Kundapra.com ಕುಂದಾಪ್ರ ಡಾಟ್ ಕಾಂ

ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನಿಂದ ಶ್ರಾವ್ಯಾಳ ಚಿಕಿತ್ಸಾ ವೆಚ್ಚ ಭರಿಸುವ ಭರವಸೆ

ಅನಾರೋಗ್ಯದ ನಡುವೆಯೂ ಎಸ್‌ಎಸ್‌ಎಲ್‌ಸಿಯಲ್ಲಿ ಸಾಧನೆ ಮಾಡಿದ್ದ ವಿದ್ಯಾರ್ಥಿನಿಗೆ ಡಾ. ಗೋವಿಂದ ಬಾಬು ಪೂಜಾರಿ ಅವರಿಂದ ನೆರವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಬಗ್ವಾಡಿಯ ಯುವತಿ ಶ್ರಾವ್ಯಾ, ತನ್ನ ಅನಾರೋಗ್ಯದ ನಡುವೆಯೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸಿ ಪ್ರಥಮ ಶೇಣಿಯಲ್ಲಿ ತೇರ್ಗಡೆಯಾಗಿ ಸಾಧನೆ ಮಾಡಿರುವ ಬಗ್ಗೆ ವರದಿ ಪ್ರಕಟವಾದ ಬೆನ್ನಲ್ಲೇ ಉದಾರಿಗಳಿಂದ ನೆರವು ಹರಿದು ಬಂದಿದೆ. ಆಕೆಯ ಶಿಕ್ಷಣ ವೆಚ್ಚ ಹಾಗೂ ಚಿಕಿತ್ಸಾ ವೆಚ್ಚವನ್ನು ಭರಿಸಲು ದಾನಿಗಳು ಮುಂದೆ ಬಂದಿದ್ದಾರೆ.

Watch video

ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಶ್ರಾವ್ಯಳ ಪ್ರತಿಭೆ ಹಾಗೂ ಆಕೆಯ ಆರೋಗ್ಯ ಸಮಸ್ಯೆಯ ಬಗ್ಗೆ ತಿಳಿದುಕೊಂಡ ಉದ್ಯಮಿ ಡಾ. ಗೋವಿಂದ ಬಾಬು ಪೂಜಾರಿ ಅವರು ಸ್ವತಃ ಬಗ್ವಾಡಿ ಸಿಂಗನಕೊಡ್ಲುವಿನಲ್ಲಿರುವ ಆಕೆಯ ಮನೆಗೆ ಭೇಟಿ ನೀಡಿ ಧೈರ್ಯತುಂಬಿದ್ದಾರೆ. ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮೂಲಕ ಆಕೆಯ ಚಿಕಿತ್ಸಾ ವೆಚ್ಚವನ್ನು ಭರಿಸುವ ಭರವಸೆಯನ್ನು ನೀಡಿ ಕುಟುಂಬಕ್ಕೆ ಬೆಳಕಾಗಿದ್ದಾರೆ. ಒಂದು ವರ್ಷದ ಚಿಕಿತ್ಸೆ ವೆಚ್ಚ ಭರಿಸುವ ಜೊತೆಗೆ ಮಣಿಪಾಲ ಖಾಸಗಿ ಆಸ್ಪತ್ರೆಯ ವೈದ್ಯರು ಶಿಪಾರಸ್ಸು ಮಾಡಿದ 75 ಸಾವಿರ ರೂ. ಮೌಲ್ಯದ ಚುಚ್ಚುಮದ್ದು ಕೊಡಿಸುವುದಕ್ಕೂ ಮುಂದೆ ಬಂದಿದ್ದಾರೆ.

