ಚಿತ್ರಕೂಟ ಆಯುರ್ವೇದ ಧ್ಯಾನ ಕುಟೀರ ಉದ್ಘಾಟನೆ
ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಾನಸಿಕ ಒತ್ತಡವೇ ಆನಾರೋಗ್ಯದ ಮೊದಲ ಮೆಟ್ಟಿಲಾಗಿದ್ದು ನಿಯಮಿತವಾಗಿ ಯೋಗ, ಧ್ಯಾನವನ್ನು ಮಾಡುವ ಮೂಲಕ ಮನಸ್ಸಿನ ಮೇಲೆ ಹಿಡಿತ ಸಾಧಿಸಿ ಆರೋಗ್ಯ ಜೀವನ ನಡೆಸಲು ಸಾಧ್ಯ. ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಂಡವರು ಸಾಕಷ್ಟು ಮಂದಿ ಇದ್ದಾರೆ ಎಂದು ಕುಂದಾಪುರದ ನ್ಯಾಯವಾದಿ ರವಿಕಿರಣ ಮುರುಡೇಶ್ವರ ಹೇಳಿದರು.
ಅವರು ಮಂಗಳವಾರ ತಾಲೂಕಿನ ಆಲೂರು ಕಳಿಯಲ್ಲಿರುವ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ಧ್ಯಾನ ಕುಟೀರ ಉದ್ಘಾಟಿಸಿ ಮಾತನಾಡಿ ಮನಸ್ಸಿಗೂ ಆರೋಗ್ಯಕ್ಕೂ ಹತ್ತಿರದ ಸಂಬಂಧವಿದ್ದು, ಮನಸ್ಸಿನ ಆರೋಗ್ಯಕ್ಕೆ ಧ್ಯಾನ ಉತ್ತಮ ಚಿಕಿತ್ಸೆಯಾಗಿದೆ. ಆಯುರ್ವೇದ ಎಂದರೆ ಆನಾರೋಗ್ಯ ಬಾರದಂತೆ ನೋಡಿಕೊಳ್ಳುವುದೇ ಆಗಿದೆ ಎಂದು ಹೇಳಿದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ. ಅತುಲ ಕುಮಾರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಧ್ಯಾನ ಮನಸ್ಸಿನ ಆರೋಗ್ಯ ಕಾಪಾಡಿದರೆ, ಆಯುರ್ವೇದ ದೈಹಿಕ ಆರೋಗ್ಯ ಕಾಪಾಡುತ್ತದೆ. ಯೋಗ ಮತ್ತು ಧ್ಯಾನ ದೇಹದ ಪ್ರತಿಯೊಂದು ಅಂಗವನ್ನೂ ಕ್ರಿಯಾಶೀಲವಾಗಿಡುವುದರಿಂದ ಆರೋಗ್ಯಕರ ಜೀವನ ಸಾಧ್ಯ ಎಂದು ಹೇಳಿದರು.
ಕುಂದಾಪುರ ಸೌತ್ ರೋಟರಿ ಅಧ್ಯಕ್ಷ ಮಹೇಂದ್ರ ಶೆಟ್ಟಿ, ಪತ್ರಕರ್ತ ಹಾಗೂ ಚಿಂತಕ ವಸಂತ ಗಿಳಿಯಾರು ಮಾತನಾಡಿದರು. ಪ್ರಗತಿಪರ ಕೃಷಿಕ ಮಹಾಬಲೇಶ್ವರ ಬಾಯಿರಿ, ಕಲಾವತಿ ಎಂ. ಬಾಯಿರಿ ಇದ್ದರು.
ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯ ವೈದ್ಯಾಧಿಕಾರಿ ಡಾ. ರಾಜೇಶ್ ಬಾಯಿರಿ ಸ್ವಾಗತಿಸಿ ಬಳಿಕ ಮಾತನಾಡಿ ಚಿತ್ರಕೋಟ ಆಯುರ್ವೇದ ಚಿಕಿತ್ಸಾಲಯ ಒಂದು ಬೆಡ್‌ನಿಂದ ಆರಂಭವಾಗಿದ್ದು, ಇಂದು ದೇಶ ವಿದೇಶದ ಜನರು ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆದು ಮರಳಿ ಆರೋಗ್ಯವಂತರಾಗಿದ್ದಾರೆ. ಇದರ ಹಿಂದೆ ಪರಿಶ್ರಮ ಹಾಗೂ ವೈದ್ಯೋ ನಾರಾಯಣೋ ಹರಿ ಎನ್ನುವ ಶ್ರದ್ಧೆಯಿದೆ. ಇಲ್ಲಿನ ಚಿಕಿತ್ಸಾ ಪದ್ದತಿ ಮೆಚ್ಚಿ, ೨೦ ವಿವಿಧ ರಾಷ್ಟ್ರದ ವಿದೇಶಿಗರು, ದೇಶಿಯರು ಚಿಕಿತ್ಸೆಗೆ ಬರುತ್ತಿದ್ದು, ಚಿತ್ರಕೂಟದಲ್ಲಿ ಚಿಕಿತ್ಸೆಗೆ ಅವಕಾಶ ಸಿಗಬೇಕಿದ್ದರೆ ಮೂರು ತಿಂಗಳು ಮುನ್ನಾ ಬುಕ್ಕಿಂಗ್ ಮಾಡಿಕೊಳ್ಳಬೇಕಾಗಿತ್ತದೆ ಎಂದರು.
ಆರಾಧ್ಯಾ ಬಾಯಿರಿ ಪ್ರಾರ್ಥಿಸಿದರು. ಚಿತ್ರಕೂಟ ಚಿಕಿತ್ಸಾಲಯ ಸಹಾಯಕ ವೈದ್ಯಾಧಿಕಾರಿ ಡಾ. ಅನುಲೇಖಾ ಬಾಯಿರಿ ನಿರೂಪಿಸಿದರು.