ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಎಂಟು ವರ್ಷದ ಆಡಳಿತ ಪೂರೈಸಿದ ಹಿನ್ನೆಲೆಯಲ್ಲಿ ಬಿಜೆಪಿ ಯುವಮೋರ್ಚಾ ಕುಂದಾಪುರ ಮಂಡಲ ವತಿಯಿಂದ ಭಾನುವಾರ ಇಲ್ಲಿನ ಶಾಸ್ತ್ರೀ ವೃತ್ತದಲ್ಲಿ ವಿಕಾಸ ತೀರ್ಥ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿ, ನರೆಂದ್ರ ಮೋದಿ ಆಡಳಿತದ ಎಂಟು ವರ್ಷಗಳಲ್ಲಿ ಆದ ಅಭಿವೃದ್ದಿ ಹಾಗೂ ದೇಶ ರಕ್ಷಣೆಯಲ್ಲಿ ತೋರಿದ ಉತ್ಸಾಹ, ಆಡಳಿತಾತ್ಮಕ ವ್ಯವಸ್ಥೆಯಲ್ಲಿ ತಂದಿರುವ ಅನೇಕ ಸುಧಾರಣೆಗಳೂ ಸೇರಿದಂತೆ ಒಟ್ಟಾರೆಯ ಅಭಿವೃದ್ದಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ವೇಗದ ಆಡಳಿತ ಅತ್ಯಂತ ಖುಷಿ ನೀಡಿದೆ ಎಂದರು.
ಪ್ರಧಾನಿ ನರೆಂದ್ರ ಮೋದಿ ಆಡಳಿತದ ಕೇಂದ್ರ ಬಿಜೆಪಿ ಸರ್ಕಾರದ ಜನಪರ ಆಡಳಿತವನ್ನು ಸಹಿಸಲಾಗದ ವಿಪಕ್ಷಗಳು ಇಲ್ಲಸಲ್ಲದ ಆರೋಪ ಹೊರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಒಂದು ರಾಜಕೀಯ ಪಕ್ಷವಾಗಿ ಸಮರ್ಥ ಆಡಳಿತ ವ್ಯವಸ್ಥೆಯೊಂದಿಗೆ ಸಾಮಾನ್ಯ ಜನರಿಗೆ ಆಡಳಿತದ ಒಟ್ಟು ಮಾಹಿತಿಯನ್ನು ಕೊಡುವಂತಹ ಈ ವಿಕಾಸ ತೀರ್ಥ ಯಾತ್ರೆ ಅತ್ಯಂತ ಪರಿಣಾಮಕಾರಿಯಾಗಿ ಮುನ್ನಡೆಯಲಿ ಎಂದು ನುಡಿದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ, ಭಾಜಪ ಜಿಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕುಂದಾಪುರ ಮಂಡಲ ಪ್ರಭಾರಿ ಬೈಕಾಡಿ ಸುಪ್ರಸಾದ್ ಶೆಟ್ಟಿ, ಕುಂದಾಪುರ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ಯುವಮೋರ್ಚಾ ಅಧ್ಯಕ್ಷ ಅವಿನಾಶ್ ಉಳ್ತೂರು ಮೊದಲಾದವರು ಇದ್ದರು.