ಶ್ರಾವ್ಯಾಳಿಗೆ ಧೈರ್ಯ ತುಂಬಿದ ಡಾ. ಗೋವಿಂದ ಬಾಬು ಪೂಜಾರಿ ಅವರು, ಆರೋಗ್ಯ ಸಮಸ್ಯೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು ಕೆಲವೊಂದು ಆರೋಗ್ಯ ಜಾಗೃತಿ ಬಗ್ಗೆ ಟಿಪ್ಸ್ ನೀಡಿದ್ದಾರೆ. ಆರೋಗ್ಯ, ಚಿಕಿತ್ಸೆ ಯಾವುದರ ಬಗ್ಗೆಯೂ ಚಿಂತಿಸದೆ, ಶಿಕ್ಷಣದ ಕಡೆ ಗಮನ ಹರಿಸಿ, ಹೆಚ್ಚಿನ ಸಾಧನೆ ಮಾಡುವುದಕ್ಕೆ ಗಮನ ಹರಿಸು, ನಿಮ್ಮೊಂದಿಗೆ ನಮ್ಮ ಟ್ರಸ್ಟ್ ಸದಾ ಇರುತ್ತದೆ ಎಂದು ಧೈರ್ಯ ಹೇಳಿದರು.

ಭೇಟಿ ವೇಳೆ ಮೊಗವೀರ ಯುವ ಸಂಘಟನೆ ಮಾಜಿ ಅಧ್ಯಕ್ಷ ರಾಘವೇಂದ್ರ ನೆಂಪು, ಪ್ರದೀಪ ಪೂಜಾರಿ ಮುಳ್ಳಿಕಟ್ಟೆ, ನರಸಿಂಹ ಬಿ. ನಾಯಕ್ ಉಪುಂದ, ಪ್ರಸಾದ ಬೈಂದೂರು, ಲೋಕೇಶ್ ಪೂಜಾರಿ ಉಪ್ಪುಂದ ಮುಂತಾದವರು ಇದ್ದರು.

ಬಗ್ವಾಡಿ ನಿವಾಸಿ ರಾಜು ಪೂಜಾರಿ ಮತ್ತು ಸುಜಾತಾ ಆರ್. ಪೂಜಾರಿ ದಂಪತಿಗಳ ಪುತ್ರಿ ಶ್ರಾವ್ಯಾ ಕರಳು ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದು, ದೇಹದ ತೂಕ ಕಳೆದುಕೊಳ್ಳುತ್ತಿದ್ದಾಳೆ. ಸದ್ಯ 21 ಕೇಜಿ ತೂಕವಿರುವ ಶ್ರಾವ್ಯಾಗೆ ಶಿರಸಿ ಪ್ರಕೃತಿ ಚಿಕಿತ್ಸಾಲಯ ಡಾ. ಪರಮೇಶ್ವರ ಭಟ್ ಚಿಕಿತ್ಸೆ ನೀಡುತ್ತಿದ್ದು, ಹಿಂದೆ ಇದ್ದ ಸಮಸ್ಯೆಯಲ್ಲಿ ಶೇ.80ರಷ್ಟು ಗುಣಮುಖಳಾಗಿದ್ದಾಳೆ. ಇನ್ನು 9 ದಿನದ ಚಿಕಿತ್ಸೆ ಕೋರ್ಸ್ ಇದ್ದು, ಅದರ ನಂತರ ಶ್ರಾವ್ಯಾಳ ದೇಹದ ತೂಕ ನಿಧಾನವಾಗಿ ಏರಿಕೆ ಆಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಅನಾರೋಗ್ಯದ ನಡುವೆಯೂ ಶ್ಯಾವ್ಯ ಶೈಕ್ಷಣಿಕವಾಗಿ ಸಾಧನೆ ಮಾಡಿರುವ ಬಗ್ಗೆ ತಿಳಿದು ಸಂತೋಷವಾಯಿತು. ಹಾಗಾಗಿ ಆಕೆಯನ್ನು ಭೇಟಿಯಾಗಿ ಧೈರ್ಯತುಂಬಿದ್ದೇನೆ. ಶ್ರಾವ್ಯಾಗೆ ಒಂದು ವರ್ಷಕ್ಕೆ ಬೇಕಾಗುವ ಎಲ್ಲಾ ಚಿಕಿತ್ಸಾ ವೆಚ್ಚ ನಮ್ಮ ಟ್ರಸ್ಟ್ ಮೂಲಕ ಭರಿಸಲಾಗುವುದು. – ಡಾ. ಗೋವಿಂದ ಬಾಬು ಪೂಜಾರಿ, ಮ್ಯಾನೇಜಿಂಗ್ ಟ್ರಸ್ಟೀ ಶ್ರೀ ವರಲಕ್ಷ್ಮೀ ಚಾರಿಟೆಬಲ್ ಟ್ರಸ್ಟ್ ರಿ. ಉಪ್ಪುಂದ

