡಿ ಕಾಮಗಾರಿಗಾಗಿ ರಸ್ತೆ ತುಂಡಿರಿಸಿ ಬಳಿಕ ಹಾಕಿರುವ ತೇಪ ಸಮರ್ಪಕವಾಗಿಲ್ಲ. ಚೇಂಬರ್ ಕೂಡಾ ಕೆಲವು ಕಡೆ ರಸ್ತೆಯಿಂದ ಮೇಲೆ, ಕೆಳಗೆ ಅಳವಡಿಸಲಾಗಿದೆ. ಈ ರಸ್ತೆಯಲ್ಲಿಯೇ ಸಂಚರಿಸುವುದೇ ಸಮಸ್ಯೆಯಾಗಿದೆ ಯುಜಿಡಿ ಕಾಮಗಾರಿ ಬಗ್ಗೆ ಅಧಿಕಾರಿಗಳ ಜೊತೆ ಸಭೆ, ಸಾಮಾನ್ಯ ಸಭೆಯಲ್ಲಿ ನಡೆದ ಚರ್ಚೆಗಷ್ಟೇ ಸೀಮಿತವಾಗಿದೆ ಎಂದು ಆಡಳಿತ ಪಕ್ಷದ ಸದಸ್ಯ ಸಂತೋಷ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ಕುಂದಾಪುರ ಪುರಸಭೆ ಡಾ. ವಿ. ಎಸ್. ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಯಲ್ಲಿ ಅವರು ಮಾತನಾಡಿ ಕಾಲಮಿತಿಯೊಳಗೆ ಯುಜಿಡಿ ಕಾಮಗಾರಿ ಸರಿಪಡಿಸುವಂತೆ ಒತ್ತಾಯಿಸಿದರು.
ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಉತ್ತರಿಸಿ, ಸಂಚಾರಕ್ಕೆ ಎಲ್ಲೆಲ್ಲಿ ರಸ್ತೆ ಯೋಗ್ಯವಾಗಿಲ್ಲವೋ ಅಲ್ಲಲ್ಲಿ ತುರ್ತು ದುರಸ್ತಿಮಾಡಿ, ಬಿಲ್ ಗುತ್ತಿಗೆದಾರರಿಗೆ ನೀಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದರು. ಯುಜಿಡಿ ಕಾಮಗಾರಿ ನಡೆಸಿ, ಸಂಚಾರ ಸಮಸ್ಯೆ ಮಾಡಿದ ಗುತ್ತಿಗೆದಾರರ ವಿರುದ್ದ ದೂರು ದಾಖಲಿಸುವಂತೆ ಸಂತೋಷ್ ಶೆಟ್ಟಿ ಒತ್ತಾಯಿಸಿದ್ದು, ಅದಕ್ಕೆ ಆಡಳಿತ ಹಾಗೂ ವಿರೋಧ ಸದಸ್ಯರು ದನಿ ಗೂಡಿಸಿದರು.
ವಿರೋಧ ಪಕ್ಷದ ಸದಸ್ಯ ಚಂದ್ರಶೇಖರ ಖಾರ್ವಿ ಮಾತನಾಡಿಸಾಲಿಗ್ರಾಮ ಪಟ್ಟಣ ಪಂಚಾಯಿತಿ ಕಸ ಕುಂದಾಪುರ ಪುರಸಭೆಗೆ ಸಂಬಂಧಿಸಿದ ಡಂಪಿಂಗ್ ಯಾರ್ಡ್‌ನಲ್ಲಿ ಡಂಪ್ ಮಾಡಲು ಸದಸ್ಯರ ಗಮನಕ್ಕೆ ತಾರದೆ ಒಪ್ಪಿಗೆ ನೀಡಿದ್ದೇಕೆ? ಸಾಲಿಗ್ರಾಮ ಪಟ್ಟಣ ಪಂಚಾಯಿತಿ ತ್ಯಾಜ್ಯ ವಿಲೇವಾರಿಗೆ ಅವಕಾಶ ನೀಡಬಾರದು. ಮುಂದೆ ಕುಂದಾಪುರ ನಗರಕ್ಕೆ ತ್ಯಾಜ್ಯವಿಲೆವಾರಿ ಸಮಸ್ಯೆ ಆಗುತ್ತದೆ ಎಂದರು.
ಆಡಳಿತ ಪಕ್ಷದ ಸದಸ್ಯರು ತಾತ್ಕಾಲಿಕವಾಗಿ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಕಸ ವಿಲೇವಾರಿ ಸಮರ್ಥಿಸಿದ್ದು, ಸ್ಥಳೀಯ ಶಾಸಕರು ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಕಸ ವಿಲೇಗೆ ರಿಕ್ವೆಸ್ಟ್ ಮಾಡಿದ್ದರಿಂದ ಒಪ್ಪಿಕೊಳ್ಳಲಾಗಿದೆ ಎಂದರು. ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಕಚೇರಿ ಹಿಂಭಾಗದಲ್ಲಿ ಸ್ಟಾಕ್ ಮಾಡಿದ ಕಸ ಮಾತ್ರ ವಿಲೇ ಮಾಡಲು ಕೇಳಿದ್ದು, ಅದಷ್ಟೇ ವಿಲೇಮಾಡಲು ಒಪ್ಪಿಗೆ ಕೊಡಲಾಗಿದೆ ಎಂಬ ಮಾಹಿತಿ ಮುಖ್ಯಾಧಿಕಾರಿ ನೀಡಿದರು.
ವಿರೋಧದ ನಡುವೆಯೂ ಡಪಿಂಗ್ ಯಾರ್ಡ್‌ನಲ್ಲಿ ತ್ಯಾಜ್ಯ ವಿಲೇ ಮಾಡಿದರೆ, ಡಪಿಂಗ್ ಯಾರ್ಡ್ ಬಳಿ ಧರಣಿ ಕೂರುತ್ತೇವೆ. ಆಡಳಿತಕ್ಕೆ ಸಹಕಾರ ನೀಡಿಲ್ಲ ಎಂದು ನಮ್ಮನ್ನು ದೂರಿಕೊಳ್ಳಬೇಡಿ ಎಂದು ವಿರೋದಿ ಸದಸ್ಯರು ಎಚ್ಚರಿಸಿದರು.
ಆಡಳಿತ ಪಕ್ಷದ ಮೋಹನದಾಸ ಶೆಣೈ, ಪ್ರಭಾಕರ ವಿ. ಅಶ್ವಿನಿ, ರಾಘವೇಂದ್ರ ಖಾರ್ವಿ, ನಾಮನಿರ್ದೇಶಕ ಸದಸ್ಯ ದಿವಾಕರ ಕೊಡಿ, ವಿರೋಧಿ ಸಮಸ್ಯೆ ಅಶ್ಪಕ್, ಅಬು ಸಲೀಮ್ ಮಾತನಾಡಿದರು.
ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಎಸ್., ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.