Kundapra.com ಕುಂದಾಪ್ರ ಡಾಟ್ ಕಾಂ

ಕಾಲ್ನಡಿಗೆಯಲ್ಲಿ ಹಜ್ ಯಾತ್ರೆಗೆ ಹೊರಟ ಯುವಕನಿಗೆ ಕುಂದಾಪುರ, ತ್ರಾಸಿಯಲ್ಲಿ ಸ್ವಾಗತ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಜೂ.13:
ಕೇರಳದ ಮಲಪ್ಪುರಂನಿಂದ ಪವಿತ್ರ ಹಜ್ ಯಾತ್ರೆಗೆ ಹೊರಟಿರುವ ಯುವಕ ಶಿಹಾಬ್ ಚೊಟೂರು (30) ಅವರನ್ನು ಕುಂದಾಪುರ ಹಾಗೂ ಗಂಗೊಳ್ಳಿ ಭಾಗದಲ್ಲಿ ಮಸ್ಜಿದ್ ಕಮಿಟಿ ಹಾಗೂ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಸ್ವಾಗತಿಸಿಕೊಳ್ಳಲಾಯಿತು.

ಜೂನ್ 2 ರಂದು ಶಿಹಾಬ್ ಮಲಪ್ಪುರಂನಿಂದ ಕಾಲ್ನಡಿಗೆಯಲ್ಲಿ ಹೊರಟ ಯುವಕ ಭಾನುವಾರ ಉಡುಪಿ ಮಸೀದಿ ತಲುಪಿದ್ದರು. ಬೆಳಿಗ್ಗೆ ಅಲ್ಲಿಂದ ಕಾಲ್ನಡಿಗೆಯಲ್ಲಿ ಹೊರಟು ಮದ್ಯಾಹ್ನ ಕೋಟ ಜಾಮಿಯಾ ಮಸೀದಿಯಲ್ಲಿ ಉಪಹಾರ ಸೇವಿಸಿ ಹೊರಟು ರಾತ್ರಿ ಕುಂದಾಪುರದ ಹಂಗಳೂರು ಮಸೀದಿಯಲ್ಲಿ ತಂಗಿದ್ದರು.

ಸೋಮವಾರ ಬೆಳಿಗ್ಗೆ ಕುಂದಾಪುರದಿಂದ ಕಾಲ್ನಡಿಗೆಯಲ್ಲಿ ಹೊರಟು ಬೆಳಿಗ್ಗೆ ಗಂಗೊಳ್ಳಿ ಪ್ರಾಂತ್ಯದ ತ್ರಾಸಿ ಮಸೀದಿಗೆ ತಲುಪಿದ್ದರು. ತ್ರಾಸಿ ಮಸೀದಿಯಲ್ಲಿ ಜಮಾತುಲ್ ಮುಸ್ಲಿಮೀನ್ ಗಂಗೊಳ್ಳಿಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರು ಶಾಲು ಹೊದಿಸಿ ಸನ್ಮಾನಿಸಿದರು. ಮುಂದೆ ನಾವುಂದ ಮಸೀದಿ ವ್ಯಾಪ್ತಿಯಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ್ದಾರೆ. ಎಲ್ಲಾ ಭಾಗದಲ್ಲಿಯೂ ಅವರನ್ನು ಸ್ವಾಗತಿಸಿಕೊಳ್ಳಲಾಗುತ್ತಿದೆ.

ಶಿಹಾಬ್ ಚೊಟೂರು ಅವರು ಕೇರಳ ರಾಜ್ಯದಿಂದ ಪ್ರಾರಂಭಿಸಿ ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ತಾನ್, ಹರಿಯಾಣ, ಪಂಜಾಬ್, ವಾಘಾ ಗಡಿ ಮೂಲಕ ಪಾಕಿಸ್ತಾನ, ಇರಾಕ್, ಇರಾನ್, ಕುವೈಟ್ ಮತ್ತು ಸೌದಿ ಅರೇಬಿಯಾ ತೆರಳಲಿದ್ದಾರೆ. ಆಯಾ ವಿವಿಧ ದೇಶಗಳ ಗಡಿ ದಾಟಲು ವೀಸಾ ಹಾಗೂ ರಾಯಭಾರ ಕಚೇರಿಗಳಿಂದ ಅನುಮತಿ ಪತ್ರಗಳನ್ನು ಪಡೆದುಕೊಂಡಿದ್ದಾರೆ. ಪಾದಯಾತ್ರೆ ಮೂಲಕ ಪವಿತ್ರ ಹಜ್ ಯಾತ್ರೆಗೆ ಹೊರಡಬೇಕೆಂದು ಸುಮಾರು 8 ತಿಂಗಳಿಂದ ಸಿದ್ಧತೆ ಮಾಡಿಕೊಂಡ ಶಿಹಾಬ್ಗೆ ವಿದೇಶಾಂಗ ವ್ಯವಹಾರ ಸಚಿವಾಲಯದಿಂದ ಎಲ್ಲ ಅನುಮತಿ ಪಡೆದುಕೊಳ್ಳಲು ಕೇಂದ್ರ ಸಚಿವ ವಿ. ಮುರುಳೀಧರನ್ ಸಹಿತ ಹಲವರು ಮಹನೀಯರು ನೆರವಾಗಿದ್ದಾರೆ. ಒಟ್ಟು 8640 ಕಿ.ಮೀ ಹಾದಿಯನ್ನು 280 ದಿನಗಳಲ್ಲಿ ತಲುಪುವ ಗುರಿ ಹೊಂದಿದ್ದಾರೆ. 2023ನೇ ಸಾಲಿನ ಪವಿತ್ರ ಹಜ್ಗೆ ಅರ್ಜಿ ಹಾಕಿ ಮಕ್ಕಾಗೆ ತೆರಳುವುದು ನನ್ನ ಉದ್ದೇಶ. ಇದಕ್ಕೆ ನನ್ನ ಕುಟುಂಬ, ಗೆಳೆಯರ ಸಹಕಾರವಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಇನ್ನು ಯುವಕನ ಪಾದಯಾತ್ರೆಗೆ ಎಲ್ಲೆಡೆಯೂ ಸ್ವಾಗತ ದೊರೆಯುತ್ತಿದ್ದು ಊಟ, ಉಪಹಾರ, ವಸತಿ ವ್ಯವಸ್ಥೆಯಲ್ಲಿ ಕಲ್ಪಿಸಿಕೊಡಲಾಗುತ್ತಿದೆ. ನೂರಾರು ಮುಸ್ಲಿಂ ಸಮುದಾಯದ ಯುವಕರು ಸ್ಥಳೀಯವಾಗಿ ಪಾದಯಾತ್ರೆಗೆ ಸಾಥ್ ನೀಡುತ್ತಿದ್ದಾರೆ.

Exit mobile version