ಆರ್.ಎನ್. ಶೆಟ್ಟಿ ಪಿಯು ಕಾಲೇಜಿನಲ್ಲಿ ಉಚಿತ ಪ್ರವೇಶಾತಿ:
ಆಸ್ಪತ್ರೆಯಲ್ಲಿ ಮಲಗಿಕೊಂಡೇ ಓದಿ ಎಸ್‌ಎಸ್‌ಸಿ ಪರೀಕ್ಷೆಯಲ್ಲಿ 580 ಅಂಕ ಪಡೆದಿದ್ದ ಶ್ರಾವ್ಯಾಳ ಶಿಕ್ಷಣ ಆಸಕ್ತಿ ಗಮನಸಿದ ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹಾಗೂ ಆರ್. ಎನ್. ಶೆಟ್ಟಿ ಪಿಯು ಕಾಲೇಜಿನ ಪ್ರಾಂಶುಪಾಲ ನವೀನ್ ಶೆಟ್ಟಿ ಅವರು ಕಾಲೇಜಿಗೆ ಉಚಿತ ಪ್ರವೇಶಾತಿ ನೀಡಿದ್ದು ಎರಡು ವರ್ಷಗಳ ಆಕೆಯಿಂದ ಯಾವುದೇ ಫೀಸ್ ಪಡೆಯದಿರಲು ಆಡಳಿತ ಮಂಡಳಿ ನಿರ್ಧರಿಸಿದೆ. ಶ್ರಾವ್ಯಾ ಪಿಸಿಎಂಸಿ ವಿಷಯ ಆಯ್ಕೆ ಮಾಡಿಕೊಂಡಿದ್ದಾಳೆ.

ಕಂಗೆಟ್ಟಿದ್ದ ಕುಟುಂಬಕ್ಕೆ ನೆರವು:
ವಿಕಲಚೇತನರ ಸಂಘಟನೆ ರಾಜು ಪೂಜಾರಿ ಜಡ್ಕಲ್ ಶ್ರಾವ್ಯಾ ನೆರವಿಗೆ ಬಂದಿದ್ದು, ವಿಕಲಚೇತನ ಕೋಟಾದಲ್ಲಿ ಮಾಸಿಕ 4 ಸಾವಿರ ರೂ. ದೊರೆಯುವ ಅರ್ಜಿಯನ್ನು ಆನ್‌ಲೈನ್ ಸಲ್ಲಿಸಲು ನೆರವಾಗಿದ್ದರು. ವೈದ್ಯರು ಸರ್ಟಿಫಿಕೇಟ್ ಕೂಡಾ ನೀಡಿದ್ದು ಸದ್ಯದಲ್ಲಿ ಶ್ರಾವ್ಯಾಳಿಗೆ ಸರ್ಕಾರದ ಮಾಶಾಸನ ಸಿಗಲಿದೆ. ಬಿಲ್ಲವ ಸಂಘಟಣೆಗಳು ಶ್ರಾವ್ಯಾ ನೆರವಿಗೆ ಬಂದಿದೆ.

ಶ್ರಾವ್ಯಾಳ ಆರೋಗ್ಯ ಸಮಸ್ಯೆಯ ಬಗ್ಗೆ ಕುಂದಾಪ್ರ ಡಾಟ್ ಕಾಂ ಕೆಲವು ದಿನಗಳ ಹಿಂದಷ್ಟೇ ವರದಿ ಮಾಡಿತ್ತು.
► ಆಸ್ಪತ್ರೆಯಲ್ಲಿದ್ದುಕೊಂಡೇ ಓದಿ ಎಸ್‌ಎಸ್‌ಎಲ್‌ಸಿಯಲ್ಲಿ 580 ಅಂಕ ಪಡೆದ ಶ್ರಾವ್ಯಾ! – https://kundapraa.com/?p=59436

Exit mobile version