Kundapra.com ಕುಂದಾಪ್ರ ಡಾಟ್ ಕಾಂ

ಕೊಲ್ಲೂರು, ಕೆರಾಡಿ ಭಾಗಕ್ಕೆ ಸರಕಾರಿ ಬಸ್ ಸಂಪರ್ಕ ಕಲ್ಪಿಸಿ: ಕುಂದಾಪುರದಲ್ಲಿ ಎಬಿವಿಪಿ ಪ್ರತಿಭಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕೊಲ್ಲೂರು, ಕೆರಾಡಿ ಮೊದಲಾದ ಗ್ರಾಮೀಣ ಪ್ರದೇಶಗಳಿಗೆ ಸರಕಾರಿ ಬಸ್ ಸೌಲಭ್ಯ ಕಲ್ಪಿಸದೇ ಇರುವುದರಿಂದ ವಿದ್ಯಾರ್ಥಿಗಳು ಕಾಲೇಜಿಗೆ ತೆರಳುವುದು ದುಸ್ತವಾಗಿದ್ದು, ಗ್ರಾಮೀಣ ಭಾಗಕ್ಕೆ ಸರಕಾರಿ ಬಸ್ ಸೇವೆ ಒದಗಿಸುವಂತೆ ಆಗ್ರಹಿಸಿ ಕುಂದಾಪುರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಶನಿವಾರ ಇಲ್ಲಿನ ಶಾಸ್ತ್ರೀ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.

ಬಳಿಕ ವಿದ್ಯಾರ್ಥಿಗಳು ಕುಂದಾಪುರ ಮುಖ್ಯ ರಸ್ತೆಯಲ್ಲಿ ಕಾಲ್ನಡಿಗೆ ಮೆರವಣಿಗೆಯಲ್ಲಿ ಸಾಗಿ ಕುಂದಾಪುರ ತಹಸೀಲ್ದಾರ್ ಕಿರಣ್ ಗೌರಯ್ಯ ಅವರಿಗೆ ಮನವಿ ಸಲ್ಲಿಸಿದರು.

ಸುಮಾರು 2000 ವಿದ್ಯಾರ್ಥಿಗಳು ಪ್ರತಿದಿನ ಶಾಲೆಗೆ ತೆರಳಲು ಹೊಲ್ಲೂರಿನಿಂದ ಹೊರಟು ಕುಂದಾಪುರದವರೆಗೂ ಸಹ ಅನೇಕ ವಿದ್ಯಾಸಂಸ್ಥೆಗಳಿಗೆ ತೆರಳುತಿದ್ದು, ವಿದ್ಯಾರ್ಥಿಗಳಿಗೆ ನಿತ್ಯ ತೊಂದರೆಯಾಗುತ್ತಿದೆ ಎಂದರು. ತಾಲೂಕಿನ ಗ್ರಾಮೀಣ ಭಾಗವಾದ ಕೆರಾಡಿ – ಮಾರಣಕಟ್ಟೆ ರಸ್ತೆಯಲ್ಲಿ ಸುಮಾರು 500 ವಿದ್ಯಾರ್ಥಿಗಳು ಮತ್ತು ಕೆರಾಡಿ ಬೆಳ್ಳಾಲ ರಸ್ತೆಯಲ್ಲಿ ನೂರಕ್ಕೂ ಅಧಿಕ ಕಾಲೇಜು ವಿದ್ಯಾರ್ಥಿಗಳು ಕುಂದಾಪುರಕ್ಕೆ ಬರುತ್ತಿದ್ದು, ಬಸ್ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳು, ಶಾಸಕರು, ಮಂತ್ರಿಗಳು ಹಾಗೂ ಮುಖ್ಯ ಮಂತ್ರಿಯವರಿಗೆ ಪತ್ರ ಬರೆದಿದ್ದು ಯಾವುದೇ ಪ್ರಯೋಜನವಾಗಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ಶಾಸಕರು ಕೂಡ ಜಿಲ್ಲಾಧಿಕಾರಿಯವರಿಗೆ ಮಾಹಿತಿ ನೀಡಿದ್ದು ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಈ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ 5000ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಂದ ಡಿಪೋ ಮುಂದೆ ಧರಣಿ ಮಾಡಲಾಗುವುದು. ಕೆ.ಎಸ್.ಆರ್.ಟಿ.ಸಿ. ಬಸ್ ಸಂಚರಿಸುವ ಎಲ್ಲಾ ಮಾರ್ಗದ ರಸ್ತೆಗಳನ್ನು ತಡೆಹಿಡಿಯಲಾಗುವುದು. ಇದರಿಂದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಉಂಟಾಗುವ ಸಮಸ್ಯೆಗಳಿಗೆ ಧಿಕಾರಿಗಳು ಹಾಗೂ ಜನಪ್ರತಿನಿಧಿಗಳೇ ನೇರ ಹೊಣೆಯಾಗಿರುತ್ತಾರೆ ಎಂದು ಎಚ್ಚರಿಸಿದ್ದಾರೆ.

ಪ್ರತಿಭಟನೆಯಲ್ಲಿ ಕುಂದಾಪುರದ ಬಿ.ಬಿ.ಹೆಗ್ಡೆ ಕಾಲೇಜು ಭಂಡಾರ್ಕಾರ್ಸ್ ಕಾಲೇಜು, ಬಸ್ರೂರು ಶಾರದಾ ಕಾಲೇಜು, ಕಾಳಾವರ ವರದರಾಜ ಶೆಟ್ಟಿ ಪ್ರಥಮ ದರ್ಜೆ ಕಾಲೇಜು, ಆರ್.ಎನ್. ಶೆಟ್ಟಿ ಕಾಲೇಜಿನ ಎಬಿವಿಪಿ ಘಟಕಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು.

ಮನವಿ ಸ್ವೀಕರಿಸಿದ ಕುಂದಾಪುರ ತಹಶಿಲ್ದಾರ್ ಕಿರಣ್ ಗೌರಯ್ಯ ಅವರು, ಈ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇನೆ. ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳ ಬಳಿ ಈ ಬಗ್ಗೆ ಚರ್ಚಿಸಲಾಗುತ್ತದೆ ಎಂದರು. ನಿರಂತವಾಗಿ ಮಳೆ ಸುರಿದಿದ್ದು, ಇದರ ನಡುವೆಯೇ ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರಿಸಿದರು. ಪ್ರತಿಭಟನೆಯಲ್ಲಿ ಎಬಿವಿಪಿ ಕುಂದಾಪುರ ತಾಲೂಕು ಸಂಚಾಲಕ ಜಯಸೂರ್ಯ ಶೆಟ್ಟಿ, ತಾಲೂಕು ವಿದ್ಯಾರ್ಥಿನಿ ಪ್ರಮುಖ್ ಧ್ವನಿ, ಬಿ.ಬಿ. ಹೆಗ್ಡೆ ಕಾಲೇಜಿನ ಅನುಷಾ, ಪ್ರಥ್ವಿ, ಕಿಶನ್, ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿಗಳಾದ ನಾಗೇಶ್, ಶ್ರೀನಿಧಿ, ಬಸ್ರೂರು ಶಾರದಾ ಕಾಲೇಜಿನ ದೀಪಾ, ರಂಜಿತ್, ಕೋಟೇಶ್ವರ ಕಾಲೇಜಿನ ಅಭಿ, ಆರ್.ಎನ್ ಶೆಟ್ಟಿ ಕಾಲೇಜಿನ ನಿತಿನ್, ಸುಜನ್ ಸೇರಿದಂತೆ 500ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Exit mobile version